Thursday, May 28, 2026
Google search engine
Homeರಾಜಕೀಯಬಿಜೆಪಿ ಜೊತೆ ಮೈತ್ರಿಗೆ ಕುಮಾರಸ್ವಾಮಿಗೆ ಅನುಮತಿ ಕೊಟ್ಟಿದ್ದೇ ನಾನು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸ್ಫೋಟಕ ಹೇಳಿಕೆ

ಬಿಜೆಪಿ ಜೊತೆ ಮೈತ್ರಿಗೆ ಕುಮಾರಸ್ವಾಮಿಗೆ ಅನುಮತಿ ಕೊಟ್ಟಿದ್ದೇ ನಾನು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸ್ಫೋಟಕ ಹೇಳಿಕೆ

ಬೆಂಗಳೂರು: ಅಹಿಂದ ನಾಯಕರು ಕುಮಾರಸ್ವಾಮಿ ಅವರ ಸರ್ಕಾರ ತೆಗೆದರು. ಹಾಗೆಯೇ ನಮ್ಮ ಪಕ್ಷವನ್ನು ಮುಗಿಸುವ ವ್ಯವಸ್ಥಿತ ಹುನ್ನಾರವನ್ನೂ ನಡೆಸಿದರು. ಇಂತಹ ಶಕ್ತಿಗಳಿಗೆ ಪಾಠ ಕಲಿಸಲೇಬೇಕೆಂದು ನಿರ್ಧರಿಸಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಕುಮಾರಸ್ವಾಮಿ ಅವರಿಗೆ ಸ್ವತಃ ನಾನೇ ಅನುಮತಿ ಕೊಟ್ಟೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ಬೆಂಗಳೂರು ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರೇಟರ್ ಬೆಂಗಳೂರು ಜೆಡಿಎಸ್ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಅವರು,  ಇವತ್ತು ಕೇಂದ್ರ ಮಂತ್ರಿಯಾಗಿ ಕುಮಾರಸ್ವಾಮಿ ಅವರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ರಾಜ್ಯ ಸರ್ಕಾರ ಸಹಕಾರ ಕೊಡುತ್ತಿಲ್ಲ. ಕುದುರೆಮುಖ ಕಂಪನಿ ಮತ್ತು ಹೆಚ್ಎಂಟಿ ವಿಚಾರವಾಗಿ ಅನಗತ್ಯ ತೊಂದರೆ ಕೊಡುತ್ತಿದ್ದಾರೆ. ರಾಜ್ಯದ ಹಿತದ ಬಗ್ಗೆ ಇವರು ರಾಜಕೀಯ ಮಾಡುತ್ತಿರುವುದು ಸರಿಯಲ್ಲ. ಕುಮಾರಸ್ವಾಮಿ ಅವರು ಅಂಜದೆ ತಮ್ಮ ಕೆಲಸಗಳನ್ನು ಮುಂದುವರಿಸಿದ್ದಾರೆ ಆರೋಪಿಸಿದರು.

ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಬಲಿಷ್ಠವಾಗಿದೆ. ನಿತೀಶ್ ಕುಮಾರ್ ಅವರಿಗೆ ನರೇಂದ್ರ ಮೋದಿ ಅವರು ಶಕ್ತಿ ತುಂಬಿದ್ದಾರೆ. ನಂಬಿಕೆ, ವಿಶ್ವಾಸದ ಮೇಲೆ ಅವರು ಕೆಲಸ ಮಾಡುತ್ತಿದ್ದಾರೆ. ಆದರೆ ನಮ್ಮ ಜೊತೆ ಕಾಂಗ್ರೆಸ್ ನಡೆದುಕೊಂಡ ರೀತಿಯನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದ ವಿಶ್ವಾಸ ದ್ರೋಹದಿಂದಲೇ ಜೆಡಿಎಸ್ ಪಕ್ಷ ಎನ್​ಡಿಎ ಮೈತ್ರಿಕೂಟ ಸೇರುವಂತಾಯಿತು ಎಂದು ಮಾಜಿ ಪ್ರಧಾನಿ ಹೇಳಿದರು.

ದರಿದ್ರ ನಾರಾಯಣ ರ್ಯಾಲಿಗೆ ಸಿದ್ದರಾಮಯ್ಯ ಬರಲಿಲ್ಲ

ನಮ್ಮದು ಕುಟುಂಬ ಪಕ್ಷವಲ್ಲ. ಈ ಪಕ್ಷದಿಂದ ಯಾರು ಯಾರು ಎತ್ತರಕ್ಕೆ ಬೆಳೆದಿದ್ದಾರೆ ಎಂಬುದನ್ನು ನಾನು ಇಲ್ಲಿ ಬಿಡಿಸಿ ಹೇಳುವುದಿಲ್ಲ. ಆದರೆ ಈ ರಾಜ್ಯದಲ್ಲಿ ಸಾಮಾಜಿಕ ನ್ಯಾಯ ಎಂಬುದಕ್ಕೆ ಶಕ್ತಿ ತುಂಬಿದವನು ನಾನು. ಇದರ ಬಗ್ಗೆ ಯಾವುದೇ ವೇದಿಕೆಯಲ್ಲಿ ಚರ್ಚೆ ನಡೆಸಲು ನಾನು ಸಿದ್ಧನಿದ್ದೇನೆ. ಒಬ್ಬ ಮುಸ್ಲಿಂ ವ್ಯಕ್ತಿಯನ್ನು ಚುನಾವಣೆಯಲ್ಲಿ ಗೆಲ್ಲಿಸಲು ದರಿದ್ರ ನಾರಾಯಣ ರ್ಯಾಲಿ ಮಾಡಿದೆವು. ಆ ಸಮಾವೇಶಕ್ಕೆ ಇವತ್ತಿನ ಅಹಿಂದ ನಾಯಕ ಸಿದ್ದರಾಮಯ್ಯ ಬರಲೇ ಇಲ್ಲ. ವೇದಿಕೆಯ ಕಾರ್ಯಕ್ರಮ ಮುಗಿಯುವ ಕೊನೆ ಹಂತದಲ್ಲಿ ಅವರು ಬಂದರು. ಇದು ಅವರಿಗಿರುವ ಸಾಮಾಜಿಕ ನ್ಯಾಯದ ಕುರಿತ ಬದ್ಧತೆ ಎಂದು ದೇವೇಗೌಡ ಕಿಡಿಕಾರಿದರು.

ನನ್ನ 60 ವರ್ಷಗಳ ರಾಜಕೀಯ ಜೀವನದಲ್ಲಿ ಕರ್ನಾಟಕದಲ್ಲಿ ಈಗ ಇರುವಷ್ಟು ಕೆಟ್ಟ ಸರ್ಕಾರವನ್ನು ನಾನೆಂದೂ ನೋಡಿಲ್ಲ. ಆದರೂ ಮುಂದೆಯೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಮೆರೆಯುತ್ತಿದ್ದಾರೆ. ಈ ಸರ್ಕಾರದಿಂದ ಜನ ರೋಸಿ ಹೋಗಿದ್ದಾರೆ. ಇವರಿಗೆ ತಕ್ಕ ಪಾಠ ಕಲಿಸಲು ಜನರು ಕಾಯುತ್ತಿದ್ದಾರೆ ಎಂದು ಅವರು ಗುಡುಗಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಅನಿವಾರ್ಯವಾಗಿ ಜಿಬಿಎ ಚುನಾವಣೆ ಮಾಡುತ್ತಿದೆ. ಚುನಾವಣೆಗೆ ನಾವು ತಯಾರಿದ್ದೇವೆ. ಐದು ವಿಭಾಗಗಳನ್ನು ರಚಿಸಿ ಐವರು ಉಸ್ತುವಾರಿಗಳನ್ನು ಜೆಡಿಎಸ್ ಪಕ್ಷದಿಂದ ನೇಮಿಸಲಾಗಿದೆ. ಚುನಾವಣೆಗೆ ಹೆದರುವ ಜಾಯಮಾನ ನಮ್ಮ ಪಕ್ಷದ್ದಲ್ಲ ಎಂದು ರಾಜ್ಯ ಸರ್ಕಾರಕ್ಕೆ ಹೆಚ್​ಡಿಡಿ ಚಾಟಿ ಬೀಸಿದರು.

ಕಾಂಗ್ರೆಸ್ ಏನು ಮಾಡಿದೆ ಎನ್ನುವುದನ್ನು ನಾನು ಹೇಳುವುದಿಲ್ಲ. ಆದರೆ ನಾವು ಏನು ಮಾಡಿದ್ದೇವೆ ಎನ್ನುವುದನ್ನು ಒತ್ತಿ ಹೇಳುತ್ತೇನೆ. ಮಹಿಳಾ ಮೀಸಲಾತಿ ಕೊಟ್ಟಿದ್ದು ನಾವು. ಹಿಂದೆ ಲೀಲಾದೇವಿ ಆರ್ ಪ್ರಸಾದ್ ಅವರು ಮಹಿಳಾ ಮೀಸಲು ವಿಜಯವನ್ನು ಎಲ್ಲಾ ಪಕ್ಷಗಳ ಪ್ರಣಾಳಿಕೆಯಲ್ಲಿ ಅಳವಡಿಸಲು ಮನವಿ ಮಾಡಿದ್ದರು. ಬೇರೆ ಯಾವ ಪಕ್ಷವೂ ಮಾಡಲಿಲ್ಲ. ನಾವು ಅದನ್ನು ಮಾಡಿದ್ದೇವೆ. ಸ್ವತಃ ನಾನೇ ಪ್ರಧಾನಿಯಾಗಿ ಸಂಸತ್ತಿನಲ್ಲಿ ಚರ್ಚೆ ಮಾಡಿದ್ದೆ. ಆಗಲೇ ಮಹಿಳಾ ಮೀಸಲು ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು. ಅದು ರಾಜ್ಯಸಭೆಯಲ್ಲಿ ಅಂಗೀಕಾರವಾಗಿ ಲೋಕಸಭೆಯಲ್ಲಿ ಬಿದ್ದುಹೋಯಿತು. ಅದಾದ 30 ವರ್ಷಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಸಾಧಿಸಿ ತೋರಿಸಿದ್ದಾರೆ ಎಂದು ದೇವೇಗೌಡರು ಹೇಳಿದರು.

ಮತ್ತೆ ಮಹಿಳಾ ಮೀಸಲಾತಿಯ ಬಗ್ಗೆ ಚರ್ಚಿಸಲು ಮೋದಿಯವರು ಮೂರು ದಿನಗಳ ಕಾಲ ಸಂಸತ್ತಿನ ವಿಶೇಷ ಅಧಿವೇಶನ ಕರೆದಿದ್ದಾರೆ. ನಾನು ಸಂತೋಷದಿಂದ ಕಲಾಪದಲ್ಲಿ ಭಾಗವಹಿಸುತ್ತೇನೆ. ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ರಾಜಕೀಯದ ಚಿತ್ರಣ ಬದಲಾಗುತ್ತದೆ. ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರಗಳು ಹೆಚ್ಚಾಗುತ್ತವೆ ಹಾಗೂ ನಮ್ಮ ರಾಜ್ಯದಲ್ಲಿ 42 ಲೋಕಸಭಾ ಕ್ಷೇತ್ರಗಳು ಸೃಷ್ಟಿಯಾಗುತ್ತವೆ ಎಂದು ದೇವೇಗೌಡ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments