ಅಹಮದಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 5 ವಿಕೆಟ್ ಗಳಿಂದ ಗುಜರಾತ್ ಟೈಟಾನ್ಸ್ ತಂಡವನ್ನು ಬಗ್ಗುಬಡಿದು ಸತತ ಎರಡನೇ ಬಾರಿ ಐಪಿಎಲ್ ಚಾಂಪಿಯನ್
ಭಾನುವಾರ ನಡೆದ ಫೈನಲ್ ನಲ್ಲಿ ಟಾಸ್ ಗೆದ್ದು ರನ್ ಚೇಸ್ ಮಾಡಲು ನಿರ್ಧರಿಸಿದ ಆರ್ ಸಿಬಿಗೆ ಬೌಲರ್ ಗಳು ಉತ್ತಮ ಸಾಥ್ ನೀಡಿ 20 ಓವರ್ ಗಳಲ್ಲಿ 8 ವಿಕೆಟ್ ಗೆ 155 ರನ್ ಗಳ ಸಾಧಾರಣ ಮೊತ್ತಕ್ಕೆ ಗುಜರಾತ್ ಟೈಟಾನ್ಸ್ ತಂಡವನ್ನು ಕಟ್ಟಿ ಹಾಕಿದರು. ಆರ್ ಸಿಬಿ ಈ ಗುರಿಯನ್ನು 5 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ಸಾಧಾರಣ ಗುರಿ ಬೆಂಬತ್ತಿದ ಆರ್ ಸಿಬಿ ತಂಡಕ್ಕೆ ವೆಂಕಟೇಶ್ ಅಯ್ಯರ್ ಮತ್ತು ವಿರಾಟ್ ಕೊಹ್ಲಿ ಸ್ಫೋಟಕ ಆರಂಭ ನೀಡಿದರು. ಇಬ್ಬರು ಮೊದಲ ವಿಕೆಟ್ ಗೆ 4.3 ಓವರ್ ಗಳಲ್ಲಿ 62 ರನ್ ಚಚ್ಚಿದರು.
16 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 32 ರನ್ ಬಾರಿಸಿದ್ದ ವೆಂಕಟೇಶ್ ಅಯ್ಯರ್ ಔಟಾದ ನಂತರ ಬಂದ ದೇವದತ್ ಪಡಿಕಲ್ (1) ಬೇಗನೇ ನಿರ್ಗಮಿಸಿದರು.
ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ 42 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ ಅಜೇಯ 75 ರನ್ ಬಾರಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.
ವಾಷಿಂಗ್ಟನ್ ಸುಂದರ್ ಆಸರೆ
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ಆರ್ ಸಿಬಿ ಕರಾರುವಕ್ ದಾಳಿಗೆ ತತ್ತರಿಸಿತು.
ಆರ್ ಸಿಬಿ ತಂಡದ ಬೌಲಿಂಗ್ ಎಷ್ಟು ಕರಾರುವಕ್ ಆಗಿತ್ತೆಂದರೆ ಗುಜರಾತ್ ಟೈಟಾನ್ಸ್ ಪರ ಅತ್ಯಧಿಕ ರನ್ ಕೊಳ್ಳೆ ಹೊಡೆದಿರುವ ಆರಂಭಿಕರಾದ ನಾಯಕ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಅವರನ್ನು ಕಳಪೆ ಮೊತ್ತಕ್ಕೆ ಪೆವಿಲಿಯನ್ ಗೆ ಕಳುಹಿಸಿದರು.
ಜೋಸ್ ಹಾಜೆಲ್ ವುಡ್ 10 ರನ್ ಗಳಿಸಿದ ಶುಭಮನ್ ಗಿಲ್ ಅವರನ್ನು ಹಾಗೂ ಭುವನೇಶ್ವರ್ ಕುಮಾರ್ 10 ರನ್ ಬಾರಿಸಿದ್ದ ಸಾಯಿ ಸುದರ್ಶನ್ ಅವರನ್ನು ಔಟ್ ಮಾಡಿದರು. ಇವರಿಬ್ಬರು ಔಟಾಗುತ್ತಿದ್ದಂತೆ ಆರ್ ಸಿಬಿ ತಂಡದಲ್ಲಿ ಸಂಭ್ರಮ ಮುಗಿಲುಮುಟ್ಟಿತು.
ಇದೇ ಹಿಡಿತವನ್ನು ಕೊನೆಯವರೆಗೂ ಬೌಲರ್ ಗಳು ಕಾಪಾಡಿಕೊಂಡು ಬಂದರು. ರಸಿಕ್ ಖಾನ್ 3 ವಿಕೆಟ್ ಪಡೆದು ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
ಗುಜರಾತ್ ಟೈಟಾನ್ಸ್ ಪರ ವಾಷಿಂಗ್ಟನ್ ಸುಂದರ್ 37 ಎಸೆತಗಳಲ್ಲಿ 5 ಬೌಂಡರಿ ಸಹಾಯದಿಂದ ಬರೋಬ್ಬರಿ ಅರ್ಧಶತಕ ಬಾರಿಸಿ ತಂಡವನ್ನು 150ರ ಗಡಿ ದಾಟಿಸಿದರು.



