ಶಿವಮೊಗ್ಗ: ಮುಖ್ಯಮಂತ್ರಿಗಳ ಬದಲಾವಣೆ ಮಾಡಬೇಕೆಂದು ನಿರ್ಧರಿಸಿದ ಕಾಂಗ್ರೆಸ್ ಹೈಕಮಾಂಡ್, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕಳೆದ 3 ವರ್ಷಗಳಲ್ಲಿ ಉತ್ತಮ ಆಡಳಿತ ಕೊಡುವುದರಲ್ಲಿ ವಿಫಲವಾಗಿದೆ ಎಂಬುದನ್ನು ಅನುಮೋದಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ಲೇಷಿಸಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆ ದೆಹಲಿಯಲ್ಲಿ ಸುಮಾರು ಐದರಿಂದ ಐದೂವರೆ ಗಂಟೆ ಕಾಲ ಮ್ಯಾರಥಾನ್ ಸಭೆಗಳು ಆದ ನಂತರ ಕೊನೆಗೂ ಮುಖ್ಯಮಂತ್ರಿ ರಾಜೀನಾಮೆ ಪಡೆಯಬೇಕೆಂಬ ನಿರ್ಧಾರ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಕೊನೆಯ ದಿನಗಳನ್ನು ನೋಡುತ್ತಿದೆ ಎಂಬುದೇ ಇದರ ಅರ್ಥ ಎಂದು ನುಡಿದರು.
ಸಿದ್ದರಾಮಯ್ಯನವರು ರಾಜೀನಾಮೆ ಕೊಟ್ಟು ಯಾರೇ ಸಿಎಂ ಆದರೂ ಅದು ತಾತ್ಕಾಲಿಕ. ಅವಧಿಪೂರ್ವ ಚುನಾವಣೆ ಕರ್ನಾಟಕದಲ್ಲಿ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪ್ರಶ್ನೆಗೆ ಉತ್ತರಿಸಿದರು. ಸಿದ್ದರಾಮಯ್ಯನವರು ರಾಜೀನಾಮೆ ಕೊಟ್ಟು ಯಾರೇ ಸಿಎಂ ಆದರೂ ಯಾವ ಗೊಂದಲ ಆಗಲಿದೆ ಎಂಬುದನ್ನು ನೀವೇನೋಡಿ ಎಂದು ತಿಳಿಸಿದರು. ಹೈಕಮಾಂಡ್ ತೀರ್ಮಾನದ ಕಾರಣ ಸಿದ್ದರಾಮಯ್ಯನವರು ರಾಜೀನಾಮೆ ಕೊಟ್ಟೇ ಕೊಡುತ್ತಾರೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು. ಯಾರು ಸಿಎಂ ಆಗುತ್ತಾರೆಂಬುದು ಭಗವಂತನಿಗೇ ಗೊತ್ತು ಎಂದು ತಿಳಿಸಿದರು.
ಕರ್ನಾಟಕದಲ್ಲೂ ಕಾಂಗ್ರೆಸ್ ಅವನತಿಗೆ ಹೋಗುತ್ತಿದೆ ಎಂಬುದು ಸ್ಪಷ್ಟವಾದ ಮುನ್ಸೂಚನೆ ಎಂದರು. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಯಾರು ಸಿಎಂ ಆಗುತ್ತಾರೆಂಬುದು ಮುಖ್ಯವಲ್ಲ; ನನಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ವೈಯಕ್ತಿಕ ದ್ವೇಷವಿಲ್ಲ. ಅತಿ ಹೆಚ್ಚು ಅನುಭವ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು. ಬಹುಶಃ ದಕ್ಷಿಣ ಭಾರತದಲ್ಲೇ ಇತರ ರಾಜ್ಯಗಳನ್ನು ಹೋಲಿಸಿದರೆ 10 ಲಕ್ಷ ಕೋಟಿ ಸಾಲವನ್ನು ಸಿದ್ದರಾಮಯ್ಯನವರು ಮಾಡಿದ್ದಾರೆ ಎಂದು ಗಮನ ಸೆಳೆದರು.
ರಾಜ್ಯವು ಸಾಲದ ಸುಳಿಯಲ್ಲಿ ಸಿಲುಕಿಹಾಕಿದ್ದನ್ನೂ ನಾವು ಅರ್ಥ ಮಾಡಿಕೊಳ್ಳಬೇಕು. ಯಾರು ಮುಖ್ಯಮಂತ್ರಿ ಆಗುವರೆಂಬುದು ಮುಖ್ಯವಲ್ಲ; ರಾಜ್ಯ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ನಾವೆಲ್ಲ ಆಲೋಚಿಸುವ ದುಸ್ಥಿತಿಗೆ ಬಂದಿದ್ದೇವೆ. ಆಂತರಿಕ ಕಚ್ಚಾಟದಿಂದ ಆಡಳಿತವೂ ಸಂಪೂರ್ಣ ಕುಸಿದುಹೋಗಿತ್ತು. ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣದಂಥ ಭ್ರಷ್ಟಾಚಾರ, ರಾಜ್ಯದಲ್ಲಿ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ನಡೆದಿದ್ದರೆ, ಅದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಆಡಳಿತದಲ್ಲಿ ನಡೆದಿದೆ ಎಂದು ಟೀಕಿಸಿದರು.
ಸರಕಾರದ ಆಡಳಿತಕ್ಕೆ ಉಪ ಚುನಾವಣೆ ಗೆಲುವು ಮಾನದಂಡ ಆಗಲು ಸಾಧ್ಯವಿಲ್ಲ; ಉಪ ಚುನಾವಣೆ ಗೆಲುವು ಮಾನದಂಡ ಆಗುವುದಾದರೆ ಸಿದ್ದರಾಮಯ್ಯನವರು ರಾಜೀನಾಮೆ ಕೊಡುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ತಿಳಿಸಿದರು. ರಾಜ್ಯದಲ್ಲಿ ಅಭಿವೃದ್ಧಿ ಇಲ್ಲದೇ ಭ್ರಷ್ಟಾಚಾರದಲ್ಲಿ ಮುಳುಗಿದ್ದ ಕಾಂಗ್ರೆಸ್ ಸರಕಾರವು, ಕೊನೆಗೂ ಸಿಎಂ ಹುದ್ದೆ ಬದಲಾವಣೆಗೆ ಮುಂದಾದುದನ್ನು ಗಮನಿಸಿದ್ದೇವೆ ಎಂದರು.



