Thursday, June 11, 2026
Google search engine
Homeಬೆಂಗಳೂರುಅಶೋಕ್ ಕಸ ಮಾಫಿಯಾ ಏಜೆಂಟ್: ಸಿಎಂ ಡಿಕೆ ಶಿವಕುಮಾರ್ ತಿರುಗೇಟು

ಅಶೋಕ್ ಕಸ ಮಾಫಿಯಾ ಏಜೆಂಟ್: ಸಿಎಂ ಡಿಕೆ ಶಿವಕುಮಾರ್ ತಿರುಗೇಟು

ನವದೆಹಲಿ: ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಬೆಂಗಳೂರು ಕಸ ಮಾಫಿಯಾ ಗ್ಯಾಂಗಿನ ಏಜೆಂಟರಾಗಿ ಮಾತನಾಡುತ್ತಿದ್ದಾರೆ. ಈ ಮಾಫಿಯಾ ನಿಯಂತ್ರಿಸಬೇಕು ಎಂದು ನಾನು ಈ ಹಿಂದೆ ಅವರೊಂದಿಗೆ ಚರ್ಚೆ ಮಾಡಿದ್ದೆ. ಈಗ ಅಶೋಕ್ ಅವರು ಮಾಫಿಯಾದ ವಕ್ತಾರರಾಗಿರುವುದು ಆಶ್ಚರ್ಯವಾಗಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಅವರಿಗೆ ಏನೇನು ಕಸ ಬೇಕೋ ಲಾರಿಯಲ್ಲಿ ತುಂಬಿ ಕಳುಹಿಸಿಕೊಡೋಣ. ಈ ಹಿಂದೆ ಕುಮಾರಸ್ವಾಮಿ ಅವರು ಇದನ್ನೇ ಮಾತನಾಡಿದ್ದರು. ಬೆಂಗಳೂರಿನಲ್ಲಿ ದೊಡ್ಡ ಕಸದ ಲಾಭಿ ಇದೆ. ಅವರ ಕಾಲದಲ್ಲಿ ಯಾಕೆ ಕಸದ ಟೆಂಡರ್ ಮಾಡಲು ಆಗಲಿಲ್ಲ? ಈ ಹಿಂದೆ 14-15 ಜನರಿಗೆ ಕಸದಿಂದ ಇಂಧನ ಉತ್ಪಾದನೆಗೆ ಅವಕಾಶ ನೀಡಿದ್ದೆವು. ಒಬ್ಬರೂ ಯಶಸ್ವಿಯಾಗಿರಲಿಲ್ಲ. ನಾನು ಈ ನಿರ್ಧಾರ ಕೈಗೊಳ್ಳುವ ಮುನ್ನ ದೆಹಲಿ, ಹೈದರಾಬಾದ್, ಚೆನ್ನೈ ಗೆ ಹೋಗಿ ನೋಡಿದ್ದೇನೆ ಎಂದರು.\

ಅಸೂಯೆ ರಾಜಕೀಯ

ನಾನು ಮುಖ್ಯಮಂತ್ರಿಯಾಗಿರುವುದನ್ನು ಅವರಿಂದ ತಡೆದುಕೊಳ್ಳಲು ಆಗುತ್ತಿಲ್ಲ. ಅವರ ಪಕ್ಷ, ಬೇರೆ ಪಕ್ಷಗಳಲ್ಲಿ ಏನಾಗುತ್ತಿದೆ ಎಂದು ನನಗೆ ಗೊತ್ತಿದೆ. ಅವರಿಗೆ ಏನು ಒತ್ತಡವಿದೆಯೋ ಮಾತನಾಡಿಸುತ್ತಿದ್ದಾರೆ. ಮಾತನಾಡಿಸಲಿ ಯಾವ ತೊಂದರೆಯೂ ಇಲ್ಲ. ಕಳೆದ ಹತ್ತು ಹನ್ನೆರಡು ವರ್ಷಗಳಿಂದ ಕಸದ ಟೆಂಡರ್ ಕರೆಯಲು ಬಿಟ್ಟಿಲ್ಲ ಎಂದು ಅವರ ಶಾಸಕರುಗಳೇ ನಮಗೆ ಹೇಳಿದ್ದಾರೆ ಎಂದು ಹರಿಹಾಯ್ದರು.

ರಾಜ್ಯದ ಯೋಜನೆಗಳಿಗೆ ಅನುಮತಿಗೆ ಸಚಿವರ ಜೊತೆ ಚರ್ಚೆ

ಕೇಂದ್ರ ನಗರಾಭಿವೃದ್ಧಿ ಸಚಿವರಾದ ಮನೋಹರ್ ಲಾಲ್ ಕಟ್ಟರ್ ಅವರನ್ನು ಭೇಟಿ ಮಾಡಿ, ನಮ್ಮ ರಾಜ್ಯದ ಯೋಜನೆಗಳಿಗೆ ಅನುಮತಿ ನೀಡುವಂತೆ ಮನವಿ ಸಲ್ಲಿಸಿರುವೆ. ನಮ್ಮ ಮೆಟ್ರೋ ಡಬಲ್ ಡೆಕ್ಕರ್ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ಈ ವಿಚಾರವನ್ನು ಅವರಿಗೆ ವಿವರಿಸಿ, ಯೋಜನೆಗೆ ಅನುಮತಿ ನೀಡುವಂತೆ ಕೇಳಿದೆ. ಇನ್ನು ಕೇಂದ್ರ ಸರ್ಕಾರದ ಅರ್ಬನ್ ಚಾಲೆಂಜ್ ಫಂಡ್ ಮೂಲಕ ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂದು ಮನವಿ ಮಾಡಿದ್ದೇನೆ ಎಂದು ವಿವರಿಸಿದರು.

ನಮ್ಮ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಮಾತ್ರ

ಮೃತಪಟ್ಟಿರುವ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಹೆಸರಿನಲ್ಲಿ ಬೇರೆಯವರು ಹಣ ಪಡೆಯುತ್ತಿದ್ದಾರೆ. ಬೇರೆಯವರ ದೂರವಾಣಿ ಸಂಖ್ಯೆ ನೀಡಿದ್ದಾರೆ. ಹೀಗಾಗಿ ನಾವು ಪರಿಶೀಲನೆ ಮಾಡುತ್ತಿದ್ದೇವೆ. ಯೋಜನೆ ಫಲಾನುಭವಿಗಳನ್ನು ಕಡಿತಗೊಳಿಸುವ ಯಾವ ಉದ್ದೇಶವೂ ಇಲ್ಲ. ಅರ್ಹರಿಗೆ ಯೋಜನೆ ತಲುಪಬೇಕು ಎಂಬುದು ನಮ್ಮ ಉದ್ದೇಶ ಎಂದು ತಿಳಿಸಿದರು.

ಕೆಲವರು ಗೃಹಲಕ್ಷ್ಮಿ ಯೋಜನೆಯಲ್ಲಿ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ಪಡೆಯುತ್ತಿದ್ದು, ಅಂಗಡಿಗೆ ಬಳಸುತ್ತಿದ್ದಾರೆ. ಒಬ್ಬರ ಹೆಸರಿನಲ್ಲಿ ಆರು ಮೀಟರ್ ಗಳಿವೆ. ವಾಸದ ಮನೆಗಳಿಗೆ ಈ ಯೋಜನೆ ಪಡೆದರೆ ಅಭ್ಯಂತರವಿಲ್ಲ. ಬಾಡಿಗೆ ಮನೆಯಲ್ಲಿ ಇರುವವರು ಒಂದು ಅಫಿಡವಿಟ್ ಸಲ್ಲಿಸಲಿ. ನಾವು ಈ ಯೋಜನೆ ಜಾರಿಗೆ ತಂದಿರುವುದು ಕರ್ನಾಟಕ ರಾಜ್ಯದ ಮತದಾರರಿಗೆ ಎಂದು ಸ್ಪಷ್ಟಪಡಿಸಿದರು.

ಮಧ್ಯಪ್ರದೇಶದ ಬೆಳವಣಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ತಲೆತಗ್ಗಿಸುವಂತದ್ದು

ಮೀನಾಕ್ಷಿ ನಟರಾಜನ್ ಅವರ ರಾಜ್ಯಸಭೆ ಚುನಾವಣೆ ನಾಮಪತ್ರ ತಿರಸ್ಕೃತ ಬಗ್ಗೆ ಕೇಳಿದಾಗ, ಇದು ದೇಶಕ್ಕೆ ಆಘಾತಕಾರಿ ಸುದ್ದಿ. ನಾನು ಕೂಡ ಅನೇಕ ಚುನಾವಣೆಗಳನ್ನು ಸ್ಪರ್ಧಿಸಿದ್ದೇನೆ. ಚುನಾವಣಾಧಿಕಾರಿ ಅಥವಾ ರಿಟರ್ನಿಂಗ್ ಅಫಿಸರ್ ಗೆ ನಾಮಪತ್ರ ತಿರಸ್ಕೃತಗೊಳಿಸುವ ಅಧಿಕಾರವಿರುವುದಿಲ್ಲ. ಅಲ್ಲಿ ಏನಾದರೂ ಸಮಸ್ಯೆ ಇದ್ದರೆ ಚುನಾವಣೆ ಬಳಿಕ ನ್ಯಾಯಾಲಯದ ಮೊರೆ ಹೋಗಬಹುದಿತ್ತು. ನಮ್ಮಗೆ ಗೊತ್ತಿಲ್ಲದಂತೆ ನಮ್ಮ ಹೆಸರಿನಲ್ಲಿ ಬೇರೆಲ್ಲೋ ಎಫ್ಐಆರ್ ದಾಖಲಿಸಿದ್ದರೆ ಅದು ನಮಗೆ ಹೇಗೆ ತಿಳಿಯುತ್ತದೆ? ಆಕೆ ನಮ್ಮ ಪಕ್ಷದ ನಾಯಕಿ. ನನ್ನ ನಾಮಪತ್ರ ಸಲ್ಲಿಕೆ ವೇಳೆ ಈ ರೀತಿ ಆದಾಗ ತಿದ್ದುಕೊಳ್ಳಲು ಅವಕಾಶ ನೀಡಿದ್ದರು. ಇದು ರಾಜಕೀಯ ಪಿತೂರಿಯಾಗಿದ್ದು, ನಮ್ಮಲ್ಲಿ ಹೆಚ್ಚು ಮತಗಳಿದ್ದರೂ ಬಿಜೆಪಿ ಚುನಾವಣೆಗೂ ಮುನ್ನವೇ ಎಲ್ಲಾ ಸೀಟು ಗೆಲ್ಲುತ್ತೇವೆ ಎಂದು ಹೇಳಲು ಹೇಗೆ ಸಾಧ್ಯ? ಮಧ್ಯಪ್ರದೇಶದಲ್ಲಿ ನಡೆದಿರುವು ಅನ್ಯಾಯ. ಇದು ಪ್ರಜಾಪ್ರಭುತ್ವ ವ್ಯವಸ್ಥೆ ತಲೆತಗ್ಗಿಸುವ ಪ್ರಕರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments