ನವದೆಹಲಿ: ಕೇಂದ್ರ ಸರ್ಕಾರ 12 ಪರಮಾಣು ಸಿಡಿತಲೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ನಿಯೋಜಿಸಿದೆ. ಈ ಮೂಲಕ ಭಾರತ ಪರಮಾಣು ಶಸ್ತ್ರಾಸ್ತ್ರ ನೀತಿಯಲ್ಲಿ ಮಹತ್ವದ ಬದಲಾವಣೆ ಮಾಡುವ ಮೂಲಕ ಕುತೂಹಲದ ಹೆಜ್ಜೆ ಇಟ್ಟಿದೆ.
ಸ್ಟಾಕ್‌ಹೋಮ್ ಅಂತರರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆಯ (SIPRI) ವರದಿಯಲ್ಲಿ ಈ ವಿಷಯ ಬಹಿರಂಗಪಡಿಸಲಾಗಿದೆ.
ಇದುವರೆಗೂ ಭಾರತ ಪರಮಾಣು ಸಿಡಿತಲೆ ಹಾಗೂ ಕ್ಷಿಪಣಿಗಳನ್ನು ಪ್ರತ್ಯೇಕ ಜಾಗಗಳಲ್ಲಿ ಇಟ್ಟಿತ್ತು. ಅಪಾಯದ ಸಂದರ್ಭದಲ್ಲಿ ಇವುಗಳನ್ನು ಜೋಡಣೆ ಮಾಡಬೇಕಾಗುತ್ತಿತ್ತು. ಆದರೆ ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಯುದ್ಧದ ಭೀತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಹೊಸ ಶಸ್ತ್ರಾಸ್ತ್ರ ನಿಯಮದ ಪ್ರಕಾರ ಯಾವುದೇ ಸಮಯದಲ್ಲಿ ಸಿಡಿಯಲು ಸನ್ನದ್ಧ ಸ್ಥಿತಿಯಲ್ಲಿ ಇರುವಂತೆ 12 ಪರಮಾಣು ಸಿಡಿತಲೆಗಳನ್ನು ನಿಯೋಜಿಸಲಾಗಿದೆ. ಇದರಿಂದ ಒಂದೇ ಜಾಗದಲ್ಲಿ ಪರಮಾಣು ಹಾಗೂ ಕ್ಷಿಪಣಿಗಳನ್ನು ನಿಯೋಜಿಸಲಾಗಿದ್ದು, ಇವು ಭೂಮಿಯೊಳಗೆ ನಿರ್ಮಿಸಲಾದ ಗುಪ್ತ ಜಾಗದಲ್ಲಿ ಇರಿಸಲಾಗಿದೆ.
ಭೂಗತ ಕ್ಷಿಪಣಿ ಸಿಲೋಗಳು ಮತ್ತು ಹೊಸ ಪರಮಾಣು ಜಲಾಂತರ್ಗಾಮಿ ನೌಕೆಗಳಲ್ಲಿ ಗುಂಡಿನ ದಾಳಿಗೆ ಸಿದ್ಧವಾದ ಪರಮಾಣು ಶಸ್ತ್ರಾಸ್ತ್ರಗಳನ್ನು ನಿಯೋಜಿಸುವುದು ಮುನ್ನೆಚ್ಚರಿಕಾ ಕ್ರಮವಾಗಿದೆ ಎಂದು ವರದಿ ವಿಶ್ಲೇಷಿಸಿದೆ.
ಹೊಸದಾಗಿ ನಿಯೋಜಿಸಲಾದ 12 ಸಿಡಿತಲೆಗಳು ಭಾರತವು ವಿತರಣಾ ವ್ಯವಸ್ಥೆಗಳೊಂದಿಗೆ ಪರಮಾಣು ಸಿಡಿತಲೆಗಳನ್ನು ಜೋಡಿಸುವ ಅಥವಾ ಕಾರ್ಯಾಚರಣೆಯ ಪಡೆಗಳೊಂದಿಗೆ ನೆಲೆಗಳಲ್ಲಿ ಇರಿಸುವ ಮೊದಲ ನಿದರ್ಶನವನ್ನು ಪ್ರತಿನಿಧಿಸುತ್ತವೆ ಎಂದು ವರದಿ ಹೇಳುತ್ತದೆ.
190ಕ್ಕೆ ಏರಿದ ಪರಮಾಣು ದಾಸ್ತಾನು
ಭಾರತದ ಬಳಿ ಪರಮಾಣು ಶಸ್ತ್ರಾಸ್ತಗಳ ಸಂಗ್ರಹ 190ಕ್ಕೆ ಏರಿಕೆಯಾಗಿದೆ. ಭಾರತದ ಬಳಿ ಈ ಹಿಂದೆ ಗರಿಷ್ಠ 180 ಪರಮಾಣು ಶಸ್ತ್ರಾಸ್ತ್ರಗಳಿದ್ದವು. ಇದೀಗ ಈ ಸಂಖ್ಯೆಯಲ್ಲಿ ವೃದ್ಧಿಯಾಗಿದೆ.
2026ರ ಆರಂಭದ ವೇಳೆಗೆ 190 ಪರಮಾಣು ಸಿಡಿತಲೆಗಳನ್ನು ಭಾರತ ಹೊಂದಿದೆ. ಇದೇ ಹೊತ್ತಿನಲ್ಲಿ ಪಾಕಿಸ್ತಾನ ಬಳಿ 170 ಪರಮಾಣು ಸಿಡಿತಲೆಗಳು ಇವೆ ಎಂದು ವರದಿ ಹೇಳಿದೆ. ಆದರೆ ನೆರೆಯ ಚೀನಾ ಬಳಿ 620 ಪರಮಾಣು ಸಿಡಿತಲೆಗಳಿದ್ದು, ಭಾರತಕ್ಕೆ ಎಷ್ಟೋ ಪಾಲು ಮುಂದಿದೆ.
ರಷ್ಯಾ ಬಳಿ ಅತೀ ಹೆಚ್ಚು 5420 ಪರಮಾಣು ಸಿಡಿತಲೆ ಹೊಂದಿದ್ದು, ಇದರಲ್ಲಿ 1796 ಸನ್ನದ್ಧ ಸ್ಥಿತಿಯಲ್ಲಿವೆ. ಅಮೆರಿಕದ ಬಳಿ 5042 ಸಿಡಿತಲೆಗಳಿದ್ದು, 1770 ಸನ್ನದ್ಧ ಸ್ಥಿತಿಯಲ್ಲಿ ಇಟ್ಟಿದೆ.
ಭಾರತ ಸೇನಾ ವೆಚ್ಚ ಜಗತ್ತಿನಲ್ಲೇ 5ನೇ ಗರಿಷ್ಠ
ಭಾರತವು 2025ರಲ್ಲಿ ಸೇನಾ ವೆಚ್ಚಕ್ಕಾಗಿ ಭಾರತ 8.7 ಲಕ್ಷ ಕೋಟಿ ರು. ಖರ್ಚು ಮಾಡಿದೆ. ಈ ಮೂಲಕ ಮಿಲಿಟರಿ ವೆಚ್ಚಕ್ಕೆ ಅತಿ ಹೆಚ್ಚು ಖರ್ಚು ಮಾಡುವ ವಿಶ್ವದ 5ನೇ ದೇಶವಾಗಿ ಹೊರಹೊಮ್ಮಿದೆ. ಅಮೆರಿಕ 90 ಲಕ್ಷ ಕೋಟಿ ರು., ಚೀನಾ 32 ಲಕ್ಷ ಕೋಟಿ ರು., ರಷ್ಯಾ 18 ಲಕ್ಷ ಕೋಟಿ ರು., ಜರ್ಮನಿ ಮತ್ತು ಭಾರತ 8.74 ಲಕ್ಷ ಕೋಟಿ ರು. ಖರ್ಚು ಮಾಡುವ ಮೂಲಕ ಕ್ರಮವಾಗಿ 1ರಿಂದ 5ನೇ ಸ್ಥಾನ ಹೊಂದಿವೆ ಎಂದು ವರದಿ ಉಲ್ಲೇಖಿಸಿದೆ.
2026ರ ಆರಂಭದಲ್ಲಿ, ಅಮೆರಿಕ, ರಷ್ಯಾ, ಬ್ರಿಟನ್, ಫ್ರಾನ್ಸ್, ಚೀನಾ, ಭಾರತ, ಪಾಕಿಸ್ತಾನ, ಉತ್ತರ ಕೊರಿಯಾ ಮತ್ತು ಇಸ್ರೇಲ್ – ಈ 9 ದೇಶಗಳು ಒಟ್ಟಾಗಿ ಸುಮಾರು 12,187 ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿವೆ. ಅವುಗಳಲ್ಲಿ 9,745 ಶಸ್ತ್ರಾಸ್ತ್ರಗಳ ದಾಸ್ತಾನಿದ್ದು, ಕಾರ್ಯಾಚರಣೆಗೆ ಲಭ್ಯವಿವೆ. 2021–25ರಲ್ಲಿ 162 ದೇಶಗಳು ಪ್ರಮುಖ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಂಡಿವೆ. ಇವುಗಳಲ್ಲಿ ಉಕ್ರೇನ್, ಭಾರತ, ಸೌದಿ ಅರೇಬಿಯಾ, ಕತಾರ್ ಮತ್ತು ಪಾಕಿಸ್ತಾನ – ಈ 5 ದೇಶಗಳ ಪಾಲೇ ಶೇ.35ರಷ್ಟಿದ್ದವು ಎಂದು ವರದಿ ತಿಳಿಸಿದೆ.



