ಬೆಂಗಳೂರು: ದಾವಣಗೆರೆ ಉಪಚುನಾವಣೆಗೆ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಾದಿಕ್ ಪೈಲ್ವಾನ್ ಅವರ ಮನವೊಲಿಸುವಲ್ಲಿ ಸಿಎಂ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಈ ಮೂಲಕ ಶ್ಯಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಶಾಮನೂರ್ ಹಾದಿ ಸುಗಮಗೊಂಡಂತಾಗಿದೆ.
ಬೆಂಗಳೂರಿನ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಾದಿಕ್ ಪೈಲ್ವಾನ್ ತಾವು ಕಣದಿಂದ ಹಿಂದೆ ಸರಿದಿರುವುದಾಗಿ ಘೋಷಿಸಿದ್ದಾರೆ. ಹೀಗಾಗಿ ದಾವಣಗೆರೆ ಮತ್ತು ಬಾಗಲಕೋಟೆ ಎರಡೂ ಕಡೆ ಕಾಂಗ್ರೆಸ್ ಗೆಲ್ಲಲಿದೆ ಎಂಬ ವಿಶ್ವಾಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಕ್ತಪಡಿಸಿದರು.
ಸಾದಿಕ್ ಪೈಲ್ವಾನ್ ನನಗೆ ಬಹಳ ವರ್ಷಗಳಿಂದ ಪರಿಚಯದವರಾಗಿದ್ದಾರೆ. ಮೈಸೂರಿನ ಕುಸ್ತಿ ಅಖಾಡಗಳಲ್ಲಿ ಅವರು ಪಾಲ್ಗೊಂಡಾಗ ಭೇಟಿಯಾಗುತ್ತಿದ್ದೆ. ಅಭ್ಯರ್ಥಿಯಾಗಬೇಕೆಂದು ಬಯಸುವುದು ತಪ್ಪೇನಿಲ್ಲ. ನಿನ್ನೆ 11 ಜನ ನಾಮಪತ್ರ ಹಿಂಪಡೆದಿದ್ದಾರೆ. ಪಕ್ಷದ ಕೋರಿಕೆ ಮೇರೆಗೆ ಸಾದಿಕ್ ಕಣದಿಂದ ಹಿಂದೆ ಸರಿದಿದ್ದಾರೆ ಎಂದರು.
ಶಾಸಕ ರಿಜ್ವಾನ್ ಅರ್ಷದ್, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ಅವರು ದಾವಣಗೆರೆಗೆ ಭೇಟಿ ನೀಡಿದ್ದರು. ಅವರು ತಲುಪುವುದು ತಡವಾದ್ದರಿಂದ ನಾಮ ಪತ್ರ ಸಲ್ಲಿಸುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ವಿಧಾನಪರಿಷತ್ ನಲ್ಲಿ ಉತ್ತರ ನೀಡಬೇಕಿದ್ದರಿಂದ ನಾನು ಖುದ್ದು ಭೇಟಿ ನೀಡಲಾಗಿಲ್ಲ ಎಂದರು.
ಪಕ್ಷದ ಕಟ್ಟಾಳು; ನಿಷ್ಠಾವಂತ ಕಾರ್ಯಕರ್ತರು
ಸಾದಿಕ್ ಪೈಲ್ವಾನ್ ಅವರು ಕಾಂಗ್ರೆಸ್ ನಲ್ಲಿ ಸುಮಾರು 40 ವರ್ಷಗಳಿಂದ ಇದ್ದು, ಪಕ್ಷದ ಕಟ್ಟಾಳು, . ದಾವಣಗೆರೆಯಲ್ಲಿ 70 ಸಾವಿರ ಮುಸ್ಲಿಂ ಮತದಾರರಿದ್ದು, ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಹೈಕಮಾಂಡ್ ಇದನ್ನು ಪರಿಶೀಲಿಸಿ, ಮೃತರಾದವರ ಕುಟುಂಬದವರಿಗೆ ಟಿಕೆಟ್ ನೀಡುವ ಪದ್ಧತಿಯಂತೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರ ಪುತ್ರ ಸಮರ್ಥ್ ಅವರಿಗೆ ಟಿಕೆಟ್ ನೀಡಲಾಗಿದೆ ಎಂದರು.



