Thursday, May 14, 2026
Google search engine
Homeರಾಜಕೀಯಉಪ ಚುನಾವಣೆಯಲ್ಲಿ ಸೋಲು ನಿಶ್ಚಿತ ಎಂದು ಸಿಎಂಗೆ ಗೊತ್ತು: ಬಿಎಸ್ ಯಡಿಯೂರಪ್ಪ

ಉಪ ಚುನಾವಣೆಯಲ್ಲಿ ಸೋಲು ನಿಶ್ಚಿತ ಎಂದು ಸಿಎಂಗೆ ಗೊತ್ತು: ಬಿಎಸ್ ಯಡಿಯೂರಪ್ಪ

ಬಾಗಲಕೋಟೆ: ಈ ಬಾರಿಯ ಉಪ ಚುನಾವಣೆಯಲ್ಲಿ ಸೋಲು ನಿಶ್ಚಿತ ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವರಿಕೆ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಇಲ್ಲಿಗೆ ಬಂದು ವಾರಗಟ್ಟಲೆ ಉಳಿದು ಪ್ರಚಾರ ಮಾಡುತ್ತಿದ್ದಾರೆ. ಇಲ್ಲೇ ಕ್ಯಾಂಪ್ ಹೂಡಿದ್ದಾರೆ. ಅವರ ಪಕ್ಷದ ಅಭ್ಯರ್ಥಿ ಅವರದೇ ಸಮುದಾಯದವರು. ಅವರನ್ನು ಗೆಲ್ಲಿಸಲೇ ಬೇಕು ಎಂಬ ಒಂದೇ ಕಾರಣದಿಂದ ಇಲ್ಲೇ ಠಿಕಾಣಿ ಹೂಡಿದ್ದಾರೆ ಎಂದರು.

ಕಾಂಗ್ರೆಸ್‍ಗೆ ಸೋಲು ಖಂಡಿತ ಎಂಬುದು ಎಲ್ಲರಿಗೂ ತಿಳಿದಿದೆ. ಬಾಗಲಕೋಟೆಯಲ್ಲಿ ಬಿಜೆಪಿಯ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರೇ ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ನುಡಿದರು.

ಸಿದ್ದರಾಮಯ್ಯ ಅವರೇ ಜಾತಿ ವಿಷಬೀಜ ಬಿತ್ತಿ ರಾಜಕಾರಣ ಮಾಡುವುದನ್ನು ಈಗಲಾದರೂ ಬಿಡಿ. ಸರ್ಕಾರದ ಖಜಾನೆಯನ್ನು ಲೂಟಿ ಮಾಡಿ ಸದಾ ಒಂದಿಲ್ಲೊಂದು ಭ್ರಷ್ಟಾಚಾರದಲ್ಲಿ ತೊಡಗಿರುವ ಸರ್ಕಾರ ಇನ್ನಾದರೂ ಪ್ರಾಮಾಣಿಕವಾಗಿ ಜನರ ಒಳಿತಿಗಾಗಿ ಕೆಲಸ ಮಾಡಲಿ ಎಂದು ಆಗ್ರಹಿಸಿದರು.

ಬಾಗಲಕೋಟೆ ಮತ್ತು ದಾವಣಗೆರೆ ಎರಡೂ ಕಡೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ದೊಡ್ಡ ಅಂತರದಲ್ಲಿ ಗೆಲ್ಲಲಿದ್ದಾರೆ. ಬಿಜೆಪಿ ಮತ್ತು ನರೇಂದ್ರ ಮೋದಿಯವರ ಜನಪ್ರಿಯತೆಯನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ. ದೇಶದ ಜನರೂ ಮೋದಿ ಅವರ ಜೊತೆ ನಿಂತಿದ್ದಾರೆ. ಈ ಉಪ ಚುನಾವಣೆಯಲ್ಲೂ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸುವ ವಿಶ್ವಾಸ ಇದೆ ಎಂದರು.

ನಮ್ಮೆಲ್ಲ ಕಾರ್ಯಕರ್ತರು ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಹಳ್ಳಿ ಹಳ್ಳಿಗೆ ಹೋಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಜನ ಬೆಂಬಲ ನಿರೀಕ್ಷೆಗೂ ಮೀರಿ ಚೆನ್ನಾಗಿದೆ. ನಮ್ಮೊಂದಿಗೆ ಕೇಂದ್ರ ಸಚಿವರಾದ ಎಚ್.ಡಿ ಕುಮಾರಸ್ವಾಮಿ ಅವರು ಜೊತೆ ಪ್ರಚಾರಕ್ಕೆ ಬಂದಿರುವುದು ಹೆಮ್ಮೆಯ ಸಂಗತಿ. ಅವರ ಶಕ್ತಿಯೂ ನಮ್ಮ ಜೊತೆ ಸೇರಿದೆ ಎಂದು ಹೇಳಿದರು.

ಕಾಂಗ್ರೆಸ್‍ನವರು ಸೂಟ್ ಕೇಸ್‍ನಲ್ಲಿ ಹಣ ತಂದು ಇಲ್ಲಿ ಹಂಚಿ ಹಣದ ಬಲದಲ್ಲಿ, ಹೆಂಡದ ಬಲದಲ್ಲಿ ಮತ್ತು ತೋಳ್ಬಲದಲ್ಲಿ ಗೆಲ್ಲುತ್ತೇವೆ ಅಂದುಕೊಂಡಿದ್ದಾರೆ. ಆದರೆ ಹಾಗೆ ಆಗದು. ನಮ್ಮ ಪಕ್ಷದ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರಂತಹ ಪ್ರಾಮಾಣಿಕರೇ ಇಲ್ಲಿ ಗೆಲ್ಲುವುದು. ಹಣ ಮತ್ತು ಹೆಂಡ ಪ್ರಯೋಜನಕ್ಕೆ ಬರಲ್ಲ. ಅಧಿಕಾರ ಮದದಲ್ಲಿರುವ ಭ್ರಷ್ಟ ಕಾಂಗ್ರೆಸ್‍ಗೆ ಪಾಠ ಕಲಿಸುವ ತೀರ್ಮಾನವನ್ನು ಜನರೇ ಮಾಡಿದ್ದಾರೆ. ಎರಡೂ ಕಡೆಯ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಹಣೆ ಬರಹ ಗೊತ್ತಾಗಿದೆ. ಅವರು ಆಮಿಷಕ್ಕೆ ಬಗ್ಗುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments