Thursday, May 28, 2026
Google search engine
Homeರಾಜ್ಯಕೇಂದ್ರಕ್ಕಿಂತ ರಾಜ್ಯದ ಆರ್ಥಿಕ ಸ್ಥಿತಿ ಚೆನ್ನಾಗಿದೆ: ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

ಕೇಂದ್ರಕ್ಕಿಂತ ರಾಜ್ಯದ ಆರ್ಥಿಕ ಸ್ಥಿತಿ ಚೆನ್ನಾಗಿದೆ: ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

ದಾವಣಗೆರೆ: ಜಿಎಸ್ ಟಿ ಸಂಗ್ರಹದಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿರುವ ಕರ್ನಾಟಕದ ಆರ್ಥಿಕ ಸ್ಥಿತಿ ಸುಭದ್ರವಾಗಿದೆ. ದೇಶದ ಆರ್ಥಿಕ ಸ್ಥಿತಿಗಿಂತ ರಾಜ್ಯದ ಸ್ಥಿತಿ ಉತ್ತಮವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ನಾಗನೂರು, ಶರಮಗೊಂಡನಳ್ಳಿ, ತುರ್ಚಘಟ್ಟ, ಹದಡಿ ಮುಂತಾದ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪರ ಬುಧವಾರ  ರೋಡ್ ಶೋ ನಡೆಸಿ ಮತಯಾಚಿಸಿ ಅವರು ಮಾತನಾಡಿದರು.

ಕೇಂದ್ರ ಬಜೆಟ್ ಗಿಂತ ರಾಜ್ಯದ ಬಜೆಟ್ ಉತ್ತಮವಾಗಿದ್ದು, ಬಿಜೆಪಿಯವರು ಕೇವಲ ರಾಜಕೀಯಕ್ಕಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ರಾಜ್ಯದ ಆರ್ಥಿಕ ಸ್ಥಿತಿಯ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂದು ಕೇಳಿದ್ದಾರೆ. ಅಧಿವೇಶನದಲ್ಲಿ ಬಜೆಟ್ ನ ಬಗ್ಗೆ ವಿಸ್ತೃತ ಚರ್ಚೆಗಳಾಗಿದ್ದು, ಈಗಾಗಲೇ ಸುದೀರ್ಘ ಉತ್ತರವನ್ನೂ ನೀಡಲಾಗಿದೆ. ನಮ್ಮ ಬಜೆಟ್ ಶ್ವೇತಪತ್ರ ಎಂದು ಅವರು ತಿರುಗೇಟು ನೀಡಿದರು.

ದೇಶದ ಜಿಡಿಪಿಯು 7.14 ರಷ್ಟಿದ್ದರೆ, ರಾಜ್ಯದ ಜಿಡಿಪಿ 8.1 ರಷ್ಟಿದೆ. ರಾಜ್ಯದ ಬಜೆಟ್ನ ಗಾತ್ರ ಈ ಬಾರಿ ಕಳೆದ ವರ್ಷಕ್ಕಿಂತ 9.4 ರಷ್ಟು  ಹೆಚ್ಚಿದೆ. ಕೇಂದ್ರ ಬಜೆಟ್ ಗಿಂತ ಕರ್ನಾಟಕದ ಬಜೆಟ್ ಉತ್ತಮವಾಗಿದೆ. ರಾಜ್ಯ ಜಿಎಸ್ ಟಿ ಸಂಗ್ರಹಣೆಯಲ್ಲಿ ದೇಶಕ್ಕೆ ಎರಡನೇ ಸ್ಥಾನದಲ್ಲಿದೆ, ಬಂಡವಾಳ ಹೂಡಿಕೆಯಲ್ಲಿಯೂ ರಾಜ್ಯ 2 ನೇ ಸ್ಥಾನದಲ್ಲಿದೆ. ಆದಾಗ್ಯೂ ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ ಎಂದು ಬಿಜೆಪಿಯವರು ಕೇವಲ ರಾಜಕೀಯಕ್ಕಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.

ರಾಜ್ಯದ ಆರ್ಥಿಕ ಸ್ಥಿತಿ ಸುಭದ್ರವಾಗಿದೆ

ಎಲ್ ಪಿ ಜಿ  ಸಿಲಿಂಡರ್ ದರ 414 ರೂ. ಇದ್ದದ್ದು , ಪ್ರಧಾನಿ ಮೋದಿ ಬಂದ ನಂತರ ಈಗ ಸುಮಾರು 1 ಸಾವಿರವಾಗಿದೆ. ಪೆಟ್ರೋಲ್, ಡೀಸೆಲ್ ದರವನ್ನೂ ಕೇಂದ್ರ  ಸರ್ಕಾರ ಹೆಚ್ಚಿಸಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಬೆಲೆಏರಿಕೆಯನ್ನು ಹೋಲಿಸಿದರೆ, ರಾಜ್ಯದಲ್ಲಿ ಗಣನೀಯವಾಗಿ ಬೆಲೆಗಳು ಕಡಿಮಿಯಿದೆ. ಆದ್ದರಿಂದ ಕರ್ನಾಟಕದ ಹಣಕಾಸಿನ ಸ್ಥಿತಿ ಸುಭದ್ರವಾಗಿದ್ದು, ಬಿಜೆಪಿಯವರು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ ಎಂದರು.

ರೂಪಾಯಿ ಮೌಲ್ಯ ಕುಸಿತ

ಪ್ರಧಾನಿ ಮೋದಿಯವರ ಅಧಿಕಾರಾವಧಿಯಲ್ಲಿ ಡಾಲರ್ ಬೆಲೆ ಹೆಚ್ಚುತ್ತಿದ್ದು, ರೂಪಾಯಿಯ ಮೌಲ್ಯ ಕುಸಿಯುತ್ತಿದೆ. ಅವರು ನೀಡಿದ ಭರವಸೆಗಳನ್ನು ಈಡೇರಿಸಲಿಲ್ಲ. ಅವರ ಅಚ್ಛೇ ದಿನಗಳು ಬರಲೇ ಇಲ್ಲ. ರೈತರ ಆದಾಯ ದುಪ್ಪಟ್ಟು, 2 ಕೋಟಿ ಉದ್ಯೋಗ, 15 ಲಕ್ಷ ಖಾತೆಗೆ ಹಣ ಎಂದಿದ್ದರೂ, ಒಂದು ಭರವಸೆಯನ್ನು ಈಡೇರಿಸಲಿಲ್ಲ ಎಂದರು.

ಬಿಜೆಪಿಯಲ್ಲಿ ಇಲ್ಲವೇ ಕುಟುಂಬ ರಾಜಕಾರಣ?

ಕಾಂಗ್ರೆಸ್ ನಲ್ಲಿ ಕುಟುಂಬ ರಾಜಕಾರಣ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಆದರೆ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಕುಮಾರಸ್ವಾಮಿ, ದೇವೇಗೌಡ‌ ಅವರ ಮಕ್ಕಳು, ಮೊಮ್ಮಕ್ಕಳು ಚುನಾವಣೆಗೆ ಸ್ಪರ್ಧಿಸುತ್ತಿಲ್ಲವೇ ? ಅದು ಕುಟುಂಬ ರಾಜಕಾರಣ ಅಲ್ಲವೇ ಎಂದು ಪ್ರಶ್ನಿಸಿದರು.

ಸಮರ್ಥ್ ಅತ್ಯಂತ ವಿದ್ಯಾವಂತ ಮತ್ತು ರಾಜಕಾರಣದ ಎಲ್ಲ ಅರ್ಹತೆಗಳಿರುವ ಸಮರ್ಥ ಅಭ್ಯರ್ಥಿ. ಇವರು ಗೆದ್ದು ನಿಮ್ಮ ಪರವಾಗಿ ಕೆಲಸ ಮಾಡುತ್ತಾರೆ. ಎಲ್ಲಾ ಜನಪರ ಗುಣಗಳು ಸಮರ್ಥ್ ಅವರಲ್ಲಿದೆ ಎಂದರು.‌

ದಾವಣಗೆರೆಗೆ ಶಾಮನೂರು ಕೊಡುಗೆ ಸಾಕಷ್ಟಿದೆ. ದಾವಣಗೆರೆ ದಕ್ಷಿಣದಲ್ಲಿ ಸಮರ್ಥ್ ಗೆಲ್ಲುತ್ತಾರೆ. ಗ್ಯಾರಂಟಿ ಯೋಜನೆಗಳಿಗೆ 1.43 ಲಕ್ಷ ಕೋಟಿ ರೂ. ಹಣ ಖರ್ಚು ಮಾಡಿದ್ದೇವೆ.  ಸಮರ್ಥ ಶಾಮನೂರು ಗೆದ್ದರೆ ನನಗೆ ಶಕ್ತಿ ಬರುತ್ತದೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments