Tuesday, June 9, 2026
Google search engine
Homeರಾಜ್ಯಮಂಡ್ಯದಲ್ಲಿ ಹೃದಯವಿದ್ರಾವಕ ಘಟನೆ: ನಷ್ಟದಿಂದ ಬೇಸತ್ತು ಪತ್ನಿ, ಪುತ್ರ ಕೊಂದು ತಂದೆ ಆತ್ಮಹತ್ಯೆ

ಮಂಡ್ಯದಲ್ಲಿ ಹೃದಯವಿದ್ರಾವಕ ಘಟನೆ: ನಷ್ಟದಿಂದ ಬೇಸತ್ತು ಪತ್ನಿ, ಪುತ್ರ ಕೊಂದು ತಂದೆ ಆತ್ಮಹತ್ಯೆ

ಮಂಡ್ಯ: ಬಟ್ಟೆ ವ್ಯಾಪಾರದಲ್ಲಿ ಆದ ನಷ್ಟದಿಂದ ಸಾಲದ ಒತ್ತಡ ಸಹಿಸಲು ಆಗದೇ ಪತ್ನಿ ಹಾಗೂ ನವವಿವಾಹಿತ ಪುತ್ರನ ಕೊಂದು ತಂದೆ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಮಂಡ್ಯದಲ್ಲಿ ನಡೆದಿದೆ.

ನೆಹರು ನಗರದಲ್ಲಿ ಪ್ರಭಾಕರ್, ಪತ್ನಿ ಜ್ಯೋತಿ ಹಾಗೂ ನವವಿವಾಹಿತ ಪುತ್ರ ಸಂತೋಷ್ ಮೃತಪಟ್ಟಿದ್ದಾರೆ.

ಜ್ಯೋತಿ ಮತ್ತು ಸಂತೋಷ್ ಕಳೆದ ರಾತ್ರಿ ಮನೆಯಲ್ಲೇ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ ಮಂಗಳವಾರ ಬೆಳಗ್ಗೆ ಪ್ರಭಾಕರ್ ಶವ ತಮ್ಮದೇ ಬಟ್ಟೆ ಅಂಗಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮೃತ ಸಂತೋಷ್ ಅವರಿಗೆ ಕೇವಲ ಒಂದು ತಿಂಗಳ ಹಿಂದಷ್ಟೇ ಮದುವೆ ಆಗಿತ್ತು. ಮೂವರ ಸಾವಿಗೆ ನಿಖರ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ.

ಸಾಲದ ಒತ್ತಡ ಹಾಗೂ ವ್ಯಾಪಾರದಲ್ಲಿ ಉಂಟಾದ ತೀವ್ರ ನಷ್ಟದಿಂದ ಬೇಸತ್ತ ಬಟ್ಟೆ ವ್ಯಾಪಾರಿಯಾಗಿರುವ ಪ್ರಭಾಕರ್ ಅವರು, ತಮ್ಮ ಪತ್ನಿ ಮತ್ತು ಮಗನನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಬಳಿಕ ತಾವೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಡೆತ್​ನೋಟ್​​ನಲ್ಲಿ ಸರ್ಕಾರದ ‘ಶಕ್ತಿ ಯೋಜನೆ’ ಉಲ್ಲೇಖ

ಘಟನಾ ಸ್ಥಳಕ್ಕೆ ಮಂಡ್ಯ ಪೂರ್ವ ಠಾಣೆಯ ಪೊಲೀಸರು ಹಾಗೂ ಮಂಡ್ಯ ಎಸ್ಪಿ ಶೋಭರಾಣಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪ್ರಭಾಕರ್ ಅವರು ಬರೆದಿದ್ದಾರೆ ಎನ್ನಲಾದ ಆಘಾತಕಾರಿ ‘ಡೆತ್‌ನೋಟ್’ ಒಂದು ಪತ್ತೆಯಾಗಿದೆ. ಈ ಡೆತ್‌ನೋಟ್‌ನಲ್ಲಿ ಪ್ರಭಾಕರ್ ಅವರು ತಮ್ಮ ಸಾವಿಗೆ ಮತ್ತು ಕುಟುಂಬದ ಅಂತ್ಯಕ್ಕೆ ಆರ್ಥಿಕ ಸಂಕಷ್ಟವೇ ಕಾರಣ ಎಂದು ಉಲ್ಲೇಖಿಸಿದ್ದಾರೆ.

ಸರ್ಕಾರ ಜಾರಿಗೆ ತಂದಿರುವ ಉಚಿತ ಬಸ್ ಪ್ರಯಾಣದ ‘ಶಕ್ತಿ ಯೋಜನೆ’ಯಿಂದಾಗಿ ಜನರು ಬೇರೆ ನಗರಗಳಿಗೆ ತೆರಳುತ್ತಿರುವುದರಿಂದ ಸ್ಥಳೀಯ ಬಟ್ಟೆ ವ್ಯಾಪಾರ ಸಂಪೂರ್ಣ ಕುಸಿದಿದೆ. ವ್ಯಾಪಾರ ಇಲ್ಲದ ಕಾರಣ ಖಾಸಗಿ ಫೈನಾನ್ಸ್‌ಗಳಲ್ಲಿ ಮಾಡಿದ್ದ ಸಾಲಕ್ಕೆ ಸರಿಯಾಗಿ ಬಡ್ಡಿ ಕಟ್ಟಲು ಸಾಧ್ಯವಾಗುತ್ತಿರಲಿಲ್ಲ. ಸಾಲ ಮರುಪಾವತಿ ಮಾಡದಿದ್ದರೆ ಖಾಸಗಿ ಫೈನಾನ್ಸ್ ಕಂಪನಿಗಳ ಏಜೆಂಟರು ಮನೆ ಬಾಗಿಲಿಗೆ ಬಂದು ಕಿರುಕುಳ ನೀಡುವ ಭಯವಿತ್ತು. ಮಾನ, ಮರ್ಯಾದೆಗೆ ಹೆದರಿ ಈ ನಿರ್ಧಾರ ಕೈಗೊಂಡಿರುವುದಾಗಿ ಬರೆಯಲಾಗಿದೆ.

ಘಟನಾ ಸ್ಥಳಕ್ಕೆ ಮಂಡ್ಯ ಪೂರ್ವ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments