ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿದ್ದರಾಮಯ್ಯ ನೇತೃತ್ವದಲ್ಲಿ ಕೆಪಿಸಿಸಿ ಮತ್ತು ಸರ್ಕಾರದ ನಡುವೆ ಸಮನ್ವಯ ಸಮಿತಿ ರಚಿಸುವಂತೆ ಹೈಕಮಾಂಡ್ ಮುಂದೆ ಭಾವಿ ಸಿಎಂ ಡಿಕೆ ಶಿವಕುಮಾರ್ ಮನವಿ ಮಾಡುವ ಮೂಲಕ ಹೊಸ ದಾಳ ಪ್ರಯೋಗಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರೇ ಆಯ್ಕೆಯಾದರೂ ಅವರು ಸಿದ್ದರಾಮಯ್ಯ ಬಣದವರೇ ಆಗಿರುತ್ತಾರೆ. ಅವರು ಸರ್ಕಾರದ ಆಡಳಿತದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಬಹುದು. ಇದರಿಂದ ಕೆಪಿಸಿಸಿ ಮತ್ತು ಸರ್ಕಾರದ ನಡುವೆ ಮುಸುಕಿನ ಗುದ್ಡಾಟ ತಪ್ಪಿಸಲು ಡಿಕೆ ಶಿವಕುಮಾರ್ ಸಮನ್ವಯ ಸಮಿತಿ ರಚನೆಯ ಪ್ರಸ್ತಾಪ ಮುಂದಿಟ್ಟಿದ್ದಾರೆ ಎನ್ನಲಾಗಿದೆ.
ದೆಹಲಿಯಲ್ಲಿ ಸಿಎಂ ಭೇಟಿ ನೀಡಿದ ನಂತರ ಹೈಕಮಾಂಡ್ ಭೇಟಿ ಮಾಡಿದ ಡಿಕೆ ಶಿವಕುಮಾರ್, ಪಕ್ಷದೊಳಗೆ ತಮ್ಮ ವಿರುದ್ಧ ಇರುವ ಅಸಮಾಧಾನವನ್ನು ತಡೆಯಲು ಈ ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಜೆಡಿಎಸ್ ಜೊತೆ ಮೈತ್ರಿ ಸರ್ಕಾರ ರಚನೆ ಮಾಡಿದಾಗ ಸಿದ್ದರಾಮಯ್ಯ ಸಮನ್ವಯ ಸಮಿತಿ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ ರೀತಿಯಲ್ಲೇ ಕೆಪಿಸಿಸಿ ಮತ್ತು ಸರ್ಕಾರದ ನಡುವೆ ಸಮನ್ವಯ ಸಮಿತಿ ಮುಖ್ಯಸ್ಥರಾಗಿ ನೇಮಕ ಮಾಡಿದರೆ ಒಳ್ಳೆಯದು. ಇದರಿಂದ ಅವರ ಅನುಭವದೊಂದಿಗೆ ಸರ್ಕಾರಕ್ಕೂ ಸೂಕ್ತ ಸಲಹೆ ಸಿಗುತ್ತದೆ ಮತ್ತು ಕೆಪಿಸಿಸಿಯಲ್ಲಿ ಅಸಮಾಧಾನವನ್ನು ತಡೆಯಬಹುದು ಎಂಬುದು ಅವರ ಲೆಕ್ಕಾಚಾರವಾಗಿದೆ.



