Thursday, May 14, 2026
Google search engine
Homeದೇಶಕೇರಳ, ಅಸ್ಸಾಂ, ಪುದುಚೇರಿಯಲ್ಲಿ ಇಂದು ಮತದಾನ!

ಕೇರಳ, ಅಸ್ಸಾಂ, ಪುದುಚೇರಿಯಲ್ಲಿ ಇಂದು ಮತದಾನ!

ಹೈದರಾಬಾದ್: ಕೇರಳ, ಅಸ್ಸಾಂ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಒಂದೇ ಹಂತದಲ್ಲಿ ನಾಳೆ ಮತದಾನ ನಡೆಯಲಿದೆ.

ಕರ್ನಾಟಕ, ನಾಗಾಲ್ಯಾಂಡ್ ಮತ್ತು ತ್ರಿಪುರಾದಲ್ಲಿ ಉಪಚುನಾವಣೆ ಸಹ ನಡೆಯುತ್ತಿದ್ದು, ನ್ಯಾಯಾಲಯದ ಆದೇಶದ ನಂತರ ಗೋವಾದಲ್ಲಿ ನಿಗದಿಯಾಗಿದ್ದ ಉಪಚುನಾವಣೆಯನ್ನು ರದ್ದುಗೊಳಿಸಲಾಗಿದೆ.

ಅಸ್ಸಾಂನಲ್ಲಿ ಬಿಜೆಪಿ-ಕಾಂಗ್ರೆಸ್​ ಪೈಪೋಟಿ: ಅಸ್ಸಾಂನ ಎಲ್ಲಾ 126 ವಿಧಾನಸಭಾ ಕ್ಷೇತ್ರಗಳಿಗೆ ನಾಳೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಬರುವ ಗುರಿ ಹೊಂದಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು 2016ರಲ್ಲಿ ಸೋತ ನಂತರ ಮತ್ತೆ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಮೈತ್ರಿಕೂಟದ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ರಾಜ್ಯದಲ್ಲಿ ಒಟ್ಟು 722 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್, ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಮತ್ತು ರೈಜೋರ್ ದಳ ನಾಯಕ ಅಖಿಲ್ ಗೊಗೊಯ್ ಸೇರಿದಂತೆ ಪ್ರಮುಖರು ಕಣದಲ್ಲಿದ್ದಾರೆ. 31,490 ಮತಗಟ್ಟೆಗಳಲ್ಲಿ ಸುಮಾರು 2.5 ಕೋಟಿ ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದಾರೆ.

ಕೇರಳದಲ್ಲಿ ಹ್ಯಾಟ್ರಿಕ್ ಬಾರಿಸುತ್ತಾ?

ಕೇರಳ ವಿಧಾನಸಭೆಯೂ ನಾಳೆ ಚುನಾವಣೆಗೆ ಸಜ್ಜಾಗಿದೆ. ಎಲ್ಲಾ 140 ಸ್ಥಾನಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಒಟ್ಟು 890 ಅಭ್ಯರ್ಥಿಗಳು ಕಣದಲ್ಲಿದ್ದು, 2.7 ಕೋಟಿಗೂ ಹೆಚ್ಚು ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದಾರೆ.

ಆಡಳಿತಾರೂಢ ಸಿಪಿಐ(ಎಂ) ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಮತ್ತು ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗದ (ಯುಡಿಎಫ್) ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸತತ ಮೂರನೇ ಅವಧಿಗೆ ಅಧಿಕಾರ ಹಿಡಿಯುವ ಗುರಿ ಹೊಂದಿದ್ದರೆ, ಯುಡಿಎಫ್ ಮತ್ತೆ ಅಧಿಕಾರಕ್ಕೆ ಬರುವ ನಿರೀಕ್ಷೆಯಿದೆ. ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ 30 ಸಾವಿರಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.

ಪುದುಚೇರಿ ವಿಧಾನಸಭಾ ಚುನಾವಣೆ

ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ, ಎಲ್ಲಾ 30 ವಿಧಾನಸಭಾ ಸ್ಥಾನಗಳಿಗೆ ನಾಳೆ ಮತದಾನ ನಡೆಯಲಿದೆ. ಮುಖ್ಯಮಂತ್ರಿ ಎನ್.ರಂಗಸಾಮಿ ಸೇರಿದಂತೆ ಒಟ್ಟು 294 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಅಖಿಲ ಭಾರತ ಎನ್‌ಆರ್ ಕಾಂಗ್ರೆಸ್ ನೇತೃತ್ವದ ಆಡಳಿತಾರೂಢ ಎನ್‌ಡಿಎ, ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟವನ್ನು ಎದುರಿಸುತ್ತಿದೆ. ಸುಮಾರು 9.5 ಲಕ್ಷ ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದಾರೆ. 1,000ಕ್ಕೂ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಇತರ ರಾಜ್ಯಗಳಲ್ಲಿ ಉಪಚುನಾವಣೆ: ಕರ್ನಾಟಕ, ನಾಗಾಲ್ಯಾಂಡ್ ಮತ್ತು ತ್ರಿಪುರಾದಲ್ಲಿ ಉಪಚುನಾವಣೆಗಳು ನಡೆಯಲಿವೆ. ಕರ್ನಾಟಕದಲ್ಲಿ, ಹಾಲಿ ಶಾಸಕರ ನಿಧನದ ನಂತರ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳಲ್ಲಿ ಮತದಾನವಾಗಲಿದೆ. ಆಡಳಿತಾರೂಢ ಕಾಂಗ್ರೆಸ್, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ದಿವಂಗತ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಪುತ್ರ ಸಮರ್ಥ್ ಶಾಮನೂರು ಮತ್ತು ಬಾಗಲಕೋಟೆಯಲ್ಲಿ ಉಮೇಶ್ ಮೇಟಿ ಅವರನ್ನು ಕಣಕ್ಕಿಳಿಸಿದ್ದರೆ, ಬಿಜೆಪಿ ಅಭ್ಯರ್ಥಿಗಳಾದ ಟಿ.ದಾಸಕರಿಯಪ್ಪ ಮತ್ತು ವೀರಭದ್ರಯ್ಯ ಚರಂತಿಮಠ ಅವರು ಎದುರಾಳಿಗಳಾಗಿದ್ದಾರೆ.

ಇನ್ನು, ನಾಗಾಲ್ಯಾಂಡ್‌ನ ಕೊರಿಡಾಂಗ್ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ. ಅಲ್ಲಿ ಹಾಲಿ ಬಿಜೆಪಿ ಶಾಸಕರೊಬ್ಬರ ನಿಧನದ ನಂತರ ಸ್ಥಾನ ತೆರವಾಗಿದ್ದು, ಉಪಚುನಾವಣೆ ನಡೆಯುತ್ತಿದೆ. ಆರು ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ತ್ರಿಪುರಾದ ಧರ್ಮನಗರ ಕ್ಷೇತ್ರವು ಉಪಚುನಾವಣೆ ಎದುರಿಸುತ್ತಿದೆ. ಹಾಲಿ ಶಾಸಕ ಮತ್ತು ವಿಧಾನಸಭಾ ಸ್ಪೀಕರ್ ನಿಧನದಿಂದ ಸ್ಥಾನ ತೆರವಾಗಿದ್ದು, ಬಿಜೆಪಿ, ಕಾಂಗ್ರೆಸ್ ಮತ್ತು ಸಿಪಿಐ(ಎಂ) ಅಭ್ಯರ್ಥಿಗಳನ್ನು ಒಳಗೊಂಡ ತ್ರಿಕೋನ ಸ್ಪರ್ಧೆ ನಿರೀಕ್ಷೆ ಇದೆ.

ಗೋವಾ ಉಪಚುನಾವಣೆ ರದ್ದು: ಗೋವಾದ ಪೋಂಡಾ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣಾ ಆಯೋಗ ಎಪ್ರಿಲ್​ 9ರಂದು ಉಪ ಚುನಾವಣೆ ಘೋಷಿಸಿತ್ತು. ಆದರೆ, ವಿಧಾನಸಭೆಯ ಅವಧಿಯೇ ಒಂದು ವರ್ಷಕ್ಕಿಂತ ಕಡಿಮೆ ಇರುವ ಕಾರಣ, ಈ ಉಪ ಚುನಾವಣೆ ಅನಗತ್ಯವಾದ್ದರಿಂದ ಸುಪ್ರೀಂ ಕೋರ್ಟ್​ ಅಧಿಸೂಚನೆಯನ್ನೇ ರದ್ದು ಮಾಡಿದ್ದು, ನಾಳಿನ ಮತದಾನವೂ ರದ್ದಾಗಿದೆ.

ಎರಡು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಮತ್ತು ಮೂರು ರಾಜ್ಯಗಳಲ್ಲಿ ನಡೆಯುವ ಉಪ ಚುನಾವಣೆಗಳ ಮತ ಎಣಿಕೆ ಮೇ 4ರಂದು ನಡೆಯಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments