ಬೆಂಗಳೂರು: ಸುಮಾರು 9,590 ಕೆ.ಜಿ. ಹಾಲಿನ ಪುಡಿ ದುರುಪಯೋಗಪಡಿಸಿಕೊಂಡ ಆರೋಪದ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿಗೆ ಕಾರಣ ಕೇಳಿ ಸರ್ಕಾರ ಜಾರಿ ಮಾಡಿದ್ದ ಶೋಕಾಸ್ ನೋಟಿಸ್‌ಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಾರಿ ಮಾಡಿದ್ದ ಶೋಕಾಸ್ ನೋಟಿಸ್‌ಗೆ ತಡೆ ನೀಡಬೇಕು ಎಂದು ಕೋರಿ ಉತ್ತರ ಕನ್ನಡ ಜಿಲ್ಲೆಯ ಸಿರಸಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಎಂ. ಆರ್. ನಂದ ಕುಮಾರ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗಡೆ ಮತ್ತು ನ್ಯಾಯಮೂರ್ತಿ ಗೀತಾ ಕೆ.ಬಿ. ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಆದೇಶ ಮಾಡಿದೆ.
ಅಲ್ಲದೇ, ಅರ್ಜಿದಾರರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಆದರೆ, ಅದಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಶೋಕಾಸ್ ನೋಟಿಸ್‌ಗೆ ಉತ್ತರಿಸಿಲ್ಲ. ಅದಕ್ಕೆ ಸಂಬಂಧಿಸಿದಂತೆ ವಿಚಾರಣೆಯೂ ನಡೆದಿಲ್ಲ. ಹೀಗಾಗಿ ಅರ್ಜಿದಾರ ಅಧಿಕಾರಿ ತಮಗೆ ನೀಡಿರುವ ನೋಟಿಸ್‌ಗೆ ಸೂಕ್ತ ವಿವರಣೆ ನೀಡಲು ಸ್ವತಂತ್ರರಾಗಿದ್ದಾರೆ.
ಪ್ರಕರಣದ ಕುರಿತು ಇಲಾಖೆಯ ತನಿಖೆ ಇನ್ನು ಆರಂಭವಾಗದ ಕಾರಣ ಅರ್ಜಿಯ ವಿಚಾಣೆಗೆ ಅರ್ಹತೆ ಇಲ್ಲ. ಆದ್ದರಿಂದ ಈ ಹಂತದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು.
ಜೊತೆಗೆ, ಅರ್ಜಿದಾರ ನಂದಕುಮಾರ್ ಅವರು ಮುಂದಿನ 15 ದಿನಗಳಲ್ಲಿ ನೋಟಿಸ್‌ಗೆ ಉತ್ತರ ನೀಡಬೇಕು. ಆ ಉತ್ತರವನ್ನು ಪೂರ್ವಾಗ್ರಹವಿಲ್ಲದೇ ಪರಿಶೀಲಿಸಿ ಕಾನೂನು ಪ್ರಕಾರವಾಗಿ ಕ್ರಮ ಕೈಗೊಳ್ಳಬೇಕು ಎಂದು ಪೀಠ ತನ್ನ ಆದೇಶದಲ್ಲಿ ಸ್ಪಷ್ಟ ಪಡಿಸಿದೆ.
ಪ್ರಕರಣದ ಹಿನ್ನೆಲೆ:
ಹಾನಗಲ್ನಲ್ಲಿ ಸಿಡಿಪಿಒ ಆಗಿ ನಂದ ಕುಮಾರ್ ಅವರು ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ, ಸುಮಾರು 9,590 ಕೆಜಿ ಹಾಲಿನ ಪುಡಿಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ 2026 ಮಾರ್ಚ್ 10 ರಂದು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದರು.
ಇದನ್ನು ಪ್ರಶ್ನಿಸಿ ನಂದಕುಮಾರ್ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ)ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಕೆಎಟಿ ಅರ್ಜಿ ವಜಾಗೊಳಿಸಿತ್ತು.
ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ಕೇವಲ 20 ದಿನಗಳ ಕಾಲ ಮಾತ್ರ ಅಲ್ಲಿ ಕರ್ತವ್ಯ ನಿರ್ವಹಿಸಿದ್ದು, ಅಷ್ಟು ಕಡಿಮೆ ಅವಧಿಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಹಾಲಿನ ಪುಡಿ ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ. ಕೇವಲ ಪತ್ರಿಕೆಗಳ ವರದಿಯ ಆಧಾರದಲ್ಲಿ ಸೂಕ್ತ ವಿವೇಚನೆ ಬಳಸದೇ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಅರ್ಜಿದಾರರನ್ನು ಈಗಾಗಲೇ ತಪ್ಪಿತಸ್ಥರು ಎಂಬುದಾಗಿ ಬಿಂಬಿಸಲಾಗುತ್ತಿದೆ. ಆದ್ದರಿಂದ ಶೋಕಾಸ್ ನೋಟಿಸ್‌ಗೆ ತಡೆ ನೀಡಬೇಕು ಎಂದು ಕೋರಿದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ವಕೀಲರು, ಅರ್ಜಿದಾರರಿಗೆ ಜಾರಿ ಮಾಡಿರುವ ನೋಟಿಸ್ ಕೇವಲ ಕಾರಣ ಕೇಳಿ ನೀಡಲಾಗಿದೆ. ಕೇವಲ ಪ್ರಾಥಮಿಕ ನೋಟಿಸ್ ಅಷ್ಟೇ ಆಗಿದೆ. ಅದಕ್ಕೆ ಅಧಿಕಾರಿ ಸೂಕ್ತ ಮತ್ತು ತೃಪ್ತಿದಾಯಕ ಉತ್ತರ ನೀಡಿದರೆ ಇಲಾಖೆಯು ಪ್ರಕರಣ ಕೈಬಿಡಬಹುದಾಗಿದೆ.
ಒಂದು ವೇಳೆ ಉತ್ತರ ತೃಪ್ತಿಕರವಾಗಿಲ್ಲದಿದ್ದರೆ ಕಾನೂನು ರೀತ್ಯಾ ತನಿಖೆ ನಡೆಯಲಿದ್ದು, ಅಧಿಕಾರಿ ತಮ್ಮ ರಕ್ಷಣೆ ಮಾಡಿಕೊಳ್ಳಲು ಸಂಪೂರ್ಣ ಮುಕ್ತ ಅವಕಾಶವಿರಲಿದೆ. ಆದ್ದರಿಂದ ಅರ್ಜಿ ವಿಚಾರಣೆಗೆ ಅರ್ಹವಲಿಲ್ಲ. ಹೀಗಾಗಿ ಅರ್ಜಿಯನ್ನು ವಜಾಗೊಳಿಸಬೇಕು ಕೋರಿದರು.



