ಚೈತ್ರಾ ಮಾಸದ ಕೊನೆಯ ದಿನವಾದ ಸೋಮವಾರ ದೇವರ ದರ್ಶನಕ್ಕೆ ತೆರಳಿದ್ದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 8 ಮಂದಿ ಮಹಿಳಾ ಭಕ್ತರು ಅಸುನೀಗಿದ ಘಟನೆ ಬಿಹಾರದ ನಳಂದದ ಶೀತ್ಲಾ ದೇವಸ್ಥಾನದಲ್ಲಿ ಸಂಭವಿಸಿದೆ.
ಚೈತ್ರ ಮಾಸದ ಕೊನೆಯ ದಿನವಾದ ಕೊನೆಯ ದಿನದ ವಿಶೇಷ ಪೂಜೆಗೆ ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರ ನಡುವೆ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ದುರಂತ ಸಂಭವಿಸಿದೆ. 8 ಮಂದಿ ಸ್ಥಳದಲ್ಲೇ ಅಸುನೀಗಿದರೆ, ಹಲವಾರು ಮಂದಿ ಗಾಯಗೊಂಡಿದ್ದಾರೆ.
ಘಟನೆ ಮಾಹಿತಿ ಆಧಾರದ ಮೇಲೆ ಪೊಲೀಸರು ಮತ್ತು ಸ್ಥಳೀಯರು ಸ್ಥಳಕ್ಕೆ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಇದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ದೇವಾಲಯದ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದಾಗಿ ಈ ಘಟನೆ ನಡೆದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ವರದಿಯ ಬೆನ್ನಲ್ಲೇ ದೀಪ್‌ನಗರ ಪೊಲೀಸ್ ಠಾಣೆಯ ತಂಡ, ಸದರ್ ಡಿಎಸ್‌ಪಿ ಮತ್ತು ಎಸ್‌ಡಿಎಂ ತಕ್ಷಣ ಸ್ಥಳಕ್ಕೆ ಆಗಮಿಸಿದ್ದು, ತನಿಖೆಗೆ ಮುಂದಾಗಿದ್ದಾರೆ.



