ಮರಳು ಮಾಫಿಯಾ ಬೀಸಿದ ಜಾಲಕ್ಕೆ ಬಿದ್ದ ಬಿಜೆಪಿ ಮುಖಂಡ ಸೇರಿದಂತೆ ಮೂವರು ಸಜೀವದಹನಗೊಂಡ ಭೀಕರ ಘಟನೆ ಛತ್ತೀಸ್ ಗಢದಲ್ಲಿ ನಡೆದಿದೆ.
ಲಾಲ್ಲಾ ಸಿಂಗ್ ಎಂದೇ ಖ್ಯಾತರಾಗಿದ್ದ ಬಿಜೆಪಿ ಮುಖಂಡ ಹಾಗೂ ಮಾಜಿ ಜನ್ ಪದ್ ಪಂಚಾಯತ್ ಮುಖ್ಯಸ್ಥ ಭರತ್ ಸಿಂಗ್ ಸೇರಿದಂತೆ ಮೂವರನ್ನು ಮರಳು ಮಾಫಿಯಾದ ಗ್ಯಾಂಗ್ ಭೀಕರವಾಗಿ ಕೊಲೆಗೈದಿದೆ.
ಭರತ್ ಸಿಂಗ್ ಹಾಗೂ ಅವರ ಸಹಚರರಿದ್ದ ಕಾರು ಎರಡು ಲಾರಿಗಳ ನಡುವೆ ಸಿಲುಕಿದ್ದು, ಕಾರಿನ ಮೇಲೆ ಪೆಟ್ರೋಲ್ ಸುರಿದು ದುಷ್ಕರ್ಮಿಗಳು ಬೆಂಕಿ ಹಚ್ಚಿ ಕೊಲೆಗೈದಿದ್ದಾರೆ. ಘಟನೆಯಲ್ಲಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಕೊರಿಯಾ ಜಿಲ್ಲೆಯ ಸೋನಹಟ್ ಪೊಲೀಸ್ ಠಾಣಾ ವ್ಯಾಪ್ತಿಯ ನೌಗೇನ್ ಗ್ರಾಮದಲ್ಲಿ ಮರಳು ಮಾಫಿಯಾ ಕುರಿತ ದೀರ್ಘಕಾಲದ ವಿವಾದ ಇತ್ಯರ್ಥ ಬಗೆಹರಿಸಲು ಹೋಗಿ ಬಿಜೆಪಿ ಮುಖಂಡ ಬಲಿಯಾಗಿದ್ದಾರೆ.
ಅಕ್ಷಯ್ ತ್ರಿಪಾಠಿ, ವಿಶಾಲ್ ತ್ರಿಪಾಠಿ, ಸತ್ಯಪ್ರಕಾಶ್ ತ್ರಿಪಾಠಿ, ಮನ್ನು ತ್ರಿಪಾಠಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ೯ ಮಂದಿ ವಿರುದ್ಧ ಆರೋಪ ಕೇಳಿ ಬಂದಿದ್ದು, ಉಳಿದವರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.
ಮೂಲಗಳ ಪ್ರಕಾರ ಮರಳು ಗಣಿಗಾರಿಕೆಗೆ ಭರತ್ ಸಿಂಗ್ ಕುಟುಂಬಕ್ಕೆ ಗುತ್ತಿಗೆ ಲಭಿಸಿತ್ತು. ಇದರಿಂದ ಸೋನಾಹಟ್, ಟೆಲಿಮುಂಡ, ಬೇಲಿಯಾ ಮತ್ತು ಚಿಂಗುರದಲ್ಲಿರುವ ಅಕ್ರಮ ಮರಳು ದಂಧೆ ಮೇಲೆ ಹಿಡಿತ ಸಾಧಿಸಲು ಪೈಪೋಟಿ ಆರಂಭವಾಗಿತ್ತು. ಇದರಿಂದ ಭರತ್ ಸಿಂಗ್ ಮತ್ತು ಮತ್ತೊಬ್ಬ ಬಿಜೆಪಿ ಮುಖಂಡ ಮನೋಜ್ ತ್ರಿಪಾಠಿ ಕುಟುಂಬದ ನಡುವೆ ವೈಷಮ್ಯ ಬೆಳೆದಿತ್ತು ಎಂದು ಸ್ಥಳೀಯರು ಘಟನೆಯ ವಿವರ ನೀಡಿದ್ದಾರೆ.
ತ್ರಿಪಾಠಿ ಕುಟುಂಬ ಮರಳು ಸಾಗಾಟಕ್ಕೆ ಅಗತ್ಯವಾದ ಲಾರಿ ಹಾಗೂ ಟ್ರಕ್ ಗಳನ್ನು ಪೂರೈಸುತ್ತಿದ್ದರು. ಇದರಿಂದ ಲಾರಿಗಳ ಪಾವತಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಅಸಮಾಧಾನ ಶುರುವಾಗಿದ್ದು, ಕೊಲೆಯಲ್ಲಿ ಅಂತ್ಯಗೊಂಡಿದೆ.



