ವಿಧಾನಸಭಾ ಚುನಾವಣೆ ಮುಕ್ತಾಯವಾದ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ಪಕ್ಷದ ಮುಖಂಡರ ಮೇಲೆ ಸರಣಿ ದಾಳಿ ನಡೆಯುತ್ತಿದೆ. ನಿನ್ನೆ ಟಿಎಂಸಿ ಎರಡನೇ ಮುಖ್ಯಸ್ಥ ಅಭಿಷೇಕ್ ಬ್ಯಾನರ್ಜಿ ಮೇಲೆ ದಾಳಿ ನಡೆದ ನಂತರ ಇಂದು ಸಂಸದನ ಮೇಲೆ ಹಲ್ಲೆ ನಡೆದಿದೆ.
ಪಶ್ಚಿಮ ಬಂಗಾಳದ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಮೇಲೆ ಅವರದ್ದೇ ಕ್ಷೇತ್ರವಾದ ಹೂಗ್ಲಿಯಲ್ಲಿ ಭಾನುವಾರ ಬೆಳಿಗ್ಗೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಭದ್ರತಾ ಸಿಬ್ಬಂದಿ ರಕ್ಷಣೆಗೆ ಮುಂದಾದರೂ ಗುಂಪು ಅವರ ಮೇಲೆ ದಾಳಿ ನಡೆಸಲು ತಪ್ಪಿಸಿ ಕೊಳ್ಳುವ ಯತ್ನದಲ್ಲಿ ಅವರು ಕೈಗಳನ್ನು ಅಡ್ಡ ಹಿಡಿದಿದ್ದು ನಂತರ ನೆಲದ ಮೇಲೆ ಬಿದ್ದಿದ್ದಾರೆ.
ಶನಿವಾರ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಕಪ್ಪುಬಾವುಟ ಪ್ರದರ್ಶಿಸಿದ ಪ್ರತಿಭಟನಾಕಾರರು ಕಳ್ಳ ಕಳ್ಳ ಎಂದು ಘೋಷಣೆ ಕೂಗಿದ್ದು, ನಂತರ ಅವರ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆಯಲ್ಲಿ ಗಾಯಗೊಂಡ ಅಭಿಷೇಕ್ ಬ್ಯಾನರ್ಜಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಭಿಷೇಕ್ ಬ್ಯಾನರ್ಜಿ ದಾಖಲಿಸಿದ್ದ ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಸಿಎಂ ಮಮತಾ ಬ್ಯಾನರ್ಜಿ, ಬಿಜೆಪಿ ಕಾರ್ಯಕರ್ತರು ಕೊಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಸೋನಾಪುರ್ 24 ಪ್ಯಾರಾಗಾಮ್ ಜಿಲ್ಲೆಯಲ್ಲಿ ನಡೆದ ಹಲ್ಲೆ ಪ್ರಕರಣ ಬಿಜೆಪಿಯ ಉದ್ದೇಶಪೂರ್ವಕ ದಾಳಿಯಾಗಿದೆ ಎಂದು ಆರೋಪಿಸಿದರು.
ಅಭಿಷೇಕ್ ಬ್ಯಾನರ್ಜಿ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು ಮೊಟ್ಟೆ ಹಾಗೂ ಕಲ್ಲು ಎಸೆದಿದ್ದಾರೆ. ಘಟನೆ ಸಂಬಂಧ ಪೊಲೀಸರು 5 ಮಂದಿಯ ಬಂಧಿಸಿದ್ದಾರೆ.



