Thursday, May 28, 2026
Google search engine
Homeರಾಜ್ಯಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಹನಿಟ್ರ್ಯಾಪ್‌ ಶಂಕೆ

ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಹನಿಟ್ರ್ಯಾಪ್‌ ಶಂಕೆ

​ದಾವಣಗೆರೆ: ‘ಕೂಡಲಸಂಗಮದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಕೇಳಿ ಬಂದಿರುವ ಲೈಂಗಿಕ ಕಿರುಕುಳದ ಆರೋಪವು ದೊಡ್ಡ ಷಡ್ಯಂತ್ರದ ಭಾಗವಾಗಿದೆ. ರಾಜಕಾರಣಿಗಳು ಹಾಗೂ ಮಠಾಧೀಶರನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್‌ ಮಾಡುವ ಜಾಲವೇ ಇದರ ಹಿಂದೆ ಕೆಲಸ ಮಾಡುತ್ತಿದೆ’ ಎಂದು ಜೆಡಿಎಸ್ ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ ಆರೋಪಿಸಿದರು.

​ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿರುವ ಶ್ರೀಗಳ ಏಳಿಗೆ ಸಹಿಸದೆ ಈ ಕುತಂತ್ರ ಮಾಡಲಾಗಿದೆ. ಪ್ರಕರಣದ ಸತ್ಯಾಸತ್ಯತೆ ಹೊರಬರಲು ಸರ್ಕಾರ ಕೂಡಲೇ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು’ ಎಂದು ಒತ್ತಾಯಿಸಿದರು.

‘ಎಐ ತಂತ್ರಜ್ಞಾನ ಬಳಸಿ ಕುಳಿತವರನ್ನು ನಿಲ್ಲಿಸುವ, ನಿಂತವರನ್ನು ಮಲಗಿಸುವ ಕೆಲಸ ನಡೆಯುತ್ತಿದೆ. ಶ್ರೀಗಳ ತೇಜೋವಧೆ ಮಾಡಲು ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಹಿಂದೆ ಹನಿಟ್ರ್ಯಾಪ್‌ನಿಂದಾಗಿ ಅನೇಕ ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಕೆಲವರು ಪೀಠ ತ್ಯಾಗ ಮಾಡಿದ್ದಾರೆ. ಈ ಪ್ರಕರಣದಲ್ಲೂ ಅದೇ ಮಾದರಿ ಅನುಸರಿಸಲಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಮಹಿಳಾ ಆಯೋಗಕ್ಕೆ ದೂರು ನೀಡಿದ ಮಹಿಳೆ ಪದೇಪದೇ ವಿಳಾಸ ಬದಲಿಸುತ್ತಿದ್ದಾಳೆ. ದೂರು ನೀಡಿದ ಬೆನ್ನಲ್ಲೇ ಆಕೆ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ದಾಖಲೆಗಳಿಲ್ಲದೆ ಮಹಿಳಾ ಆಯೋಗ ಇಂತಹ ಪ್ರಕರಣಗಳನ್ನು ಪ್ರಚಾರಕ್ಕೆ ಬಳಸಬಾರದು. ದೂರು ನೀಡಿದವರಿಗೆ ಮನುಷ್ಯತ್ವವಿದ್ದರೆ ದಾಖಲೆಗಳನ್ನು ಬಿಡುಗಡೆ ಮಾಡಲಿ ಅಥವಾ ದೂರು ಹಿಂಪಡೆಯಲಿ’ ಎಂದು ಸವಾಲು ಹಾಕಿದರು.

‘ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ’ ಎಂಬ ಶಾಸಕ ವಿಜಯಾನಂದ ಕಾಶೆಪ್ಪನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಕಾಶೆಪ್ಪನವರು ಸಮಾಜದ ಅಧ್ಯಕ್ಷರು, ಅವರ ಬಗ್ಗೆ ಮಾತನಾಡಲಾರೆ. ಆದರೆ ಗಾಳಿಯಲ್ಲಿ ಗುಂಡು ಹೊಡೆಯುವ ಬದಲು ಪಾರದರ್ಶಕ ತನಿಖೆಗೆ ಅವರೂ ಸಹಕರಿಸಲಿ’ ಎಂದರು.

‘ದೂರುದಾರ ಮಹಿಳೆಗೆ ಶ್ರೀಗಳು ₹3 ಕೋಟಿ ನೀಡಿದ್ದಾರೆ ಎಂಬುದು ಕೇವಲ ವದಂತಿ. ನಮ್ಮ ಸ್ವಾಮೀಜಿ ಹಣದ ಹಿಂದೆ ಹೋದವರಲ್ಲ, ಐಷಾರಾಮಿ ಮಠವನ್ನೂ ಕಟ್ಟಿಲ್ಲ. ಸತ್ಯ ಹೊರಬರಲಿ ಎಂದು ಅವರು ಹೇಳಿದರು.

​ಗೋಷ್ಠಿಯಲ್ಲಿ ಸಮಾಜದ ಯುವ ಘಟಕದ ರಾಜ್ಯಾಧ್ಯಕ್ಷ ಬಿ.ಜಿ.ಅಜಯಕುಮಾರ, ಮುಖಂಡರಾದ ಗಂಗಾಧರ ಕಾರಿಗನೂರು, ವಕೀಲ ಯೋಗೇಶ, ಶಿವಾನಂದ, ಎಂ.ಜಿ.ಪರಮೇಶ್ ಗೌಡ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments