ಮಧ್ಯಮ ವೇಗಿ ಪ್ರಸಿದ್ಧ ಕೃಷ್ಣ ಮಾರಕ ದಾಳಿ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡ 7 ವಿಕೆಟ್ ಗಳ ಭಾರೀ ಅಂತರದಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸಿದೆ.
ಲಕ್ನೋದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 20 ಓವರ್ ಗಳಲ್ಲಿ 8 ವಿಕೆಟ್ ಗೆ 164 ರನ್ ಗೆ ನಿಯಂತ್ರಿಸಿದ ಗುಜರಾತ್ ಟೈಟಾನ್ಸ್ 18.4 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು.
ಗುರಿ ಬೆಂಬತ್ತಿದ ಗುಜರಾತ್ ಟೈಟಾನ್ಸ್ ಪರ ನಾಯಕ ಶುಭಮನ್ ಗಿಲ್ ಮತ್ತು ಜೋಸ್ ಬಟ್ಲರ್ ವೈಯಕ್ತಿಕ ಅರ್ಧಶತಕ ಬಾರಿಸಿ ತಂಡದ ಗೆಲುವು ಖಾತ್ರಿ ಪಡಿಸಿದರು. ಇಬ್ಬರೂ ಎರಡನೇ ವಿಕೆಟ್ ಗೆ 74 ರನ್ ಜೊತೆಯಾಟ ನಿಭಾಯಿಸಿದರು.
ಗಿಲ್ 40 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 56 ರನ್ ಬಾರಿಸಿ ಔಟಾದರೆ, ಬಟ್ಲರ್ 37 ಎಸೆತಗಳಲ್ಲಿ 11 ಬೌಂಡರಿ ಸಹಾಯದಿಂದ 60 ರನ್ ಗಳಿಸಿದರು. ನಂತರ ಬಂದ ವಾಷಿಂಗ್ಟನ್ ಸುಂದರ್ ಅಜೇಯ 21 ರನ್ ಗಳಿಸಿ ತಂಡದ ಗೆಲುವು ಖಚಿತಪಡಿಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಎಲ್ ಎಸ್ ಜಿ ತಂಡ ಪ್ರಸಿದ್ಧ ಕೃಷ್ಣ ದಾಳಿಗೆ ತತ್ತರಿಸಿ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಒಬ್ಬ ಬ್ಯಾಟ್ಸ್ ಮನ್ ಕೂಡ ಹೆಚ್ಚು ಹೊತ್ತು ನಿಲ್ಲದೇ ವಿಕೆಟ್ ಕೈ ಚೆಲ್ಲಿದ್ದರಿಂದ ಬೃಹತ್ ಮೊತ್ತ ಪೇರಿಸಲು ವಿಫಲವಾಯಿತು.
ಆರಂಭಿಕ ಏಡಿಯನ್ ಮರ್ಕರಂ (30) ಹೊರತುಪಡಿಸಿದರೆ, ಪಂತ್ (18), ಪೂರನ್ (19), ಸಮದ್ (18) ಮತ್ತು ಮುಕುಲ್ ಚೌಧರಿ (18) ನೆಲೆ ಕಂಡುಕೊಳ್ಳುವ ಹಂತದಲ್ಲಿ ನಿರ್ಗಮಿಸಿದರು.
ಗುಜರಾತ್ ಪರ ಪ್ರಸಿದ್ಧ ಕೃಷ್ಣ 4 ವಿಕೆಟ್ ಪಡೆದು ಮಿಂಚಿದರೆ, ಅಶೋಕ್ ಶರ್ಮ 2 ವಿಕೆಟ್ ಗಳಿಸಿದರು.


