ಇರಾನ್ ಮೇಲೆ ಅಮೆರಿಕ ನಡೆಸುತ್ತಿರುವ ಯುದ್ಧಕ್ಕಾಗಿ ಅಮೆರಿಕ ಪ್ರತೀ ದಿನ 8455 ಕೋಟಿ ರೂ. ವೆಚ್ಚ ಮಾಡುತ್ತಿದೆ. ಇದುವರೆಗೆ ಒಟ್ಟಾರೆ 2.63 ಲಕ್ಷ ಕೋಟಿ ರೂ. ವೆಚ್ಚ ಮಾಡಿದೆ ಎಂದು ವರದಿ ಹೇಳಿದೆ.
ಇರಾನ್ ಮೇಲೆ ಅಮೆರಿಕ ಯುದ್ಧ ಸಾರಿ 31 ದಿನಗಳು ಕಳೆದಿವೆ. ಯುದ್ಧದ ತೀವ್ರತೆಯನ್ನು ಕೆಲವು ದಿನಗಳ ಮಟ್ಟಿಗೆ ಅಮೆರಿಕ ಕಡಿಮೆ ಮಾಡಿದ್ದರೂ ಅದರ ವೆಚ್ಚ ಭಾರೀ ಪ್ರಮಾಣದಲ್ಲಿದೆ.
ಇರಾನ್ ವಿರುದ್ಧದ ಯುದ್ದಕ್ಕಾಗಿ ಅಮೆರಿಕ ಪ್ರತೀದಿನ 890 ದಶಲಕ್ಷ ಡಾಲರ್ ಅಂದರೆ ಸುಮಾರು 8455 ಕೋಟಿ ರೂ. ವೆಚ್ಚ ಮಾಡುತ್ತಿದೆ. ಅಂದರೆ ಪ್ರತೀ ಸೆಕೆಂಡ್ ಗೆ ಆಗುತ್ತಿರುವ ಖರ್ಚು 9.8 ಲಕ್ಷ ರೂಪಾಯಿಗಳು!
ಸ್ಟಾಕ್ ಹೋಂ ಇಂಟರ್ ನ್ಯಾಷನಲ್ ಪೀಸ್ ರಿಸರ್ಚ್ ಸೆಂಟರ್ ಸಂಸ್ಥೆ ಯುದ್ಧದ ಖರ್ಚು ವೆಚ್ಚಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಬಿಡುಗಡೆ ಮಾಡಿದೆ.
ವೆಚ್ಚದಲ್ಲಿ ಬಹುತೇಕ ಭಾಗ ಕ್ಷಿಪಣಿಗಳ ಬಳಕೆಗೆ ಹೋಗುತ್ತಿದ್ದು, ವೆಚ್ಚದಲ್ಲಿ ಶೇ.೨೭ರಷ್ಟು ಪಾಲು ಅಂದರೆ 245 ದಶಲಕ್ಷ ಡಾಲರ್ (2375.5 ಕೋಟಿ ರೂ.) ಕ್ಷಿಪಣಿಗಳ ಬಳಕೆಗೆ ಹೋಗುತ್ತಿದೆ. ನೌಕಾಪಡೆ ದಾಳಿಗೆ 155 ದಶಲಕ್ಷ ಡಾಲರ್ 1472.5 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.
ಥಾಡ್, ಪೇಟ್ರಿಯಾಟ್ ಬ್ಯಾಟರಿಸ್ ಮುಂತಾದ ದಾಳಿ ನಿಗ್ರಹ ತಂತ್ರಜ್ಞಾನಗಳಿಗೆ 95 ದಶಲಕ್ಷ ಡಾಲರ್ ಅಂದರೆ ಸುಮಾರು 902.5 ಕೋಟಿ ರೂ. ಬಳಕೆಯಾಗುತ್ತಿದೆ. ಗುಪ್ತಚರ ಮಾಹಿತಿ ಸಂಗ್ರಹಕ್ಕಾಗಿ 427.5 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ. ಇದರ ನಡುವೆ ಸರಕು ಸಾಗಾಣೆಯಂತಹ ಸಣ್ಣಪುಟ್ಟ ಕೆಲಸಗಳಿಗೆ ಪ್ರತೀದಿನ 30 ದಶಲಕ್ಷ ಡಾಲರ್ (ಸುಮಾರು 245 ಕೋಟಿ ರೂ.) ಬಳಸಲಾಗುತ್ತಿದೆ.



