Wednesday, June 10, 2026
Google search engine
Homeರಾಜಕೀಯರಾಮನಗರ ಜಿಲ್ಲಾಧಿಕಾರಿ ನನ್ನ ಕರೆ ಸ್ವೀಕರಿಸೋದೇ ಇಲ್ಲ: ಕೇಂದ್ರ ಸಚಿವ ಕುಮಾರಸ್ವಾಮಿ ಅಳಲು

ರಾಮನಗರ ಜಿಲ್ಲಾಧಿಕಾರಿ ನನ್ನ ಕರೆ ಸ್ವೀಕರಿಸೋದೇ ಇಲ್ಲ: ಕೇಂದ್ರ ಸಚಿವ ಕುಮಾರಸ್ವಾಮಿ ಅಳಲು

ಬೆಂಗಳೂರು: ರಿಯಲ್ ಎಸ್ಟೇಟ್ ಮಾಡುವುದು ರಾಜ್ಯ ಸರ್ಕಾರದ ಕೆಲಸವಲ್ಲ ಎಂದು ಸಿದ್ದರಾಮಯ್ಯ ಸರಕಾರದ ಮೇಲೆ ಹರಿಹಾಯ್ದಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ರೈತರಿಗೆ ಬೇಡವಾಗಿರುವ ಬಿಡದಿ ಟೌನ್ ಶಿಪ್ ಯೋಜನೆಯನ್ನು ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.

ಪಕ್ಷದ ರಾಜ್ಯ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತಾಡಿಸಿದ ಕೇಂದ್ರ ಸಚಿವರು; ರೈತರು ಜಮೀನು ನೀಡಲ್ಲ ಎಂದು ಬೀದಿಯಲ್ಲಿ ಕೂತಿದ್ದಾರೆ. ಆದರೆ, ರಾಜ್ಯ ಸರ್ಕಾರದಲ್ಲಿರುವ ರಿಯಲ್ ಎಸ್ಟೇಟ್ ದಂಧೆಕೋರರು ಭೂಮಿಯನ್ನು ಕಿತ್ತುಕೊಂಡು ವ್ಯವಹಾರ ಮಾಡಿಯೇ ಸಿದ್ಧ ಎಂದು ಹೊರಟಿದ್ದಾರೆ. ಇದು ಯಾರಪ್ಪನ ಭೂಮಿ ಅವರು ಧಮ್ಕಿ ಹಾಕಿ ಕಿತ್ತುಕೊಳ್ಳುವುದಕ್ಕೆ ಎಂದು ಕಿಡಿಕಾರಿದರು.

ಜನರ ಆಡಳಿತ ನಡೆಸಬೇಕಾದ ಈ ಸರ್ಕಾರ ಬ್ರೋಕರ್ ಕೆಲಸ ಮಾಡಲು ಹೊರಟಿದೆ. ಬಡ ರೈತರಿಂದ ಜಮೀನು ಕಿತ್ತುಕೊಂಡು ರಿಯಲ್ ಎಸ್ಟೇಟ್ ಮಾಫಿಯಾ ಮಾಡಲು ಹೊರಟಿದೆ. ಚದರ ಅಡಿ ವ್ಯವಹಾರದಲ್ಲಿ ದಂಧೆ ಮಾಡಲು ಮುಂದಾಗಿದೆ. ಇದರ ಬ್ರೋಕರ್ ಗಿರಿಯನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ವಹಿಸಿಕೊಂಡಿದ್ದಾರೆ ಎಂದು ಸಚಿವ ಕುಮಾರಸ್ವಾಮಿ ಅವರು ಆರೋಪ ಮಾಡಿದರು.

ಎಂಟು ಹಳ್ಳಿಗಳ ರೈತರ ಅತ್ಯಂತ ಫಲವತ್ತಾದ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಕೃಷಿ ಭೂಮಿಯನ್ನು ಲಪಟಾಯಿಸಿ ರಿಯಲ್ ಎಸ್ಟೇಟ್ ಮಾಡಲು ಹೊರಟಿರುವ ರಾಜ್ಯ ಸರ್ಕಾರವು ನೇರವಾಗಿ ದಂಧೆಯಲ್ಲಿ ಮುಳುಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ದಂಡಕೋರರ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ಸಚಿವ ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.

ಯಾವುದೇ ಕಾರಣಕ್ಕೂ ಭೂಮಿ ಕೊಡುವುದಿಲ್ಲ ಎನ್ನುವುತ್ತಿರುವ ರೈತರನ್ನು ಬೆದರಿಸಿ ಹೆದರಿಸುವ, ಬೆದರಿಸುವ ಕೆಲಸ ಆಗುತ್ತಿದೆ. ಇಂತಹವರ ಬೆದರಿಕೆಯ ಆಟ ನಮ್ಮ ಮುಂದೆ ನಡೆಯುವುದಿಲ್ಲ. ಭೂಮಿ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಯಾವ ರೈತರು ಕೂಡ ಭೂಮಿ ಬಿಟ್ಟುಕೊಡಲು ತಯಾರಿಲ್ಲ. ಅದು ಹೇಗೆ ಭೂಮಿ ವಶಪಡಿಸಿಕೊಳ್ಳುತ್ತಿರೋ ಬಂದು ವಶಪಡಿಸಿಕೊಳ್ಳಲಿ ನೋಡೋಣ ಎಂದು ಕುಮಾರಸ್ವಾಮಿ ಅವರು ನೇರ ಸವಾಲು ಹಾಕಿದರು.

ಯಾರ ಯಾರ ಕಾಲದಲ್ಲಿ ಯಾರ ಯಾರ ಕಾಲು ಕಟ್ತೀರಿ ಎನ್ನುವುದು ನನಗೆ ಗೊತ್ತಿದೆ ಗೊತ್ತಿದೆ ಎಂದು ಹೇಳುತ್ತಲೇ ಕೆಲವರ ಹೆಸರು ಹೇಳದೆ ಆಕ್ರೋಶ ವ್ಯಕ್ತಪಡಿಸಿದ ಕೇಂದ್ರ ಸಚಿವರು, ಇದೇ ಸಂದರ್ಭದಲ್ಲಿ ರಾಮನಗರದ ಜಿಲ್ಲಾಧಿಕಾರಿಗೆ ಕಟುವಾದ ಶಬ್ದಗಳಿಂದ ಎಚ್ಚರಿಕೆ ನೀಡಿದರು.

ರಾಮನಗರ ಜಿಲ್ಲಾಧಿಕಾರಿಗೆ ನೇರ ಎಚ್ಚರಿಕೆ

ರೈತರ ಭೂಮಿ ಕಿತ್ತುಕೊಂಡು ರಿಯಲ್ ಎಸ್ಟೇಟ್ ದಂಧೆ ಮಾಡುವ ವ್ಯಕ್ತಿಗಳ ಹೇಳುವುದಕ್ಕೆಲ್ಲ ಈ ಜಿಲ್ಲಾಧಿಕಾರಿ ಕುಣಿಯುತ್ತಿದ್ದಾರೆ. ಅವರು ಹೇಳಿದ್ದಕ್ಕೆಲ್ಲಾ ಈ ಡಿಸಿ ಸೈನ್ ಹೊಡೆದುಕೊಂಡು ಕೂತಿದ್ದಾರೆ. ಒಂದು ಗ್ರಾಮಕ್ಕೆ ಹೋಗಿ ರೈತರ ಕಷ್ಟ ಸುಖ ಕೇಳಿಲ್ಲ, ಸಭೆ ನಡೆಸಿಲ್ಲ. ನನ್ನ ನಂಬರ್‌ನಿಂದ ಫೋನ್ ಹೋದರೆ ಡಿಸಿ ಫೋನೇ ತೆಗೆಯಲ್ಲ. ಏನೇನು ಮಾಡುತ್ತಿದ್ದಾರೆ ಎಂಬುದನ್ನು ನಾನು ಕೂಡ ನೋಡುತ್ತಿದ್ದೇನೆ. ಸಮಯ ಬಂದಾಗ ಉತ್ತರ ಕೊಡುತ್ತೇನೆ ಎಂದು ಅವರು ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿಗಳಿಗೆ ಒಂದು ಮಾತು ಹೇಳಲು ಬಯಸುತ್ತೇನೆ, ಕುರ್ಚಿ ಸಿಕ್ಕಿದರೆ ಸಾಕು ಎಂದು ಇಂಥ ದಂಧೆಕೋರನ ಮಾತು ಕಟ್ಟಿಕೊಂಡು ರಿಯಲ್ ಎಸ್ಟೇಟ್ ದಲ್ಲಾಳಿ ಆಗಬೇಡಿ. ಕೊನೆಗಾಲದಲ್ಲಿ ಹೋಗಬೇಕಾದರೆ ಸಿದ್ದರಾಮಯ್ಯನವರೇ ಗೌರವಯುತವಾಗಿ ಒಳ್ಳೆಯ ಹೆಸರು ತೆಗೆದುಕೊಂಡು ಹೋಗಿ. ಹಲವಾರು ಭಾಗ್ಯ ಕೊಟ್ಟರೂ 2018ರಲ್ಲಿ 85 ಸೀಟಿಗೆ ಇಳಿಸಿದರು ಜನರು. ಇಂಥ ಗ್ಯಾರಂಟಿ ಕೊಟ್ಟು ಜನ ಈಗ ಹೇಗೆ ಉಳಿಸ್ತಾರೆ ಅಂತ ಭಾವಿಸಬೇಡಿ ಎಂದು ಕುಮಾರಸ್ವಾಮಿ ಅವರು ತೀವ್ರ ತರಾಟೆಗೆ ತೆಗೆದುಕೊಂಡರು.

ಸಂಪುಟ ಸಭೆಯ ನಿರ್ಧಾರಗಳ ಬಗ್ಗೆ ತೀವ್ರ ಕಿಡಿಕಾರಿದ ಅವರು; ಬೇಕಾಬಿಟ್ಟಿ ನಿರ್ಧಾರಗಳನ್ನು ಕೈಗೊಳ್ಳುವ ಇದನ್ನು ಕ್ಯಾಬಿನೆಟ್ ಎನ್ನುತ್ತೀರಾ? ಕ್ಯಾಬಿನೆಟ್ ಎನ್ನೋದು ಹೆಸರಿಗೆ ಮಾತ್ರ. ಕ್ಯಾಬಿನೆಟ್ ನಲ್ಲಿ ಹೇಳೋರು ಕೇಳೋರು ಯಾರೂ ಇಲ್ಲ. ಕ್ಯಾಬಿನೆಟ್ ಅಂದ್ರೆ ಎಲ್ಲವನ್ನೂ ಹರಾಜು ಹಾಕುವ ಮನೆ ಎನ್ನಬಹುದಾ? ಎಂದು ಅವರು ಲೇವಡಿ ಮಾಡಿದರು.

ಕುರ್ಚಿ ಉಳಿದರೆ ಸಾಕು ಎನ್ನುವ ಸ್ಥಿತಿ ತಲುಪಿರುವ ಸಿಎಂ

ಸಿಎಂ ಅವರು ಕುರ್ಚಿ ಉಳಿದರೆ ಸಾಕು ಅಂತಿದ್ದಾರೆ. ಯಾರು ಏನು ಬೇಕಾದರೂ ಮಾಡಿಕೊಳ್ಳಿ ಸಹಿ ಹಾಕ್ತಿನಿ ಎನ್ನುವ ಪರಿಸ್ಥಿತಿಗೆ ಅವರು ಬಂದಿದ್ದಾರೆ. ಕ್ಯಾಬಿನೆಟ್ ನಲ್ಲಿ 33,000 ಕೋಟಿ ಆದಾಯ ಬರುತ್ತೆ ಅಂತ ಹೇಳ್ತಿದ್ದಾರೆ. ಇದು ರಿಯಲ್ ಎಸ್ಟೇಟ್ ಸರಕಾರ ಎಂದು ಕರೆಯುತ್ತಿರೋ? ಇನ್ನೇನಂತ ಕರೆಯುತ್ತೀರೋ? ರೈತರನ್ನು ಉಳಿಸೋಕೆ ಈ ಯೋಜನೆ ಮಾಡುತ್ತಿದ್ದೀರ? ಇದರ ಮೇಲೆ 12,000 ಕೋಟಿ ಹುಡ್ಕೋದಿಂದ ಸಾಲ ತೆಗೆದುಕೊಳ್ಳುತ್ತಿದ್ದಾರೆ. ಕೆಲಸ ಎಷ್ಟು ವರ್ಷ ನಡೆಯುತ್ತದೆ ಗೊತ್ತಿಲ್ಲ. ಇನ್ನೊಂದು ಕಡೆ ಎಂಟು ಹಳ್ಳಿ ವ್ಯಾಪ್ತಿಯಲ್ಲಿ ರೈತರೇ ಇಲ್ಲ ಎಂದು‌ ಹೇಳ್ತಿದ್ದಿರಿ. ಡಿಕೆಶಿ ಅವರ ತಮ್ಮ ಡೇರಿ ಅಧ್ಯಕ್ಷ ಆಗಿದ್ದಾರೆ. ರೈತರೇ ಇಲ್ಲ ಎಂದು ಹೇಳುವ ಬದಲು ನಿಮ್ಮ ತಮ್ಮನಿಂದ ಈ ಹಳ್ಳಿಗಳಲ್ಲಿ ಎಷ್ಟು ಹಾಲು ಸಂಗ್ರಹ ಆಗುತ್ತಿದೆ ಎಂದು ಮಾಹಿತಿ ಪಡೆಯಿರಿ ಎಂದು ಅವರು ಡಿಕೆಶಿಯನ್ನು ಆಗ್ರಹಿಸಿದರು.

ಕುಮಾರಸ್ವಾಮಿಗೆ ಲಾಟರಿ ಹೊಡೆಯುತ್ತದೆ ಅಂತಾರೆ ಅವರು. ಇಂತಹ ಲಾಟರಿ ನನಗೆ ಬೇಡ, ಇದರಲ್ಲಿ ಯಾರ‌ ಹಿತಾಸಕ್ತಿ ಇದೆ? ರೈತರ ಹಿತಾಸಕ್ತಿ ಇದೆಯಾ? ಈ ಯೋಜನೆಯನ್ನು ಇಲ್ಲಿಗೆ ನಿಲ್ಲಿಸಬೇಕು. ಇದು ನಮ್ಮ ಹಿತಾಸಕ್ತಿ, ಇಷ್ಟು ದಿನ ಹೊರಗೆ ರಿಯಲ್ ಎಸ್ಟೇಟ್ ಮಾಡ್ತಿದ್ದಿರಿ. ಈಗ ಅಧಿಕೃತವಾಗಿ ರಿಯಲ್ ಎಸ್ಟೇಟ್ ಮಾಡಲು ಹೊರಟಿದ್ದಿರಿ. ಇದು ಸಂವಿಧಾನ ಬಾಹಿರ ನಡೆ,‌ ಇಲ್ಲಿ ನೀರಾವರಿ ಇದೆ. ತೆಂಗು, ತರಕಾರಿ ಸೇರಿದಂತೆ ಎಲ್ಲ ಕೃಷಿ ಚಟುವಟಿಕೆ ನಡೆಯುತ್ತದೆ. ಅಂತಹ ಜಮೀನಿನನ್ನ ತೆಗೆದುಕೊಂಡು ಏನು ಮಾಡಲು ಹೊರಟಿದ್ದಿರಿ ಎಂದು ಕೇಂದ್ರ ಸಚಿವರು ತೀಕ್ಷ್ಣವಾಗಿ ಪ್ರಶ್ನಿಸಿದರು.

ಸತ್ಯಶೋಧನಾ ಸಮಿತಿ ವರದಿ ಎಲ್ಲಿ ಹೋಯಿತು ಹೆಚ್.ಕೆ.ಪಾಟೀಲರೇ?

ನಾನು ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಐದು ಭಾಗಗಳಲ್ಲಿ ವಿಶೇಷ ಟೌನ್ ಶಿಪ್ ಗಳನ್ನು ನಿರ್ಮಿಸಿ, ಬೆಂಗಳೂರಿನ ಮೇಲೆ ಒತ್ತಡ ಕಡಿಮೆ ಮಾಡಲು ನಿರ್ಧರಿಸಿದ್ದೆ. ಆಗ ಪ್ರತಿಪಕ್ಷ ಪ್ರತಿಪಕ್ಷ ಸ್ಥಾನದಲ್ಲಿದ್ದ ಕಾಂಗ್ರೆಸ್ ದೊಡ್ಡ ಅಪಪ್ರಚಾರ ನಡೆಸಿತ್ತು. ಈಗಿನ ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ಸಚಿವರಾಗಿರುವ ಹೆಚ್.ಕೆ.ಪಾಟೀಲ್ ಅವರ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಲಾಗಿತ್ತು. ಆ ಸಮಿತಿ ಬಿಡದಿ, ಸೋಲೂರು, ಹೊಸಕೋಟೆ ಮುಂತಾದ ಕಡೆ ಭೇಟಿ ನೀಡಿ ಸತೀಶೋಧನೆ ನಡೆಸಿತಲ್ಲ, ಆ ಸತ್ಯಶೋಧನೆಯ ವರದಿ ಏನಾಯಿತು? ಅದನ್ನು ಹಾಗೆಯೇ ಇಟ್ಟುಕೊಂಡಿದ್ದೀರೋ ಅಥವಾ ಯಾವುದಾದರೂ ಕಸದ ಬುಟ್ಟಿಗೆ ಎಸೆದಿದ್ದೀರೋ? ಒಂದು ವೇಳೆ ಇಟ್ಟುಕೊಂಡಿದ್ದರೆ ದಯವಿಟ್ಟು ಬಹಿರಂಗಪಡಿಸಿ ಎಂದು ಕೇಂದ್ರ ಸಚಿವ ಹೆಚ್‍.ಡಿ. ಕುಮಾರಸ್ವಾಮಿ ಅವರು ಆಗ್ರಹಿಸಿದರು.

ಮುಖ್ಯಮಂತ್ರಿಗೆ ಏನೆಲ್ಲಾ ಪಾಪದ ಕೆಲಸಗಳು ನಡೆಯುತ್ತಿವೆ ಎಂಬುದು ಗೊತ್ತಿದೆ. ಗೊತ್ತಿದ್ದರೂ ಸುಮ್ಮನಿದ್ದಾರೆ. ಅವರನ್ನು ಹೆದರಿಸಿ ಬೆದರಿಸಿಕೊಂಡು ದಂಧೆಕೋರರು ಸರ್ಕಾರದಲ್ಲಿ ಆಟ ಆಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.

ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಎಚ್ಎಂ ರಮೇಶ್ ಗೌಡ, ಟಿ ಎ. ಜವರಾಯಗೌಡ, ಮಾಜಿ ಶಾಸಕರಾದ ಆರ್ ಮಂಜುನಾಥ್, ಕೆ.ಎ. ತಿಪ್ಪೇಸ್ವಾಮಿ, ಪಕ್ಷದ ರಾಜ್ಯ ಕಾನೂನು ಘಟಕದ ಅಧ್ಯಕ್ಷ ರಂಗನಾಥ್, ಟೌನ್ ಶಿಪ್ ಭಾಗದ ರೈತ ಮುಖಂಡರು ಸೇರಿ ಅನೇಕ ಪ್ರಮುಖರು ಮಾಧ್ಯಮಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments