ಮಂಗಳೂರು: ನಗರದಲ್ಲಿ ಗುತ್ತಿಗೆ ಕಂಪನಿ ನಡೆಸುತ್ತಿದ್ದ ಉದ್ಯಮಿಗೆ ಕಂಪನಿಯ ಇಬ್ಬರು ಕೆಲಸಗಾರರೇ ಹನಿಟ್ರ್ಯಾಪ್ ಹಾಗೂ ಬ್ಲ್ಯಾಕ್ ಮೇಲ್ ಮಾಡಿ 2.77 ಕೋಟಿ ವಸೂಲಿ ಮಾಡಿ, ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದ ಇಬ್ಬರನ್ನು ಊರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಜಾಮ್ ಅಲಿಯಾಸ್ ಇಬ್ರಾಹಿಂ ಹಾಗೂ ಜಿತೇಶ್ ಬಂಧಿತ ಆರೋಪಿಗಳಾಗಿದ್ದು ಇಬ್ಬರನ್ನು ಹೆಚ್ಚಿನ ವಿಚಾರಣೆ ನಡೆಸಲಾಗಿದೆ ಎಂದು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
2024ರ ಜನವರಿಯಲ್ಲಿ ಜಿತೇಶ್ ಎಂಬಾತ ಉದ್ಯಮಿಯ ಮೊಬೈಲ್ಗೆ ಕರೆ ಮಾಡಿ ಅವರು ಮತ್ತು ಆತ ಒಟ್ಟಿಗೆ ಇರುವ ಅಶ್ಲೀಲ ಪೋಟೋವನ್ನು ಕಳುಹಿಸಿ, ವಿಡಿಯೋ ಕೂಡಾ ಇರುವುದಾಗಿ ಹೇಳಿದ್ದಲ್ಲದೆ, ಅದನ್ನು ವೈರಲ್ ಮಾಡುವುದಾಗಿ ಜತೆಗೆ ಅವರ ಹೆಂಡತಿಗೂ ಕಳುಹಿಸುವುದಾಗಿ ಬೆದರಿಕೆ ಹಾಕಿ 35 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದ.
ದೂರುದಾರರು ಮರ್ಯಾದೆ ಹೋಗುತ್ತದೆ ಎಂದು ಆತ ತಿಳಿಸಿದಂತೆ ಫೆಬ್ರವರಿಯಲ್ಲಿ ಕದ್ರಿ ಬಳಿಯ ಹೋಟೆಲ್ವೊಂದಕ್ಕೆ ಹೋಗಿದ್ದಾರೆ. ಅಲ್ಲಿ ಜಿತೇಶ್ 35 ಲಕ್ಷ ರೂ. ಕೊಡದಿದ್ದರೆ ಸುಮ್ಮನೆ ಬಿಡುವುದಿಲ್ಲ ಮತ್ತು ಕೊಲೆ ಮಾಡುವುದಾಗಿ ಬೆದರಿಸಿದ್ದಾನೆ.
ಆತನಿಗೆ ಹೆದರಿ ತನ್ನ ಬ್ಯಾಂಕ್ ಖಾತೆಯ 10 ಲಕ್ಷ ರೂ. ಮೊತ್ತದ 2 ಚೆಕ್ ಮತ್ತು 15 ಲಕ್ಷದ ಒಂದು ಚೆಕ್ ನೀಡಿದ್ದಾರೆ. ಅದರಲ್ಲಿ10 ಲಕ್ಷದ 2 ಚೆಕ್ನಲ್ಲಿದ್ದ 20 ಲಕ್ಷ ರೂ.ವನ್ನು ಜಿತೇಶ್ ವರ್ಗಾಯಿಸಿಕೊಂಡಿದ್ದಾನೆ. ಆದರೆ ಖಾತೆಯಲ್ಲಿ 20 ಲಕ್ಷ ಮಾತ್ರ ಇದ್ದುದರಿಂದ, 15 ಲಕ್ಷದ ಚೆಕ್ ಡ್ರಾ ಆಗಿರಲಿಲ್ಲ.
ಇಬ್ಬರಿಂದಲೂ ಬೆದರಿಕೆ:
ಬಳಿಕ, ಮೇ ತಿಂಗಳಲ್ಲಿ ಮನೆಗೆ ಬಂದು ಆರೋಪಿ ಜಿತೇಶ್ ಹೆಚ್ಚಿನ ಹಣ ಕೊಡುವಂತೆ ಬೆದರಿಕೆ ಹಾಕಿದ್ದಾನೆ. ಆಗ ಉದ್ಯಮಿ ತನ್ನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನಿಜಾಮ್ಗೆ ವಿಷಯ ತಿಳಿಸಿದ್ದಾರೆ. ಆಗ ನಿಜಾಮ್ ದೂರುದಾರರ ಮನೆಗೆ ಬಂದು ಜಿತೇಶ್ನನ್ನು ಕರೆದುಕೊಂಡು ಹೋಗಿದ್ದಾನೆ.
ಒಂದು ವಾರದ ಬಳಿಕ ನಿಜಾಮ್ ದೂರುದಾರರ ಬಳಿ, ಜಿತೇಶ್ ನಿಮ್ಮ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೇಸಿನಲ್ಲಿ ಜಿತೇಶ್ ಆತ್ಮಹತ್ಯೆ ನೋಟ್ ಬರೆದ ಪೋಟೋ ವೈರಲ್ ಮಾಡಿದರೆ ನಿಮ್ಮ ಮೇಲೆ ಕೇಸ್ ಆಗುತ್ತದೆ. 10 ವರ್ಷ ಜೈಲು ಶಿಕ್ಷೆ ಆಗುತ್ತದೆ ಎಂದು ಹೆದರಿಸಿದ್ದಾನೆ. ಆ ಬಳಿಕ ನಿಜಾಮ್ 2024ರ ಜೂನ್ನಿಂದ 2026 ಜನವರಿ ತಿಂಗಳವರೆಗೆ 2,57,00,000 ರೂ. ಹಣವನ್ನು ಅವರಿಂದ ಪಡೆದುಕೊಂಡಿದ್ದಾನೆ. ಇದಾದ ಬಳಿಕ ಒಂದು ದಿನ ಜಿತೇಶ್ನನ್ನು ಉದ್ಯಮಿ ಮಂಗಳೂರಿನಲ್ಲಿ ನೋಡಿದ್ದು, ಈ ಬಗ್ಗೆ ನಿಜಾಮ್ನಲ್ಲಿ ವಿಚಾರಿಸಿದ್ದಾರೆ. ಆಗ ನಿಜಾಮ್ ಮತ್ತೆ ಉದ್ಯಮಿಯನ್ನು ಬೆದರಿಸಿದ್ದಾನೆ.
ಮತ್ತೆ ಹಣಕ್ಕೆ ಬೇಡಿಕೆ
2026ರ ಜೂ.1ರಂದು ಜಿತೇಶ್ ಮತ್ತೆ ಆವರಿಗೆ ಕರೆ ಮಾಡಿ ಆತನಲ್ಲಿ ಅವರ ಅಶ್ಲೀಲ ಫೋಟೋ ಮತ್ತು ವಿಡಿಯೋ ಇದ್ದು, ಇದನ್ನು ವೈರಲ್ ಮಾಡುವುದಾಗಿ ತಿಳಿಸಿ 10 ಲಕ್ಷ ರೂ. ಹಣದ ಬೇಡಿಕೆ ಇಟ್ಟಿದ್ದಾನೆ. ಹಣ ಕೊಡದಿದ್ದಲಿ ಫೋಟೋ ವೈರಲ್ ಮಾಡುವುದಾಗಿ, ಅದಕ್ಕೂ ಬಗ್ಗದಿದ್ದರೆ ಕೊಲೆ ಮಾಡುವುದಾಗಿ, ಮನೆಯವರಿಗೆ ಫೋಟೋ ಕಳುಹಿಸಿ ಮಾನ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾನೆ. ಇಬ್ಬರ ಬ್ಲ್ಯಾಕ್ಮೇಲ್ ನಿಂದ ರೋಸಿ ಹೋದ ಉದ್ಯಮಿ, ಉರ್ವ ಠಾಣೆಗೆ ದೂರು ನೀಡಿದ್ದು, ಜಿತೇಶ್ ಮತ್ತು ನಿಜಾಮ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.



