ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಆಡಳಿತದ ಮುಖ್ಯಸ್ಥರಾಗಿ 8931 ದಿನ ಪೂರೈಸಿ ಅತ್ಯಂತ ದೀರ್ಘಾವಧಿಯ ಕಾಲ ಆಡಳಿತ ನಡೆಸಿದ ಮೊದಲಿಗ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ಮುಖ್ಯಮಂತ್ರಿ ಮತ್ತು ಪ್ರಧಾನಿಯಾಗಿ ಮೋದಿ ಸರ್ಕಾರದ ಚುಕ್ಕಾಣಿಯನ್ನು ಹಿಡಿದು ಭಾನುವಾರಕ್ಕೆ 8931 ದಿನ ಪೂರೈಸಿದ್ದಾರೆ. ಈ ಮೂಲಕ ಸಿಕ್ಕಿಂನ ಮುಖ್ಯಮಂತ್ರಿ ಪವನ್ ಕುಮಾರ್ ಚಾಮ್ಲಿಂಗ್ ಅವರ 8930 ದಿನಗಳ ಅಧಿಕಾರ ನಡೆಸಿದ ದಾಖಲೆ ಮುರಿದರು.
ಮೋದಿ ಅವರ ಅಧಿಕಾರಾವಧಿಯನ್ನು ಎರಡು ಹಂತದಲ್ಲಿ ವಿಂಗಡಿಸಲಾಗಿದೆ. ಗುಜರಾತ್ ಮುಖ್ಯಮಂತ್ರಿ ಹಾಗೂ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ದಿನಗಳನ್ನು ಒಟ್ಟುಗೂಡಿಸಲಾಗಿದೆ. ಸರ್ಕಾರದ ಮುಖ್ಯಸ್ಥರಾಗಿ 25ನೇ ವರ್ಷಕ್ಕೆ ಅವರು ಕಾಲಿಟ್ಟಿರುವುದು ಮತ್ತೊಂದು ವಿಶೇಷ. ಈ ಮೈಲಿಗಲ್ಲನ್ನು ಅಪರೂಪದ ಮತ್ತು ಮಹತ್ವದ ಸಾಧನೆ ಎಂದು ಪರಿಗಣಿಸಲಾಗಿದೆ.
ನರೇಂದ್ರ ಮೋದಿ ಅವರ ದಾಖಲೆಗಳು: ಪ್ರಧಾನಿ ನರೇಂದ್ರ ಮೋದಿ ತಮ್ಮ ರಾಜಕೀಯ ಜೀವನದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಸ್ವಾತಂತ್ರ್ಯದ ನಂತರ ಜನಿಸಿ ಅತಿ ದೀರ್ಘ ಕಾಲ ದೇಶದ ಪ್ರಧಾನಿ ಹುದ್ದೆ ಅಲಂಕರಿಸಿದ ಮೊದಲಿಗ ಎಂಬ ದಾಖಲೆಯನ್ನೂ ಹೊಂದಿದ್ದಾರೆ. 2014, 2019 ಮತ್ತು 2024 ರಲ್ಲಿ ಸತತ ಮೂರು ಲೋಕಸಭಾ ಚುನಾವಣೆಗಳಲ್ಲಿ ಅವರು ಗೆಲುವು ಸಾಧಿಸಿದ್ದಾರೆ.
2001ರ ಅಕ್ಟೋಬರ್ 7 ರಂದು ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಅಂದಿನಿಂದ 2014ರ ಮೇ 21ರವರೆಗೆ ಆ ಹುದ್ದೆಯಲ್ಲಿದ್ದರು. 13 ವರ್ಷಗಳಿಗೂ ಹೆಚ್ಚು ಕಾಲ ರಾಜ್ಯವನ್ನು ಮುನ್ನಡೆಸಿ, ನಂತರ ರಾಷ್ಟ್ರ ರಾಜಕಾರಣಕ್ಕೆ ಅಡಿ ಇಟ್ಟರು. 2014ರ ಮೇ 26 ರಂದು ಅವರು ದೇಶದ 14ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಪೂರ್ಣ ಬಹುಮತ ಸರ್ಕಾರದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ: 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಅಭೂತಪೂರ್ವ ಗೆಲುವು ಸಾಧಿಸಿತು. ಇದರಲ್ಲಿ ಬಿಜೆಪಿ ಮಾತ್ರವೇ ಪೂರ್ಣ ಬಹುಮತ ಸಾಧಿಸಿತ್ತು. ಇದರಿಂದ, ಲೋಕಸಭೆಯಲ್ಲಿ ಪೂರ್ಣ ಬಹುಮತ ಪಡೆದು ಸರ್ಕಾರ ರಚಿಸಿದ ಮೊದಲ ಕಾಂಗ್ರೆಸ್ಸೇತರ ನಾಯಕ ಎಂಬ ಹೆಗ್ಗಳಿಕೆ ಪ್ರಧಾನಿ ನರೇಂದ್ರ ಮೋದಿ ಅವರದ್ದಾಗಿದೆ.
ನಂತರ ಅವರು ಎರಡು ಅವಧಿಗಳನ್ನು ಪೂರ್ಣಗೊಳಿಸಿ, ಸತತ ಮೂರನೇ ಅವಧಿಗೆ ಪ್ರಧಾನಿಯಾದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ ಎಂಬ ಖ್ಯಾತಿಯನ್ನೂ ಪಡೆದರು. ಈ ಮೈಲಿಗಲ್ಲಿನ ಜೊತೆಗೆ ಅವರು ಜನಪ್ರಿಯತೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ವಿಶ್ವದ ಮೊದಲ ನಾಯಕ ಎಂಬ ದಾಖಲೆಯನ್ನೂ ಹೊಂದಿದ್ದಾರೆ.



