Saturday, June 20, 2026
Google search engine
Homeರಾಜ್ಯಅರ್ಧಕ್ಕೆ ನಿಂತ ಕಾಮಗಾರಿ 1 ತಿಂಗಳಲ್ಲಿ ಪೂರ್ಣಗೊಳಿಸಲು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಸೂಚನೆ

ಅರ್ಧಕ್ಕೆ ನಿಂತ ಕಾಮಗಾರಿ 1 ತಿಂಗಳಲ್ಲಿ ಪೂರ್ಣಗೊಳಿಸಲು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಸೂಚನೆ

ಬೆಂಗಳೂರು: ಗ್ರಾಮೀಣ ಪ್ರದೇಶಗಳಲ್ಲಿ ಅಪೂರ್ಣವಾಗಿರುವ ಸಮುದಾಯ ಶೌಚಾಲಯಗಳ ಕಾಮಗಾರಿಯನ್ನು 1 ತಿಂಗಳಲ್ಲಿ ಪೂರ್ಣಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಕೆ.ಆರ್.ಐ.ಡಿ.ಎಲ್. ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತದಲ್ಲಿಂದು ಪ್ರಗತಿ ಪರಿಶೀಲನೆ ನಡೆಸಿದ ಅವರು, ಶೌಚಾಲಯ ನಿರ್ಮಾಣ ಕಾಮಗಾರಿಯಲ್ಲಿ ಅನಗತ್ಯ ವಿಳಂಬಕ್ಕೆ ಅವಕಾಶ ನೀಡದಂತೆ ಸೂಚಿಸಿದರು.

ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ ಕೈಗೊಳ್ಳುವ ಕಾರ್ಯದಲ್ಲಿ ಸೇವೆ, ನಿಷ್ಠೆ ಮತ್ತು ದಕ್ಷತೆಯನ್ನು ಕಾಪಾಡಿಕೊಳ್ಳಿ ಎಂದ ಅವರು, ವಿದ್ಯಾರ್ಥಿ ನಿಲಯ, ಸೇತುವೆ, ರಸ್ತೆ, ಚರಂಡಿ, ಸಮುದಾಯ ಭವನ, ಕ್ರೀಡಾಂಗಣ, ಬಸ್ ನಿಲ್ದಾಣ ಮೊದಲಾದ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು, ದೀರ್ಘಕಾಲ ಬಾಳಿಕೆ ಬರಬೇಕು. ಜನ ಮೆಚ್ಚುಗೆಗೆ ಪಾತ್ರವಾಗಬೇಕು ಎಂದರು.

ಅರ್ಧಕ್ಕೆ ನಿಂತ ಕಾಮಗಾರಿ ಪೂರ್ಣಗೊಳಿಸಲು ಸೂಚನೆ:

ನಿಯಮಿತ ಕೈಗೊಳ್ಳುವ ಯಾವುದೇ ಕಾಮಗಾರಿ ಅರ್ಧಕ್ಕೆ ನಿಲ್ಲುವಂತಾಗಬಾರದು, ಆ ಯೋಜನೆಗೆ ಅಗತ್ಯವಾದ ಹಣ, ಅನುಮತಿ ಎಲ್ಲವನ್ನೂ ಖಾತ್ರಿ ಪಡಿಸಿಕೊಂಡು ಕಾಮಗಾರಿ ಆರಂಭಿಸಬೇಕು ಎಂದು ತಿಳಿಸಿದ ಸಚಿವರು, ಇತರ ಇಲಾಖೆಗೆ ಸೇರಿದ ಕಾಮಗಾರಿಗಳು ಅರ್ಧಕ್ಕೆ ನಿಂತಿದ್ದರೆ ಅವರಿಗೆ ಪತ್ರ ಬರೆದು, ಹಣ ಬಿಡುಗಡೆ ಮಾಡಿಸಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ವಹಿಸುವಂತೆ ಸೂಚಿಸಿದರು.

ಕೆ.ಆರ್.ಐ.ಡಿ.ಎಲ್.ನಿಂದ ಕೈಗೊಳ್ಳುವ ಎಲ್ಲ ಕಾಮಗಾರಿಗಳ ಗುಣಮಟ್ಟವನ್ನು ಮೂರನೇ ವ್ಯಕ್ತಿಯಿಂದ (ಧರ್ಡ್ ಪಾರ್ಟಿ) ಮೌಲ್ಯಮಾಪನ ಮಾಡಿಸಬೇಕು, 50 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಕಾಮಗಾರಿಯನ್ನು ಪ್ರತಿಷ್ಠಿತ ಮೂರನೇ ವ್ಯಕ್ತಿ ಸಂಸ್ಥೆಯಿಂದ ಮಾಡಿಸಬೇಕು ಎಂದು ತಿಳಿಸಿದರು.

ಖಾಲಿ ಹುದ್ದೆಗಳ ಭರ್ತಿಗೆ ಸೂಚನೆ:

ಕೆ.ಆರ್.ಐ.ಡಿ.ಎಲ್.ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಹಣಕಾಸು ಇಲಾಖೆಯ ಅನುಮೋದನೆ ಪಡೆದು, ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿ ಮಾಡಿಕೊಳ್ಳುವ ಹುದ್ದೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಹಾಗೂ ಮೌಖಿಕ ಸಂದರ್ಶನ ಇರುವ ಹುದ್ದೆಗಳ ನೇಮಕಾತಿಯನ್ನು ಯುಪಿಎಸ್.ಸಿ.ಗೆ ವಹಿಸುವಂತೆ ಸೂಚಿಸಿದರು.

ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಸಮೀರ್ ಶುಕ್ಲ, ಕೆ.ಆರ್.ಐ.ಡಿ.ಎಲ್. ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಗೌಡ, ಮುಖ್ಯ ಎಂಜಿನಿಯರ್ ವೇಣುಗೋಪಾಲ್ ಮತ್ತಿತರರು ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments