ಐಪಿಎಲ್ ನಲ್ಲಿ ಈ ಬಾರಿ ಕಳಪೆ ಪ್ರದರ್ಶನದ ಜವಾಬ್ದಾರಿ ಹೊತ್ತ ರಿಷಭ್ ಪಂತ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಐಪಿಎಲ್ ನಲ್ಲಿ ಆಡಿದ 14 ಪಂದ್ಯಗಳಲ್ಲಿ ಕೇವಲ 4ರಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದು ಪ್ಲೇಆಫ್ ರೇಸ್ ನಿಂದ ಹೊರಬಿದ್ದಿದೆ. ಎಲ್ ಎಸ್ ಜಿ ತಂಡದ ನಾಯಕನಾಗಿಯೂ ಪಂತ್ ಅವರ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ.
27 ಕೋಟಿಯ ಬೃಹತ್ ಮೊತ್ತಕ್ಕೆ ಎಲ್ ಎಸ್ ಜಿ ತಂಡಕ್ಕೆ ಆಗಮಿಸಿದ್ದ ಪಂತ್ ನಾಯಕತ್ವದ ಜವಾಬ್ದಾರಿಯನ್ನೂ ಪಡೆದಿದ್ದರು. ಆದರೆ ತಂಡವನ್ನು ಮುನ್ನಡೆಸುವ ರೀತಿಯಲ್ಲಿ ಎಡವಿದ್ದೂ ಅಲ್ಲದೇ ಬ್ಯಾಟಿಂಗ್ ನಲ್ಲಿ ಕೇವಲ 312 ರನ್ ಗಳಿಸಿ ನಿರಾಸೆ ಮೂಡಿಸಿದ್ದರು.
ರಿಷಭ್ ಪಂತ್ ರಾಜೀನಾಮೆಯನ್ನು ಫ್ರಾಂಚೈಸಿ ಅಂಗೀಕರಿಸಿದೆ. ಪಂತ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ನಮ್ಮನ್ನು ಸಂಪರ್ಕಿಸಿ ವಿಷಯ ತಿಳಿಸಿದರು. ಅವರ ನಿರ್ಧಾರವನ್ನು ಗೌರವಿಸಿ ಕೂಡಲೇ ರಾಜೀನಾಮೆ ಅಂಗೀಕರಿಸಲಾಗಿದೆ ಎಂದು ಫ್ರಾಂಚೈಸಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.



