ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ 55 ರನ್ ಗಳ ಭಾರೀ ಅಂತರದಿಂದ ಹಾಲಿ ಚಾಂಪಿಯನ್ ಆರ್ ಸಿಬಿ ತಂಡವನ್ನು ಸೋಲಿಸಿದರೂ 3ನೇ ಸ್ಥಾನಿಯಾಗಿ ಪ್ಲೇಆಫ್ ಪ್ರವೇಶಿಸಿದರೆ, ಆರ್ ಸಿಬಿ ರನ್ ಸರಾಸರಿಯಲ್ಲಿ ಮೇಲುಗೈ ಸಾಧಿಸುವ ಮೂಲಕ ಅಗ್ರಸ್ಥಾನಿಯಾಗಿ ಪ್ಲೇಆಫ್ ಗೆ ಲಗ್ಗೆ ಹಾಕಿತು.
ಚಾಂಪಿಯನ್ ಆರ್ ಸಿಬಿ ಮಂಗಳವಾರ ನಡೆಯುವ ಮೊದಲ ಪ್ಲೇಆಫ್ ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಗೆ ಲಗ್ಗೆ ಹಾಕಿದರೆ, ಸೋತರೇ ಫೈನಲ್ ಪ್ರವೇಶಿಸಲು ಮತ್ತೊಂದು ಅವಕಾಶ ಪಡೆಯಲಿದೆ.
ಸನ್ ರೈಸರ್ಸ್ ಹೈದರಾಬಾದ್ ಎರಡು ಅಥವಾ ಮೊದಲ ಸ್ಥಾನ ಪಡೆಯಬೇಕಾದರೆ ಆರ್ ಸಿಬಿ ವಿರುದ್ಧ ಕನಿಷ್ಠ 87 ರನ್ ಗಳ ಅಂತರದಿಂದ ಗೆಲ್ಲಬೇಕಿತ್ತು. ಆದರೆ ಆರ್ ಸಿಬಿ ಸೋತರೂ ರನ್ ಸರಾಸರಿಯಲ್ಲಿ ಅಗ್ರಸ್ಥಾನ ಉಳಿಸಿಕೊಳ್ಳುವ ಪ್ರಯತ್ನ ಮಾಡಿಕೊಳ್ಳುವ ಪ್ರಯತ್ನ ಮಾಡಿ ಯಶಸ್ವಿಯಾಗಿ ಅಗ್ರಸ್ಥಾನಿಯಾಗಿ ಲೀಗ್ ಪೂರ್ಣಗೊಳಿಸಿತು. 255 ರನ್ ಗಳ ಬೃಹತ್ ಮೊತ್ತ ದಾಖಲಿಸಿ ಗೆದ್ದರೂ ಎಸ್ ಆರ್ ಎಚ್ ಎರಡನೇ ಸ್ಥಾನ ಪಡೆಯುವ ಆಸೆ ಈಡೇರಲಿಲ್ಲ.
ಆರ್ ಸಿಬಿ 14 ಪಂದ್ಯಗಳಲ್ಲಿ 9 ಗೆಲುವು ಹಾಗೂ 6 ಸೋಲಿನೊಂದಿಗೆ 18 ಅಂಕ ಸಂಪಾದಿಸಿ ರನ್ ಸರಾಸರಿಯಲ್ಲಿ ಮೇಲುಗೈ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಗಿಟ್ಟಿಸಿತು. ಗುಜರಾತ್ ಟೈಟಾನ್ಸ್ 18 ಅಂಕಗಳಿಸಿದರೂ ರನ್ ಸರಾಸರಿಯಲ್ಲಿ ಹಿಂದೆ ಬಿದ್ದು 2ನೇ ಸ್ಥಾನದಲ್ಲಿ ಉಳಿದುಕೊಂಡಿತು. ಹೈದರಾಬಾದ್ ತಂಡ 18 ಅಂಕ ಗಳಿಸಿದರೂ ಮೂರನೇ ಸ್ಥಾನಕ್ಕೆ ಕುಸಿಯಿತು.
ಕಠಿಣ ಗುರಿ ಬೆಂಬತ್ತಿದ ಆರ್ ಸಿಬಿಗೆ ವಿರಾಟ್ ಕೊಹ್ಲಿ ಮತ್ತು ಆರಂಭಿಕನಾಗಿ ಬಡ್ತಿ ಪಡೆದ ವೆಂಕಟೇಶ್ ಅಯ್ಯರ್ ಮೊದಲ ವಿಕೆಟ್ ಗೆ 60 ರನ್ ಪೇರಿಸಿ ಉತ್ತಮ ಆರಂಭ ನೀಡಿದರು. ಅಯ್ಯರ್ 19 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ 44 ರನ್ ಗಳಿಸಿದರೆ, ಕೊಹ್ಲಿ 15 ರನ್ ಬಾರಿಸಿ ಔಟಾಗಿ ನಿರಾಸೆ ಮೂಡಿಸಿದರು.
ನಂತರ ಬಂದ ಪಡಿಕ್ಕಲ್ ಕೂಡ (21) ಕೂಡ ದೊಡ್ಡ ಮೊತ್ತದ ಕಾಣಿಕೆ ನೀಡಲು ವಿಫಲರಾದರು. ನಂತರ ಜೊತೆಯಾದ ನಾಯಕ ರಜತ್ ಪಟಿದಾರ್ ಮತ್ತು ಕೃನಾಲ್ ಪಾಂಡ್ಯ 84 ರನ್ ಜೊತೆಯಾಟ ನಿಭಾಯಿಸಿದರು. ಪಟಿದಾರ್ 39 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿ 56 ರನ್ ಗಳಿಸಿದರು.
ಕೃನಾಲ್ ಪಾಂಡ್ಯ 31 ಎಸೆತಗಳಲ್ಲಿ 5 ಬೌಂಡರಿ ಒಳಗೊಂಡ 41 ರನ್ ಬಾರಿಸಿ ಔಟಾಗದೇ ಉಳಿದರು.ಟಿಮ್ ಡೇವಿಡ್ 15 ರನ್ ಬಾರಿಸಿ ತಂಡದ ಮೊತ್ತವನ್ನು 200ರ ಗಡಿ ತಲುಪಿಸಿದರು. ಅಂತಿಮವಾಗಿ ಆರ್ ಸಿಬಿ 4 ವಿಕೆಟ್ ಕಳೆದುಕೊಂಡು 200 ರನ್ ಗಳಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ತಂಡ ಮೂವರು ಬ್ಯಾಟ್ಸ್ ಮನ್ ಗಳ ಸಿಡಿಲಬ್ಬರದ ಬ್ಯಾಟಿಂಗ್ ನಿಂದ ಬೃಹತ್ ಮೊತ್ತ ಪೇರಿಸಿತು. ಅಭಿಷೇಕ್ ಶರ್ಮ 22 ಎಸೆತಗಳಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್ ನೆರವಿನೊಂದಿಗೆ 56 ರನ್ ಗಳಿಸಿದರು. ಇಶಾನ್ ಕಿಶನ್ 46 ಎಸೆತಗಳಲ್ಲಿ 8 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 79 ರನ್ ಚಚ್ಚಿದರು. ಹೆನ್ರಿಚ್ ಕ್ಲಾಸೆನ್ 24 ಎಸೆತಗಳಲ್ಲಿ 2 ಬೌಂಡರಿ ಮತ್ತು 5 ಸಿಕ್ಸರ್ ಒಳಗೊಂಡ 51 ರನ್ ಗಳಿಸಿದರು.



