Monday, May 25, 2026
Google search engine
Homeಕಾನೂನುವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ

ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ

ಬೆಂಗಳೂರು: ಧಾರವಾಡದ ಬಿಜೆಪಿ ಮುಖಂಡ ಯೋಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಹಾಲಿ ಕಾಂಗ್ರೆಸ್ ಶಾಸಕ ವಿನಯ್‌ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶುಕ್ರವಾರ ವಿನಯ್ ಕುಲಕರ್ಣಿ ಸೇರಿದಂತೆ ದೋಷಿ ಎಂದು ಘೋಷಿಸಲಾದ 16 ಮಂದಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಲಾಗಿದ್ದು, ಕೊನೆಯ ಅಪರಾಧಿ ಪೊಲೀಸ್ ಅಧಿಕಾರಿ ಚನ್ನಕೇಶವ ಟಿಗ್ರಿಕರ್ ಅವರಿಗೆ 7 ವರ್ಷ ಸಾಧಾರಣ ಶಿಕ್ಷೆ ವಿಧಿಸಲಾಗಿದೆ.

ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ್ದು, ದೋಷಿಗಳಾದ ವಿಕ್ರಮ್‌, ಕೀರ್ತಿ ಕುಮಾರ್‌, ಸಂದೀಪ್‌ ಸವದತ್ತಿ, ವಿನಾಯಕ್‌ ಕಟಗಿ, ಮಹಾಬಲೇಶ್ವರ್‌ ಹೊಂಗಲ್‌ ಅಲಿಯಾಸ್‌ ಮುದಕ, ಸಂತೋಷ್‌ ಸವದತ್ತಿ, ಎಂ.ದಿನೇಶ್‌, ಎಸ್‌.ಅಶ್ವತ್‌, ಕೆ.ಎಸ್‌.ಸುನೀಲ್‌, ನಜೀರ್‌ ಅಹ್ಮದ್‌, ಶನ್ವಾಜ್‌, ಕೆ.ನೂತನ್‌, ಸಿ.ಹರ್ಷಿತ್‌, ಚಂದ್ರಶೇಖರ್‌ ಇಂಡಿ ಅಲಿಯಾಸ್‌, ಚಂದ್ರು ಮಾಮ, ವಿಕಾಸ್‌ ಕಲಬುರ್ಗಿ ಜೀವಾವಧಿ ಶಿಕ್ಷೆ ಘೋಷಿಸಿದರು.,

ಅಪರಾಧಿಗಳಿಗೆ ಐಪಿಸಿ ಸೆಕ್ಷನ್ 302(ಕೊಲೆ) ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು ಸೆಕ್ಷನ್ 120(ಬಿ) (ಕೊಲೆಗೆ ಪಿತೂರಿ) ಅಡಿಯಲ್ಲಿ 7 ವರ್ಷ ಕಠಿಣ ಶಿಕ್ಷೆ ವಿಧಿಸಲಾಗಿದೆ. ಎರಡೂ ಶಿಕ್ಷೆಗಳನ್ನು ಏಕಕಾಲಕ್ಕೆ ಅನುಭವಿಸಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಯೋಗೇಶ್ ಗೌಡ ಕೊಲೆ ಪ್ರಕರಣದ ಕುರಿತು ಸಿಬಿಐ ನೀಡಿದ್ದ ವರದಿಯನ್ನು ನ್ಯಾಯಾಲಯ ಬುಧವಾರ ಎಲ್ಲ ಆರೋಪಿಗಳನ್ನು ‘ದೋಷಿಗಳು’ ಎಂದು ಪ್ರಕಟಿಸಿತ್ತು. ಶುಕ್ರವಾರ ಶಿಕ್ಷೆಯ ಪ್ರಮಾಣ ಘೋಷಿಸುವುದಾಗಿ ತಿಳಿಸಿತ್ತು.

ಕೊಲೆಯಾದ ಯೋಗೇಶ್ ಗೌಡ ಅವರ ಕುಟುಂಬಕ್ಕೆ 16 ಲಕ್ಷ ರೂ. ಪರಿಹಾರ ಮೊತ್ತ ನೀಡುವಂತೆ ಇದೇ ವೇಳೆ ನ್ಯಾಯಾಲಯ ಆದೇಶಿಸಿತು.

ಪ್ರಕರಣದ ಕಾಲಾನು ಕ್ರಮ

2016ರ ಜೂನ್‌ 15ರಂದು ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಿಮ್​ನಲ್ಲಿ ಯೋಗೀಶ್‌ ಗೌಡ ಕೊಲೆ ನಡೆದಿತ್ತು. ಬೆಳಗ್ಗೆ ಜಿಮ್​​​ನಲ್ಲಿ‌ ದಿನ ಪತ್ರಿಕೆ ಓದುತ್ತಿರುವಾಗಲೇ ಕೃತ್ಯ ನಡೆದಿತ್ತು. ಆರಂಭದಲ್ಲಿ ಧಾರವಾಡ ಉಪನಗರ ಪೊಲೀಸರು ತನಿಖೆ ನಡೆಸಿದ್ದರು. ಬಳಿಕ ಸೂಕ್ತ ರೀತಿಯಲ್ಲಿ ತನಿಖೆ ಆಗುತ್ತಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದರು.

ತನಿಖೆ ನಡೆಸಿದ ಉಪನಗರ ಪೊಲೀಸರು ಬಿ‌ ರಿಪೋರ್ಟ್ ಸಲ್ಲಿಸಿದ್ದರು. 2019ರಲ್ಲಿ ವಿನಯ್ ಕುಲಕರ್ಣಿ ಅವರು ಸಾಕ್ಷ್ಯ ನಾಶಪಡಿಸಿದ್ದಾರೆ ಎಂದು ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಆ ವೇಳೆ ಹೈಕೋರ್ಟ್ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಆದೇಶಿಸಿತ್ತು.ಬಿ.ಎಸ್​.ಯಡಿಯೂರಪ್ಪ ಸಿಎಂ ಆಗಿದ್ದಾಗ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ್ದರು. ತನಿಖೆ ನಡೆಸುತ್ತಿದ್ದ ಸಿಬಿಐ, 2020ರ ನವೆಂಬರ್ 5ರಂದು ವಿನಯ್ ಕುಲಕರ್ಣಿ ಅವರನ್ನು ಬಂಧಿಸಿತ್ತು.

ಸಿಬಿಐ ಆರೋಪಿಗಳ ವಿರುದ್ಧ ಐಪಿಸಿ ವಿವಿಧ ಸೆಕ್ಷನ್​ಗಳು, ಶಸ್ತ್ರಾಸ್ತ್ರ ಕಾಯಿದೆಯ ಸೆಕ್ಷನ್ 25 ಜೊತೆಗೆ 3, 5, 8, 29 ಮತ್ತು ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್‌ 13(2) ಜೊತೆಗೆ 13(1)(ಡಿ) ಅಡಿ ಆರೋಪಪಟ್ಟಿ ಸಲ್ಲಿಸಿತ್ತು.

2021ರ ಆಗಸ್ಟ್‌ 11ರಂದು ಸುಪ್ರೀಂಕೋರ್ಟ್‌ ವಿನಯ್‌ ಕುಲಕರ್ಣಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಧಾರವಾಡ ಜಿಲ್ಲೆ ಪ್ರವೇಶ ಮಾಡದಂತೆ ನಿಷೇಧ ಹೇರಿತ್ತು.

ವಿನಯ್ ಕುಲಕರ್ಣಿ 2023ರ ವಿಧಾನಸಭೆ ಚುನಾವಣೆಯಲ್ಲಿ ನೆರೆಯ ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಇದ್ದುಕೊಂಡು ಮತಪ್ರಚಾರ ನಿರ್ವಹಿಸುವ ಮೂಲಕ ಶಾಸಕರಾಗಿ ಆಯ್ಕೆಯಾದರು.

ತನಿಖಾ ಸಮಯದಲ್ಲಿ, ಪ್ರಕರಣ ಹಲವಾರು ತಿರುವುಗಳನ್ನು ಪಡೆದುಕೊಂಡಿತ್ತು. ಪ್ರಮುಖ ಆರೋಪಿಗಳಲ್ಲಿ ಇಬ್ಬರು ಮಾಫಿ ಸಾಕ್ಷಿಯಾಗಲು ಒಪ್ಪಿಕೊಂಡಿದ್ದರು.

2025ರ ಜೂನ್‌ 7ರಂದು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಯುತ್ತಿರುವಾಗ ವಿನಯ್‌ ಕುಲಕರ್ಣಿ ಅವರು ಸಾಕ್ಷಿಗಳನ್ನು ಸಂಪರ್ಕಿಸಲು ಅಥವಾ ಪ್ರಭಾವ ಬೀರಲು ಪ್ರಯತ್ನಿಸಿದ್ದಾರೆ ಎಂಬುದಕ್ಕೆ ವಿಶ್ವಾಸಾರ್ಹ ಪುರಾವೆಗಳಿವೆ ಎಂದು ಹೇಳಿ, ಜಾಮೀನು ರದ್ದುಗೊಳಿಸಿತ್ತು.

ಸಿಬಿಐ ಅಧಿಕಾರಿಗಳು ಸುಪ್ರೀಂ ಕೋರ್ಟ್ ಜಾಮೀನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ನಂತರ ಸುಪ್ರೀಂ ಕೋರ್ಟ್​ ಜಾಮೀನು ಅರ್ಜಿ ರದ್ದು ಮಾಡಿತ್ತು. ಕೋರ್ಟ್ ಸೂಚನೆಯ ಮೇರೆಗೆ ಎರಡನೇ ಬಾರಿಗೆ ವಿನಯ್ ಕುಲಕರ್ಣಿ ಶರಣಾಗಿದ್ದರು.

ನ್ಯಾಯಾಂಗ ಬಂಧನದಲ್ಲಿದ್ದ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 2026ರ ಜನವರಿಯಲ್ಲಿ ಹೈಕೋರ್ಟ್​ ವಜಾಗೊಳಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದರು. ಫೆಬ್ರವರಿ 27ರಂದು ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಇದರಿಂದಾಗಿ ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments