ತಮಿಳುನಾಡು ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ದಿನಕ್ಕೊಂದು ರಾಜಕೀಯ ತಿರುವು ಪಡೆಯುತ್ತಿದ್ದು, ಇದೀಗ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷಕೆ. ಅಣ್ಣಾಮಲೈ ಚುನಾವಣೆ ಎದುರಿಸದೇ ಇರಲು ನಿರ್ಧರಿಸಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಕೇವಲ 27 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದರೆ, ಎಐಎಡಿಎಂಕೆ 169 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಇದರಿಂದ ಅಸಮಾಧಾನಗೊಂಡಿರುವ ಅಣ್ಣಾಮಲೈ ಚುನಾವಣೆಗೆ ಸ್ಪರ್ಧಿಸದೇ ಪಕ್ಷದ ವಿರುದ್ಧವೇ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.
ತಮಿಳುನಾಡು ವಿಧಾನಸಭೆಯ 234 ಸ್ಥಾನಗಳಿಗೆ ಏಪ್ರಿಲ್ 9ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಚುನಾವಣೆಗೆ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಅಣ್ಣಾಮಲೈ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.
ಬಿಜೆಪಿ ಕಿನಾತುಕಡವು ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಸ್ಪಷ್ಟ ಗೆಲುವು ಸಾಧಿಸುವ ಸಾಧ್ಯತೆ ಇದೆ. ಇಂತಹ ಕ್ಷೇತ್ರಗಳನ್ನು ಎಐಎಡಿಎಂಕೆಗೆ ಬಿಟ್ಟುಕೊಟ್ಟಿರುವುದು ಸರಿಯಲ್ಲ. ಮೈತ್ರಿಯಿಂದ ಪಕ್ಷ ಸಂಘಟನೆಗೆ ಕಷ್ಟವಾಗಲಿದೆ ಎಂದು ಅವರು ಹೈಕಮಾಂಡ್ ಗೆ ಪತ್ರ ಬರೆದಿದ್ದಾರೆ.
ಮೈತ್ರಿ ನಿರ್ಧಾರ ಪ್ರಕಟದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದೇ ದೂರ ಉಳಿಯಲು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.



