Friday, May 29, 2026
Google search engine
Homeಜಿಲ್ಲಾ ಸುದ್ದಿನಿಯಂತ್ರಣ ತಪ್ಪಿದ ಕಾರು ಲಾರಿಗೆ ಡಿಕ್ಕಿ; ನಗರಸಭೆ ಮಾಜಿ ಸದಸ್ಯ ಸೇರಿ ಐವರು ಸಾವು

ನಿಯಂತ್ರಣ ತಪ್ಪಿದ ಕಾರು ಲಾರಿಗೆ ಡಿಕ್ಕಿ; ನಗರಸಭೆ ಮಾಜಿ ಸದಸ್ಯ ಸೇರಿ ಐವರು ಸಾವು

ಚಳ್ಳಕೆರೆ: ಮೊಳಕಾಲ್ಮೂರು ತಾಲ್ಲೂಕಿನ ತುಮಕೂರ್ಲಹಳ್ಳಿ ಗೇಟ್ ಸಮೀಪ ರಾಷ್ಟ್ರೀಯ ಹೆದ್ದಾರಿ 150Aರಲ್ಲಿ ಗುರುವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಚಳ್ಳಕೆರೆ ಮೂಲದ ಐವರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ನಡೆದಿದೆ.

ಬಳ್ಳಾರಿ ಕಡೆಯಿಂದ ಚಳ್ಳಕೆರೆಯತ್ತ ಟಾಟಾ ಇಂಡಿಗೋ ಕಾರು (ಕೆಎ 01 ಎಜಿ 4657)ದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಾರಿನ ಟೈರ್ ಏಕಾಏಕಿ ಸಿಡಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಯ ಡಿವೈಡರ್‌ಗೆ ಡಿಕ್ಕಿ ಹೊಡೆದು ಬಳಿಕ ನಿಂತಿದ್ದ ಲಾರಿಯ ಹಿಂಭಾಗಕ್ಕೆ ರಭಸವಾಗಿ ಅಪ್ಪಳಿಸಿದೆ.

ತುಮಕೂರ್ಲಹಳ್ಳಿ ಗೇಟ್ ಬಳಿಯ ಡಾಬಾ ಮುಂಭಾಗದಲ್ಲಿ ರಾತ್ರಿ ಸುಮಾರು 10.15ರ ವೇಳೆಗೆ ಈ ಅಪಘಾತ ಸಂಭವಿಸಿದ್ದು, ಡಿಕ್ಕಿಯ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನೊಳಗಿದ್ದವರು ಹೊರಬರಲಾರದ ಸ್ಥಿತಿ ನಿರ್ಮಾಣವಾಗಿದ್ದು, ಸ್ಥಳದಲ್ಲೇ ಐವರು ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಮೃತಪಟ್ಟವರನ್ನು ಚಳ್ಳಕೆರೆ ಮೂಲದ ಛಾಯಾಗ್ರಾಹಕ ರಾಘವೇಂದ್ರ (40), ರುದ್ರೇಶ್ (36), ಸೋಮಶೇಖರ (35), ಮಲ್ಲಿಕಾರ್ಜುನ ಹಾಗೂ ಪ್ರಮೋದ್ (35) ಎಂದು ಗುರುತಿಸಲಾಗಿದೆ. ಮೃತಪಟ್ಟವರಲ್ಲಿ ಪ್ರಮೋದ್ ಅವರು ಚಳ್ಳಕೆರೆ ನಗರಸಭೆಯ ಮಾಜಿ ಸದಸ್ಯರಾಗಿದ್ದರು.

ಅಪಘಾತದ ಭೀಕರ ಸದ್ದು ಕೇಳಿ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಮೊಳಕಾಲ್ಮೂರು ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಬಳಿಕ ಕಾರಿನೊಳಗೆ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆದು ಮೊಳಕಾಲ್ಮೂರು ತಾಲ್ಲೂಕು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದರು.

ಒಂದೇ ಪ್ರದೇಶದ ಐವರು ಯುವಕರು ಒಂದೇ ಅಪಘಾತದಲ್ಲಿ ಮೃತಪಟ್ಟಿರುವುದು ಚಳ್ಳಕೆರೆ ನಗರದಲ್ಲಿ ಆಘಾತ ಮೂಡಿಸಿದ್ದು, ಶುಕ್ರವಾರ ಬೆಳಗ್ಗೆಯಿಂದ ನಗರದಲ್ಲಿ ಈ ಘಟನೆ ಬಹುಚರ್ಚೆಯ ವಿಷಯವಾಗಿ ಮಾರ್ಪಟ್ಟಿತು. ಮೃತರ ಕುಟುಂಬಗಳಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು.

ಈ ಸಂಬಂಧ ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣಗಳ ಕುರಿತು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments