Friday, April 17, 2026
Google search engine
Homeರಾಜ್ಯರಾಜ್ಯದಲ್ಲಿ ಕುಡಿಯುವ ನೀರಿಗೆ ತೊಂದರೆ ಆದರೆ ಜಿಲ್ಲಾಧಿಕಾರಿಗಳೇ ಹೊಣೆ: ಸಿಎಂ ಖಡಕ್ ಸೂಚನೆ

ರಾಜ್ಯದಲ್ಲಿ ಕುಡಿಯುವ ನೀರಿಗೆ ತೊಂದರೆ ಆದರೆ ಜಿಲ್ಲಾಧಿಕಾರಿಗಳೇ ಹೊಣೆ: ಸಿಎಂ ಖಡಕ್ ಸೂಚನೆ

ಬೆಂಗಳೂರು: ರಾಜ್ಯದ ಐದು ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಕೊರತೆ ನಿರೀಕ್ಷಿಸಲಾಗಿದ್ದು, ಕುಡಿಯುವ ನೀರಿಗೆ ತೊಂದರೆಯಾಗದಂತೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.

ತಮ್ಮದೇ ಅಧ್ಯಕ್ಷತೆಯಲ್ಲಿ ವಿಧಾನಸೌಧ ಸಭಾಂಗಣದಲ್ಲಿ ಗುರುವಾರ ನಡೆದ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿನ ಕುಡಿಯುವ ನೀರು ಪೂರೈಕೆ ಕುರಿತಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ  ಜರುಗಿತು.

ಈ ವರ್ಷ ಮುಂಗಾರಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆಗಸ್ಟ್ ತಿಂಗಳಲ್ಲಿ ವಾಡಿಕೆ ಮಳೆಯಾಗುವ ಸಾಧ್ಯತೆಯಿದ್ದು, ಸೆಪ್ಟಂಬರ್ ತಿಂಗಳಲ್ಲಿ ಮಳೆ ಕಡಿಮೆ ನಿರೀಕ್ಷಿಸಲಾಗಿದೆ.

ಜಿಲ್ಲಾಧಿಕಾರಿಗಳೇ ಹೊಣೆ

ಕುಡಿಯುವ ನೀರಿಗೆ ತೊಂದರೆಯಾದರೆ ಆಯಾ ಜಿಲ್ಲಾಧಿಕಾರಿಗಳೇ ಇದಕ್ಕೆ ಹೊಣೆಯಾಗುತ್ತಾರೆ. ಕಂದಾಯ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆಗಳು ಪರಸ್ಪರ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಅವರು ಸೂಚಿಸಿದರು.

ಈ ಬಾರಿ ಎಪ್ರಿಲ್-ಜೂನ್ ಅವಧಿಯಲ್ಲಿ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಬಿಸಿಗಾಳಿ ದಿನಗಳು ಕಂಡು ಬರುವ ಸಾಧ್ಯತೆಯಿದೆ. ಇಂತಹ ಸಂದರ್ಭದಲ್ಲಿ ಯಾವ ರೀತಿಯ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬೇಕು. ಹವಾಮಾನ ಇಲಾಖೆಯ ಮುನ್ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂಬ ಬಗ್ಗೆ ಎಲ್ಲಾ ಜಿಲ್ಲಾಧಿಕಾರಿಗಳು ಸೂಚನೆಗಳನ್ನು ನೀಡಬೇಕು ಎಂದರು.

ಕುಡಿಯುವ ನೀರಿಗೆ ಅನುದಾನದ ಕೊರತೆಯಿಲ್ಲ

ಸಾರ್ವಜನಿಕರಿಗೆ ನೆರಳಿನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಕುಡಿಯುವ ನೀರು ಪೂರೈಕೆಯನ್ನು ಖಾತ್ರಿಪಡಿಸಲು ಯಾವುದೇ ಅನುದಾನದ ಕೊರತೆಯಿಲ್ಲ. ಜಿಲ್ಲಾಧಿಕಾರಿಗಳ ವರದಿ ಆಧಾರದಲ್ಲಿ ಅಗತ್ಯ ಅನುದಾನವನ್ನು ಒದಗಿಸಲು ಹಣಕಾಸು ಇಲಾಖೆಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.

114 ತಾಲೂಕುಗಳ 598 ಗ್ರಾಮ ಪಂಚಾಯತ್ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ

ರಾಜ್ಯದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸಬಹುದಾದ 213 ತಾಲೂಕುಗಳನ್ನು ಹಾಗೂ 2410 ಗ್ರಾಮ ಪಂಚಾಯತ್ಗಳನ್ನು ಗುರುತಿಸಲಾಗಿದೆ. ಪ್ರಸ್ತುತ 114 ತಾಲೂಕುಗಳ 598 ಗ್ರಾಮ ಪಂಚಾಯತ್ಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಟ್ಯಾಂಕರ್ಗಳ ಮೂಲಕ 137 ಗ್ರಾಮಗಳಿಗೆ ಒಟ್ಟು 129 ಟ್ಯಾಂಕರ್ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. 585 ಖಾಸಗಿ ಬೋರ್ವೆಲ್ಗಳನ್ನು ಬಾಡಿಗೆಗೆ ಪಡೆಯಲಾಗಿದ್ದು, ಇದರ ಮೂಲಕ 515ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುತ್ತಿರುವ ಬಗ್ಗೆ ಮುಖ್ಯಮಂತ್ರಿಗಳು ಮಾಹಿತಿ ಪಡೆದರು.

ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಗ್ರಾಮಗಳ ಗುರುತಿಸುವಿಕೆ

ಕಲಬುರಗಿ ಜಿಲ್ಲೆಯ 147 ಗ್ರಾಮ ಪಂಚಾಯತ್, ಬಾಗಲಕೋಟೆ 114, ಬೆಳಗಾವಿಯ 127, ಚಿಕ್ಕಮಗಳೂರಿನ 115, ಹಾವೇರಿಯ 138, ಮಂಡ್ಯ 130, ತುಮಕೂರಿನ 141 ಹಾಗೂ ಉತ್ತರಕನ್ನಡ ಜಿಲ್ಲೆಯ 125 ಗ್ರಾಮ ಪಂಚಾಯತ್ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದೆಂದು ಗುರುತಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

22 ಕೊಳವೆ ಬಾವಿಗಳು  ಬಾಡಿಗೆಗೆ

ಪ್ರಸ್ತುತ 27 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, 95 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು ಎಂದು ಗುರುತಿಸಲಾಗಿದೆ. ಒಟ್ಟು 145 ವಾರ್ಡ್ಗಳಿಗೆ 57 ಟ್ಯಾಂಕರ್ಗಳ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದ್ದು, ಬಾಡಿಗೆಗೆ 22 ಕೊಳವೆ ಬಾವಿಗಳನ್ನು ಪಡೆಯಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ಅಗತ್ಯ ಸಂದರ್ಭದಲ್ಲಿ ಕೊಳವೆ ಬಾವಿ ಕೊರೆಯಬಹುದು

ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಟ್ಯಾಂಕರ್ ನೀರು ಪೂರೈಕೆ ಮಾಡಬೇಕು. ಖಾಸಗಿ ಬೋರ್ವೆಲ್ಗಳನ್ನು ಬಾಡಿಗೆ ಪಡೆಯುವುದಕ್ಕೆ ಆದ್ಯತೆ ನೀಡಬೇಕು. ಅಗತ್ಯ ಸಂದರ್ಭದಲ್ಲಿ ಕೊಳವೆ ಬಾವಿ ಕೊರೆಯಬಹುದಾಗಿದೆ ಎಂದು ಮುಖ್ಯಮಂತ್ರಿಗಳು ಗುರುತಿಸಿದರು.

ರಾಜ್ಯದ ಪ್ರಮುಖ 14 ಜಲಾಶಯಗಳಲ್ಲಿ ಪ್ರಸ್ತುತ 321.93 ಟಿ.ಎಂ.ಸಿ ನೀರು ಲಭ್ಯವಿದ್ದು, ಇದು ಒಟ್ಟು ಸಾಮರ್ಥ್ಯದ ಶೇ.36ರಷ್ಟಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 330.35 ಟಿ.ಎಂ.ಸಿ ನೀರು ಲಭ್ಯವಿತ್ತು. ಪ್ರಸುತ ಕುಡಿಯುವ ನೀರಿಗೆ ಸಾಕಷ್ಟು ನೀರು ಜಲಾಶಯಗಳಲ್ಲಿ ಲಭ್ಯವಿದೆ.

ಕುಡಿಯುವ ನೀರಿಗಾಗಿ ಜಲಾಶಯಗಳಲ್ಲಿ ನೀರಿನ ಲಭ್ಯತೆಯನ್ನು ಖಾತ್ರಿಪಡಿಸಿ

ಮಳೆಗಾಲ ವಿಳಂಬವಾಗಿ ಆರಂಭವಾಗುವ ಸಾಧ್ಯತೆಯಿರುವುದರಿಂದ ಜುಲೈ ಮಧ್ಯದವರೆಗೂ ಕುಡಿಯುವ ನೀರಿಗಾಗಿ ಜಲಾಶಯಗಳಲ್ಲಿ ನೀರಿನ ಲಭ್ಯತೆಯನ್ನು ಖಾತ್ರಿಪಡಿಸಬೇಕು.

 

ನೀರಾವರಿಗಿಂತ ಕುಡಿಯುವ ನೀರಿನ ಪೂರೈಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಜಲಾಶಯಗಳಲ್ಲಿ ನೀರಿನ ಸೋರಿಕೆಯನ್ನು ಗುರುತಿಸಿ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಅವರು ಸೂಚನೆ ನೀಡಿದರು.

ಸಾರ್ವಜನಿಕರ ಅಹವಾಲುಗಳಿಗೆ ತುರ್ತಾಗಿ ಸ್ಪಂದಿಸಬೇಕು

ಕುಡಿಯುವ ನೀರಿನ ಕುರಿತಾಗಿ ಸಾರ್ವಜನಿಕರ ಅಹವಾಲುಗಳಿಗೆ ತುರ್ತಾಗಿ ಸ್ಪಂದಿಸಬೇಕು. ಇದಕ್ಕಾಗಿ ತಾಲೂಕು ಹಾಗೂ ವಾರ್ಡ್ ಮಟ್ಟದಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಬೇಕು. ಜಿಲ್ಲಾ ಮಟ್ಟದ ಕಾರ್ಯಪಡೆ ಸಕ್ರಿಯವಾಗಿ ಕಾರ್ಯ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು .

ಎಲ್ಲಾ ಆರ್. ಒ ಘಟಕಗಳು 24/7 ನಿರಂತರ ವಿದ್ಯುತ್ ಸರಬರಾಜಿನೊಂದಿಗೆ ಕಾರ್ಯ ನಿರ್ವಹಿಸುವುದನ್ನು ಖಾತ್ರಿಪಡಿಸಬೇಕು. ಆರ್ ಒ ಘಟಕಗಳ ತಕ್ಷಣದ ದುರಸ್ತಿ ಮತ್ತು ಕುಡಿಯುವ ನೀರಿನ ಪೂರೈಕೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ತಾಲೂಕು ಮಟ್ಟದಲ್ಲಿ ತಂಡಗಳನ್ನು ನಿಯೋಜಿಸಬೇಕು ಎಂದು ಸೂಚನೆ ನೀಡಿದರು.

ಕಲುಷಿತ ನೀರು ಪೂರೈಕೆಯಾಗದಂತೆ ಕ್ರಮ ವಹಿಸಿ

ಕಲುಷಿತ ನೀರು ಪೂರೈಕೆಯಾಗಿ ಆರೋಗ್ಯ ಸಮಸ್ಯೆಯಾಗದಂತೆ ಎಲ್ಲಾ ಜಿಲ್ಲೆಗಳಲ್ಲಿ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬೇಕು. ಈ ಕುರಿತು ಈಗಾಗಲೇ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದ್ದು, ಯಾವುದೇ ಕಾರಣಕ್ಕೂ ಕಲುಷಿತ ನೀರಿನಿಂದ ಸಮಸ್ಯೆಯಾಗದಂತೆ ನೋಡಿಕೊಳ್ಳುವುದು ಜಿಲ್ಲಾಧಿಕಾರಿಗಳ ಜವಾಬ್ದಾರಿ ಎಂದು ಸ್ಪಷ್ಟಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments