Wednesday, June 10, 2026
Google search engine
Homeದೇಶಜೂ.13ರೊಳಗೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡದಿದ್ದರೆ ದೇಶಾದ್ಯಂತ ಆಂದೋಲನ: ಕಾರ್ಕೋಚ್ ಜನತಾ ಪಾರ್ಟಿ ಎಚ್ಚರಿಕೆ

ಜೂ.13ರೊಳಗೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡದಿದ್ದರೆ ದೇಶಾದ್ಯಂತ ಆಂದೋಲನ: ಕಾರ್ಕೋಚ್ ಜನತಾ ಪಾರ್ಟಿ ಎಚ್ಚರಿಕೆ

ನವದೆಹಲಿ: ಜೂನ್ 13ರೊಳಗೆ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡದಿದ್ದರೆ ದೇಶವ್ಯಾಪಿ ಆಂದೋಲನ ನಡೆಸುವುದಾಗಿ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪೈ ಎಚ್ಚರಿಸಿದ್ದಾರೆ.

ಪುಣೆಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರೀಯ ಪರೀಕ್ಷೆಗಳಲ್ಲಿ ನಿರಂತರವಾಗಿ ಅಕ್ರಮ ನಡೆಯುತ್ತಿರುವುದು ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಿದೆ. ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುವ ವಿಷಯಗಳ ಕುರಿತಂತೆ ಸುಮ್ಮನೆ ಕೂರಲು ಯುವಕರು ಸಿದ್ಧರಿಲ್ಲ ಎಂದಿದ್ದಾರೆ.

ದೇಶದ ಯುವಕರು ಯಾವುದಕ್ಕೂ ಭಯಪಡುವುದಿಲ್ಲ ಮತ್ತು ಸುಮ್ಮನೆ ಕೂರುವುದಿಲ್ಲ ಎಂಬುದು ಈಗ ಸಾಬೀತಾಗಿದೆ. ನೀಟ್ ಪರೀಕ್ಷಾ ಅಕ್ರಮ ಹಿನ್ನೆಲೆ ಮರುಪರೀಕ್ಷೆ ಘೋಷಣೆಯಾದ ಬೆನ್ನಲ್ಲೇ ಹಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ನೀಟ್, ಸಿಬಿಎಸ್‌ಇ ಮತ್ತು ಸಿಯುಇಟಿಯಂತಹ ಪರೀಕ್ಷಾ ಅಕ್ರಮಗಳಿಂದ ದೇಶದಾದ್ಯಂತ 1 ಕೋಟಿಗೂ ಅಧಿಕ ವಿದ್ಯಾರ್ಥಿಗಳು ತೊಂದರೆಗೆ ಈಡಾಗಿದ್ದಾರೆ. ಆದರೆ, ಇದರ ಹೊಣೆ ಹೊರಲು ಯಾರೊಬ್ಬರೂ ಸಿದ್ದರಿಲ್ಲ ಎಂದು ದೀ ಕಿಡಿಕಾರಿದ್ದಾರೆ.

ಈ ಸಂಬಂಧ ಜೂನ್ 6ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಆಯೋಜಿಸಿದ್ದೆವು. ಕೂಡಲೇ ಪ್ರಧಾನ್‌ ರಾಜೀನಾಮೆಗೆ ಒತ್ತಾಯಿಸಿದ್ದೇವೆ. ಸರ್ಕಾರದ ಯಾರೊಬ್ಬರಾದರೂ ಈ ಅಕ್ರಮದ ಹೊಣೆ ಹೊರಬೇಕು. ವೈದ್ಯರಾಗಿ ಜನರ ಜೀವ ಉಳಿಸಬೇಕಾದ ವಿದ್ಯಾರ್ಥಿಗಳು ಈ ವ್ಯವಸ್ಥೆಯ ವೈಫಲ್ಯದಿಂದ ನಡೆಯುತ್ತಿರುವ ಅಕ್ರಮದಿಂದಾಗಿ ತಮ್ಮ ಜೀವ ತೆಗೆದುಕೊಳ್ಳುತ್ತಿದ್ದಾರೆ ಎಂದರು.

ಶನಿವಾರದೊಳಗೆ ಸಚಿವರನ್ನು ರಾಜೀನಾಮೆ ನೀಡುವಂತೆ ತಮ್ಮ ಸಂಘಟನೆ ಒತ್ತಾಯಿಸಿದ್ದು, ರಾಜೀನಾಮೆ ನೀಡದಿದ್ದರೆ ದೇಶದಾದ್ಯಂತ ಆಂದೋಲನ ಆರಂಭಿಸಲಾಗುವುದು ಎಂದು ದೀಪೈ ಹೇಳಿದ್ದಾರೆ.

‘ರಾಜೀನಾಮೆ ಕೊಡದಿದ್ದರೆ ನಾವು ರಾಷ್ಟ್ರವ್ಯಾಪಿ ಆಂದೋಲನ ಆರಂಭಿಸುತ್ತೇವೆ. ಅದು ಪುಣೆಯಿಂದ ಆರಂಭವಾಗುತ್ತದೆ. ಗುರುವಾರ ಸಂಜೆ 4 ಗಂಟೆಗೆ ಪುಣೆಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತೇವೆ. ನಂತರ, ಲಖನೌ, ಅಮೃತಸರ, ಜೈಪುರ ಮತ್ತು ಬೆಂಗಳೂರಿನಲ್ಲಿಯೂ ಪ್ರತಿಭಟನೆ ನಡೆಸಲಾಗುವುದು’ ಎಂದು ಅವರು ಹೇಳಿದ್ದಾರೆ.

ನೈತಿಕ ಹೊಣೆ ಹೊರಲು ಸರ್ಕಾರವನ್ನು ಒತ್ತಾಯಿಸಿದ ದೀಪ್ಕೆ, ಲಕ್ಷಾಂತರ ಅಭ್ಯರ್ಥಿಗಳ ಭವಿಷ್ಯಕ್ಕೆ ಧಕ್ಕೆ ತರಲಾಗುತ್ತಿದೆ ಎಂದು ಆರೋಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments