ಬೆಂಗಳೂರಿನಲ್ಲಿ ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯ ಆರಂಭಿಸುವುದಾಗಿ ಸಿಎಂ ಡಿ ಕೆ ಶಿವಕುಮಾರ್ ಘೋಷಿಸಿದ್ದಾರೆ.
ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಮಂಗಳವಾರ ನಡೆದ ಗೂಗಲ್ ಐಓ ಕನೆಕ್ಟ್ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು. ಕರ್ನಾಟಕವನ್ನು ‘ಎಐ-ನೇಟಿವ್’ ರಾಜ್ಯವನ್ನಾಗಿ ರೂಪಿಸುವುದು ಮತ್ತು ಆಡಳಿತ ಹಾಗೂ ಸಾರ್ವಜನಿಕ ಸೇವೆಗಳ ವಿತರಣೆಯಲ್ಲಿ ಎಐ ತಂತ್ರಜ್ಞಾನ ಸಂಯೋಜಿಸುವುದು. ಎಐ ಪ್ರತಿಭೆಗಳನ್ನು ಅಭಿವೃದ್ಧಿಪಡಿಸಲು, ಸುಧಾರಿತ ಸಂಶೋಧನೆಯನ್ನು ಉತ್ತೇಜಿಸಲು ಮತ್ತು ಶಿಕ್ಷಣ ಸಂಸ್ಥೆಗಳು, ಉದ್ಯಮ ಹಾಗೂ ಸರ್ಕಾರದ ನಡುವೆ ಸಹಯೋಗವನ್ನು ಬೆಳೆಸಲು ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.
ಎಐ – ಸಹಾಯದ ಬೋಧನೆಯ ಮೂಲಕ ಶಿಕ್ಷಣ ಕ್ಷೇತ್ರ, ರೋಗಗಳ ಮುಂಚಿತ ಪತ್ತೆ ಮತ್ತು ಉತ್ತಮ ವೈದ್ಯಕೀಯ ಬೆಂಬಲದ ಮೂಲಕ ಆರೋಗ್ಯ ಕ್ಷೇತ್ರ, ರೈತರಿಗೆ ಎಐ – ಚಾಲಿತ ಸಲಹಾ ಸೇವೆಗಳ ಮೂಲಕ ಕೃಷಿ ಕ್ಷೇತ್ರ, ವೇಗದ ಮತ್ತು ಜನಸ್ನೇಹಿ ವಿತರಣೆಯ ಮೂಲಕ ಸರ್ಕಾರಿ ಸೇವೆಗಳು, ಎಐ ಪರಿಕರಗಳನ್ನು ಬಳಸಿಕೊಂಡು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಮೂಲಕ ಸಣ್ಣ ಉದ್ಯಮಗಳಲ್ಲಿ ಬದಲಾವಣೆ ತರಲಾಗುವುದು ಎಂದು ತಿಳಿಸಿದರು.
ತಂತ್ರಜ್ಞಾನ ಬೆಂಗಳೂರಿನ ದೈನಂದಿನ ಭಾಗ: ಭಾರತದ ನಾವೀನ್ಯತೆಯ ರಾಜಧಾನಿ ಮತ್ತು ವಿಶ್ವದ ಅತ್ಯಂತ ರೋಮಾಂಚಕ ತಂತ್ರಜ್ಞಾನ ಪರಿಸರ ವ್ಯವಸ್ಥೆಗಳಲ್ಲಿ ಒಂದಾದ ಬೆಂಗಳೂರಿನಲ್ಲಿ ನಡೆಯುತ್ತಿರುವ ಗೂಗಲ್ ಐ/ಓ ಕನೆಕ್ಟ್ ಇಂಡಿಯಾ 2026 ಕಾರ್ಯಕ್ರಮಕ್ಕೆ ನಿಮ್ಮನ್ನು ಸ್ವಾಗತಿಸಲು ನಾನು ಅತ್ಯಂತ ಹೆಮ್ಮೆಪಡುತ್ತೇನೆ. ಇಂತಹ ಒಂದು ಕಾರ್ಯಕ್ರಮವು ಇಷ್ಟು ಸಹಜವಾಗಿ ಮೂಡಿಬರಲು ವಿಶ್ವದಲ್ಲೇ ಕೆಲವೇ ಕೆಲವು ಸ್ಥಳಗಳಿವೆ. ಬೆಂಗಳೂರಿನಲ್ಲಿ ತಂತ್ರಜ್ಞಾನ ಎಂಬುದು ದೈನಂದಿನ ಜೀವನದ ಭಾಗವಾಗಿದೆ ಎಂದರು.
ಪ್ರತಿ ಪೀಳಿಗೆಯೂ ಮಾನವ ನಾಗರಿಕತೆಯ ಹಾದಿಯನ್ನೇ ಬದಲಾಯಿಸುವ ಒಂದು ತಂತ್ರಜ್ಞಾನವನ್ನು ಬಳುವಳಿಯಾಗಿ ಪಡೆಯುತ್ತದೆ. ಸ್ಟೀಮ್ ಇಂಜಿನ್ ಕೈಗಾರಿಕಾ ರಂಗವನ್ನು ಕ್ರಾಂತಿಗೊಳಿಸಿತು. ವಿದ್ಯುತ್ ನಗರಗಳನ್ನು ಮಾರ್ಪಡಿಸಿತು. ಇಂಟರ್ನೆಟ್ ಸಂಪರ್ಕ ಮಾಧ್ಯಮವನ್ನೇ ಬದಲಾಯಿಸಿತು. ಮೊಬೈಲ್ ತಂತ್ರಜ್ಞಾನವು ಎಲ್ಲವನ್ನೂ ಸುಲಭವಾಗಿ ಲಭ್ಯವಾಗುವಂತೆ ಮಾಡಿತು. ಇಂದು, ಕೃತಕ ಬುದ್ಧಿಮತ್ತೆಯು (AI) ಸ್ವತಃ ಮಾನವ ಸಾಮರ್ಥ್ಯವನ್ನೇ ಮಾರ್ಪಡಿಸುವ ಭರವಸೆ ನೀಡುತ್ತಿದೆ. ನಾನು ಹೋದಲ್ಲೆಲ್ಲ ಜನರು ಕೇವಲ ಮತ್ತೊಂದು ತಂತ್ರಜ್ಞಾನವಾಗಿ ಮಾತ್ರವಲ್ಲದೇ, ಬಹುಶಃ ನಮ್ಮ ಪೀಳಿಗೆಯನ್ನು ವ್ಯಾಖ್ಯಾನಿಸುವ ಪ್ರಮುಖ ಶಕ್ತಿಯಾಗಿ AI ಬಗ್ಗೆ ಮಾತನಾಡುತ್ತಾರೆ ಎಂದರು.
ಕರ್ನಾಟಕದ ಮುಖ್ಯಮಂತ್ರಿಯಾಗಿ, ನಾನು ನಿಮ್ಮ ಮುಂದೆ ಅಪಾರ ಹೆಮ್ಮೆಯಿಂದ ನಿಂತಿದ್ದೇನೆ. ಏಕೆಂದರೆ ಅಂತಹ ಭವಿಷ್ಯವನ್ನು ರೂಪಿಸಲು ಸಹಾಯ ಮಾಡುತ್ತಿರುವ ಪ್ರಮುಖ ಸ್ಥಳಗಳಲ್ಲಿ ನಮ್ಮ ಸ್ವಂತ ರಾಜ್ಯವೂ ಒಂದಾಗಿದೆ. ಬೆಂಗಳೂರಿನಲ್ಲಿ ತಂತ್ರಜ್ಞಾನವು ಕೇವಲ ಕಚೇರಿ ಕಟ್ಟಡಗಳಿಗೆ ಸೀಮಿತವಾಗಿಲ್ಲ. ಇದು ಕಾಫಿ ಶಾಪ್‌ಗಳ ಸಂಭಾಷಣೆಗಳಲ್ಲಿ, ನಮ್ಮ ತರಗತಿ ಕೋಣೆಗಳಲ್ಲಿ ಮತ್ತು ಸಂಶೋಧನಾ ಪ್ರಯೋಗಾಲಯಗಳಲ್ಲಿ ಪ್ರಾರಂಭವಾಗುತ್ತದೆ. ಮುಂದೆ ಅದು ಒಂದು ನವೋದ್ಯಮವಾಗಿ ರೂಪುಗೊಳ್ಳುತ್ತದೆ. ಕೆಲವು ಬಾರಿ ಯುನಿಕಾರ್ನ್ (ಪ್ರತಿಷ್ಠಿತ ಕಂಪನಿ) ಆಗುತ್ತದೆ ಮತ್ತು ಅಪರೂಪಕ್ಕೆ ಇಡೀ ಪ್ರಪಂಚವನ್ನೇ ಬದಲಾಯಿಸುತ್ತದೆ. ಇದು ಬೆಂಗಳೂರಿನ ಮನೋಭಾವ ಮತ್ತು ಇದು ಕರ್ನಾಟಕದ ಚೈತನ್ಯ ಎಂದು ಬಣ್ಣಿಸಿದರು.
ಒಂದು ಆಲೋಚನೆಯನ್ನು ತೆಗೆದುಕೊಳ್ಳಿ. ಆ ಒಂದು ಆಲೋಚನೆಯನ್ನೇ ನಿಮ್ಮ ಜೀವನವಾಗಿಸಿಕೊಳ್ಳಿ ಎಂದು ಸ್ವಾಮಿ ವಿವೇಕಾನಂದರು ನಮಗೆ ಸಂದೇಶವನ್ನು ನೀಡಿದ್ದಾರೆ. ಕರ್ನಾಟಕಕ್ಕೆ ಆ ಆಲೋಚನೆ ಅತ್ಯಂತ ಸ್ಪಷ್ಟವಾಗಿದೆ. ಇಂದು ನಮ್ಮ ರಾಜ್ಯವು ಭಾರತದ ಸಾಫ್ಟ್‌ವೇರ್ ರಫ್ತಿನ ಶೇ 40 ರಷ್ಟು ಕೊಡುಗೆ ನೀಡುತ್ತಿದೆ. ಬೆಂಗಳೂರು 17,000 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿಗೆ ನೆಲೆಯಾಗಿದೆ. ಇದು ಭಾರತದ ಸ್ಟಾರ್ಟ್‌ಅಪ್ ರಾಜಧಾನಿಯಾಗಿದೆ. ಇಡೀ ಪ್ರಪಂಚಕ್ಕಾಗಿ ಉತ್ಪನ್ನಗಳನ್ನು ವಿನ್ಯಾಸಗೊಳಿಸಲು, ಇಂಜಿನಿಯರಿಂಗ್ ಮತ್ತು ಹೊಸ ಆವಿಷ್ಕಾರಗಳನ್ನು ಮಾಡಲು ಸಾವಿರಾರು ಜಾಗತಿಕ ಸಾಮರ್ಥ್ಯ ಕೇಂದ್ರಗಳು (GCCs) ಕರ್ನಾಟಕವನ್ನು ಆರಿಸಿಕೊಂಡಿವೆ ಎಂದು ವಿವರಿಸಿದರು.



