ಬೆಂಗಳೂರು:ನಾನು ಮುಖ್ಯಮಂತ್ರಿ ಅಲ್ಲ ಹಾಗಾಗಿ ಹೆಚ್ಚಿನ ಜವಾಬ್ದಾರಿಯಿಲ್ಲ ಅದಕ್ಕಾಗಿ ಹೆಚ್ಚು ಮಾತನಾಡುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ನಗರದ ಮೆಜೆಸ್ಟಿಕ್ ಬಳಿಯ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ತಾವು ಮೌನವಾಗಿಲ್ಲ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರು ರಾಜಕೀಯವಾಗಿ ಮೌನವಾಗಿದ್ದಾರೆ ಎಂಬ ಚರ್ಚೆಗೆ ಪ್ರತಿಕ್ರಿಯಿಸಿದ ಅವರು, ತಾವು ಮೌನವಾಗಿಲ್ಲ. ನಿನ್ನೆ ವಿಧಾನಸಭೆ ಅಧಿವೇಶನದಲ್ಲೂ ಭಾಗಿಯಾಗಿದ್ದೇನೆ. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದೇನೆ. ನಾನು ಎಲ್ಲಿಯೂ ಸೈಲೆಂಟ್ ಆಗಿಲ್ಲ ಎಂದು ಹೇಳಿದರು.
ಮಹಿಳೆಯರಿಗೆ ಸಚಿವ ಸ್ಥಾನ ನೀಡಿಲ್ಲ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬಿಜೆಪಿಯವರಿಗೆ ಕಾಂಗ್ರೆಸ್ ಪಕ್ಷವನ್ನು ಟೀಕಿಸಲು ಯಾವ ನೈತಿಕತೆಯಿದೆ? ಅವರ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಅವಕಾಶವನ್ನೇ ನೀಡಿರಲಿಲ್ಲ ಎಂದು ತಿರುಗೇಟು ನೀಡಿದರು.
ಸಂಪುಟದಲ್ಲಿ ಮಹಿಳೆಯರಿಗೆ ಸಚಿವ ಸ್ಥಾನ ದೊರೆಯಲಿದೆ. ಶಾಸಕ ಬಸವರಾಜ ಶಿವಣ್ಣನವರಿಗೆ ಸಚಿವ ಸ್ಥಾನ ನೀಡುವ ವಿಚಾರವನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಅಹಿಂದ ಚಳವಳಿ ಕುರಿತು ಮಾತನಾಡಿದ ಅವರು, ಅಹಿಂದ ಚಳವಳಿ ನಡೆಯುತ್ತಿದೆ. ಹಿಂದುಳಿದ ಒಕ್ಕೂಟದ ವತಿಯಿಂದ 25ನೇ ವರ್ಷದ ಕಾರ್ಯಕ್ರಮ ನಡೆಯಲಿದ್ದು, ತಾವು ಅದರಲ್ಲಿ ಭಾಗವಹಿಸುವುದಾಗಿ ಹೇಳಿದರು.
ಈ ವೇಳೆ ಸಿದ್ದರಾಮಯ್ಯ ಅವರೊಂದಿಗೆ ನಸೀರ್ ಅಹಮದ್ ಕಾಣಿಸಿಕೊಂಡಿದ್ದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ದಾವಣಗೆರೆ ಉಪಚುನಾವಣೆ ಸಂದರ್ಭದಲ್ಲಿ ಅಲ್ಪಸಂಖ್ಯಾತ ಸಮುದಾಯದಲ್ಲಿ ಗೊಂದಲಕ್ಕೆ ಕಾರಣರಾದರು ಎಂಬ ಆರೋಪದ ಹಿನ್ನೆಲೆಯಲ್ಲಿ ನಸೀರ್ ಅಹಮದ್ ಅವರನ್ನು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಮುಕ್ತಗೊಳಿಸಲಾಗಿತ್ತು.
ಆ ಬಳಿಕ ಸಿದ್ದರಾಮಯ್ಯ ಅವರೊಂದಿಗೆ ನಸೀರ್ ಕಾಣಿಸಿಕೊಂಡಿರಲಿಲ್ಲ. ಇದೀಗ ಮತ್ತೆ ಮಾಜಿ ಮುಖ್ಯಮಂತ್ರಿಯವರೊಂದಿಗೆ ಕಾಣಿಸಿಕೊಂಡಿರುವುದು ಗಮನ ಸೆಳೆಯಿತು. ಇತ್ತೀಚೆಗೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಸೀರ್ ಮುಖ್ಯಮಂತ್ರಿಯವರ ಪಕ್ಕದಲ್ಲಿ ಆಸೀನರಾಗುವ ಮೂಲಕ ಗಮನ ಸೆಳೆದಿದ್ದರು.



