ಕಾರು ಮತ್ತು ಬಸ್ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದರಿಂದ ಎರಡೂ ವಾಹನಗಳಲ್ಲಿದ್ದ 7 ಮಂದಿ ಸಜೀವದಹನಗೊಂಡ ಭೀಕರ ಘಟನೆ ಯಾದಗಿರಿಯಲ್ಲಿ ಸಂಭವಿಸಿದೆ.
ಶುಕ್ರವಾರ ಬೆಳಿಗ್ಗೆ ಯಾದಗಿರಿಯ ಶಾಂತನಗರದಲ್ಲಿ ಈ ದುರಂತ ಸಂಭವಿಸಿದ್ದು, ಬಸ್ ನಲ್ಲಿದ್ದ ನಾಲ್ಕು ಮಂದಿ ಹಾಗೂ ಕಾರಿನಲ್ಲಿದ್ದ ಮೂವರು ಸಜೀವದಹನಗೊಂಡಿದ್ದಾರೆ.
ಯಾದಗಿರಿಯಿಂದ ರಾಯಚೂರಿನ ಕಡೆಗೆ ತೆರಳುತ್ತಿದ್ದ ಕಾರಿಗೆ, ಬೆಂಗಳೂರಿನಿಂದ ಕಲಬುರಗಿ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ತಕ್ಷಣವೇ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಕಾರಿನ ಜೊತೆ ಬಸ್ ಡಿಕ್ಕಿ ಹೊಡೆದಿದೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಓಡಿ ಬಂದಿದ್ದಾರೆ. ಕಾರು ಬೆಂಕಿಗೆ ಆಹುತಿಯಾದ ಕಾರಣ ರಕ್ಷಣಾ ಕಾರ್ಯಕ್ಕೆ ಅಡಚಣೆಯುಂಟಾಗಿತ್ತು ಎನ್ನಲಾಗಿದೆ.
ವಿಷಯ ತಿಳಿದ ಸುರಪುರ ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತಪಟ್ಟವರ ಗುರುತು ಇನ್ನು ಪತ್ತೆಯಾಗಬೇಕಿದ್ದು, ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.



