ನಂಬಿ ಬಂದ ಭಕ್ತೆ ಮೇಲೆ ವರ್ಷಗಳಿಂದ ಬಲವಂತವಾಗಿ ಮೂತ್ರ ಕುಡಿಸುವುದು, ಪತಿಗೆ ವಿಚ್ಛೇದನ ನೀಡುವಂತೆ ಒತ್ತಡ, ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಸ್ವಯಂ ಘೋಷಿತ ದೇವ ಮಾನವವನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.
ಸ್ವಯಂ ಘೋಷಿತ ದೇವಮಾನವ ರಾಧೇಶ್ಯಾಮ್ ಮಿಶ್ರಾ ಅಕಾ ರಾಧಾಮೋಹನ್ ಮಿಶ್ರಾ ಹಾಗೂ ಆತನ ಸಹಚರರನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ಮಿಶ್ರಾ ಅವರ ಆಶ್ರಮದ ಮೇಲೆ ದಾಳಿ ನಡೆಸಿ, ಭೂಗತ ಕೊಠಡಿಯಿಂದ ಅಪಾರ ಪ್ರಮಾಣದ ಆಕ್ಷೇಪಾರ್ಹ ವಸ್ತುಗಳನ್ನು ವಶಪಡಿಸಿಕೊಂದ್ದಾರೆ. ಇದರಲ್ಲಿ 12 ಲ್ಯಾಪ್‌ಟಾಪ್‌ಗಳು, 11 ಮೊಬೈಲ್ ಫೋನ್‌ಗಳು, 19 ಹಾರ್ಡ್ ಡ್ರೈವ್‌ಗಳು ಮತ್ತು ಹಲವಾರು ಪೆನ್‌ಡ್ರೈವ್‌ಗಳು ಮತ್ತು ಕ್ಯಾಸೆಟ್‌ಗಳು ಸೇರಿವೆ.
6.5 ಲಕ್ಷ ರೂ. ನಗದು ಮತ್ತು 15 ಲಕ್ಷ ರೂ. ಮೌಲ್ಯದ ಆಭರಣಗಳು ಮತ್ತು ಔಷಧೀಯ ಮಾತ್ರೆಗಳು ಮತ್ತು ಔಷಧಿಗಳ ದೊಡ್ಡ ಸಂಗ್ರಹ ಪತ್ತೆಯಾಗಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಎಲೆಕ್ಟ್ರಾನಿಕ್ ಸಾಧನಗಳ ಸಂಪೂರ್ಣ ವಿಧಿವಿಜ್ಞಾನ ಪರೀಕ್ಷೆ ಪ್ರಸ್ತುತ ನಡೆಯುತ್ತಿದೆ.
ಮಿಶ್ರಾ ಮತ್ತು ಅವರ ಆಪ್ತ ಸಹಾಯಕ ‘ಸ್ವಾಮಿ’ ಕನ್ವಾಲ್ ನಯನ್ ಸೇರಿದಂತೆ 7 ಸಹಚರರನ್ನು ಬಂಧಿಸಲಾಗಿದೆ. 8 ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು ಮತ್ತು ಶನಿವಾರದವರೆಗೆ ಕಸ್ಟಡಿಗೆ ಒಪ್ಪಿಸಲಾಯಿತು.
ನಾನು ದೇವರ ಅವತಾರ ಎಂದು ನಂಬಿಸುತ್ತಿದ್ದ ಬಾಬಾ ಎಂದು ಕರೆಸಿಕೊಳ್ಳುತ್ತಿದ್ದ ರಾಧೇಶ್ಯಾಮ್ ಮಿಶ್ರಾ ಅಕಾ ರಾಧಾಮೋಹನ್ ಮಿಶ್ರಾ ಹಲವಾರು ವರ್ಷಗಳ ಕಾಲ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದೂ ಅಲ್ಲದೇ ಪತಿಗೆ ವಿಚ್ಛೇದನ ನೀಡುವಂತೆ ಪೀಡಿಸುತ್ತಿದ್ದ. ಕಳ್ಳತನ ಮಾಡಿಸುವುದು, ಕರೆಂಟ್ ಶಾಕ್ ಕೊಡುವುದು ಮಾಡುತ್ತಿದ್ದ. ಅಷ್ಟೂ ಸಾಲದು ಎಂಬಂತೆ ಆಕೆಗೆ ತನ್ನ ಮೂತ್ರವನ್ನೂ ಕುಡಿಸಿ ವಿಕೃತಿ ಮೆರೆಯುತ್ತಿದ್ದ.
ರಾಧೇಶ್ಯಾಮ್ ಮಿಶ್ರಾ ಅಕಾ ರಾಧಾಮೋಹನ್ ಮಿಶ್ರಾ ಪುಣೆಯ ವಾಘೋಲಿಯ ಉಬಲೆ ನಗರ ಪ್ರದೇಶದಲ್ಲಿ ‘ಆಧುನಿಕ ಗುರುಕುಲ’ ನಡೆಸಿಕೊಂಡು ಬರುತ್ತಿದ್ದ. ಹಲವಾರು ವರ್ಷಗಳಿಂದ ದೇವರ ಹೆಸರಿನಲ್ಲಿ ವಂಚಿಸುತ್ತಿದ್ದ ಈತನನ್ನು ಬಂಧಿಸಲಾಗಿದೆ ಎಂದು ಪುಣೆ ಪೊಲೀಸರು ತಿಳಿಸಿದ್ದಾರೆ.
2010ರ ರಾಧೇಶ್ಯಾಮ್ ಮಿಶ್ರಾ ಬಳಿ ಬಂದ ಮಹಿಳೆ ಸ್ವಯಂ ಘೋಷಿತ ದೇವಮಾನವ ತೋಡಿದ ಹಳ್ಳಕ್ಕೆ ಬಿದ್ದಿದ್ದಾಳೆ. ನಿಧಾನವಾಗಿ ಬಲೆ ಬೀಸಿ ಗಂಡನಿಗೆ ವಿಚ್ಛೇದನ ಕೊಡಿಸಿ ಆಕೆಯನ್ನು ಕುಟುಂಬದಿಂದ ಪ್ರತ್ಯೇಕಿಸಿದ. 2010 ಮತ್ತು 2016 ರ ನಡುವೆ, ಅವನು ಅವಳನ್ನು ಲೈಂಗಿಕ ದೌರ್ಜನ್ಯ ಎಸಗಿ, ದೈಹಿಕವಾಗಿ ಹಲ್ಲೆ ನಡೆಸಿ, ವಿದ್ಯುತ್ ಆಘಾತ ನೀಡಿ ಮತ್ತು ಅವಳ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿದ್ದ ಎಂದು ಪೊಲೀಸರು ಕರಾಳ ಘಟನೆಯನ್ನು ವಿವರಿಸಿದ್ದಾರೆ.
ಆಕೆಯ ಜೊತೆಗಿದ್ದ ವೀಡಿಯೊಗಳನ್ನು ಬಳಸಿಕೊಂಡು ಮಹಿಳೆಯನ್ನು ಬ್ಲ್ಯಾಕ್‌ಮೇಲ್ ಮಾಡಿದ್ದೂ ಅಲ್ಲದೇ ತನ್ನ ಪ್ರಭಾವ ಹಾಗೂ ದೇವರ ಶಕ್ತಿ ಎಂದು ನಂಬಿಸಿ ಕುಟುಂಬವನ್ನು ಬೆದರಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಇನ್ನೂ ಹೆಚ್ಚಿನ ಬದುಕುಳಿದವರು ಮುಂದೆ ಬರಬಹುದು ಎಂದು ನಾವು ಅನುಮಾನಿಸುತ್ತೇವೆ. ನಾವು ವಿವರವಾದ ತನಿಖೆ ನಡೆಸುತ್ತಿದ್ದೇವೆ ಮತ್ತು ಹೆಚ್ಚಿನ ಪುರಾವೆಗಳನ್ನು ಸಂಗ್ರಹಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.



