Wednesday, June 24, 2026
Google search engine
Homeರಾಜ್ಯ19,020 ಜನರ ಗೃಹಲಕ್ಷ್ಮೀ ಹಣ ಒಂದೇ ಖಾತೆಗೆ: ಸಿಎಜಿ ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

19,020 ಜನರ ಗೃಹಲಕ್ಷ್ಮೀ ಹಣ ಒಂದೇ ಖಾತೆಗೆ: ಸಿಎಜಿ ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆಯ 19 ಸಾವಿರಕ್ಕೂ ಅಧಿಕ ಜನರ ಹಣ ಒಂದೇ ಖಾತೆಗೆ ಪಾವತಿ ಆಗುತ್ತಿರುವ ಆಘಾತಕಾರಿ ವಿಷಯ ಮಹಾಲೇಖಪಾಲಕರ ವರದಿಯಲ್ಲಿ ಬಹಿರಂಗವಾಗಿದ್ದು, ಈ ಕುರಿತು ಲಿಖಿತ ಉತ್ತರ ನೀಡುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನೋಟಿಸ್‌ ಜಾರಿ ಮಾಡಲಾಗಿದೆ.

ಸಿಎಜಿ ಡೇಟಾ ಅನಾಲಿಟಿಕ್ಸ್ ವಿಭಾಗವು ಯೋಜನೆಯ ದತ್ತಾಂಶವನ್ನು ತೀವ್ರ ಪರಿಶೀಲನೆಗೆ ಗೃಹಲಕ್ಷ್ಮೀ ಯೋಜನೆಯ ಹಣ ಪಾವತಿಯಲ್ಲಿ ಹಲವಾರು ಅಕ್ರಮಗಳು ಬೆಳಕಿಗೆ ಬಂದಿವೆ. ಒಂದೇ ಖಾತೆಗೆ 19 ಸಾವಿರಕ್ಕೂ ಅಧಿಕ ಜನರ ಖಾತೆಗೆ ಹಣ ಸಂದಾಯ ಆಗಿರುವುದು, ಬ್ಯಾಂಕ್‌ ಖಾತೆ ಇಲ್ಲದೆ ಇದ್ದರೂ 23 ಸಾವಿರಕ್ಕೂ ಅಧಿಕ ಜನರಿಗೆ ಹಣ ಪಾವತಿ ಆಗಿರುವುದು ಸೇರಿದಂತೆ ಹಲವು ದೋಷಗಳು ಕಂದು ಬಂದಿವೆ.

19,020 ಫಲಾನುಭವಿಗಳಿಗೆ ಒಂದೇ ಖಾತೆ

ಡೇಟಾ ಅನಾಲಿಟಿಕ್ಸ್ ಬಳಕೆಯಿಂದ ಬಂದ ವಿಶ್ಲೇಷಣೆಯ ಪ್ರಕಾರ, ಒಟ್ಟು 19,020 ಫಲಾನುಭವಿಗಳು ಜಂಟಿಯಾಗಿ ಅಥವಾ ಒಟ್ಟಿಗೆ ಒಂದೇ ಬ್ಯಾಂಕ್ ಖಾತೆ ಸಂಖ್ಯೆಯನ್ನು ಹೊಂದಿದ್ದಾರೆ. ಫಲಾನುಭವಿಗಳು ಬೇರೆಯವರ ಖಾತೆ ಸಂಖ್ಯೆಯನ್ನು ನೀಡಿದ್ದು ಹೇಗೆ? ಅಥವಾ ಇಲಾಖೆಯು ಅದನ್ನು ಹೇಗೆ ಬಳಸಿಕೊಂಡಿತು ಮತ್ತು ಈ ಒಂದೇ ಖಾತೆಗೆ ಬರುವ ಹಣವನ್ನು ಹೇಗೆ ಹಂಚಿಕೊಳ್ಳುತ್ತಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

ಖಾತೆ ವಿವರಗಳೇ ಇಲ್ಲದೆ ಕೋಟ್ಯಂತರ ಪಾವತಿ:

ಬ್ಯಾಂಕ್ ಖಾತೆ ಸಂಖ್ಯೆಗಳನ್ನು ದಾಖಲಿಸಿಕೊಳ್ಳದೆಯೇ ಒಟ್ಟು 23,262 ಖಾತೆಗಳಿಗೆ ಪಾವತಿ ಮಾಡಲಾಗಿದ್ದು, ಇದರ ಒಟ್ಟು ಮೊತ್ತ ಸುಮಾರು 46.52 ಕೋಟಿ ರೂಪಾಯಿಗಳಾಗಿದೆ. ಈ ಕುರಿತು ಸೂಕ್ತ ವಿವರಣೆ ನೀಡುವಂತೆ ವರದಿಯಲ್ಲಿ ಕೇಳಲಾಗಿದೆ.

ಬ್ಯಾಂಕ್ ಖಾತೆ ಬದಲಾವಣೆ:

ಯೋಜನೆಯಡಿ ಈವರೆಗೆ ಒಟ್ಟು 30 ಕಂತು ಪಾವತಿಯಾಗಿದ್ದು, ಇದೇ ಫಲಾನುಭವಿಗಳಿಗೆ ಕೆಲವು ನಿರ್ದಿಷ್ಟ ತಿಂಗಳುಗಳಲ್ಲಿ ಸುಮಾರು 1.80 ಕೋಟಿ ರೂ. ಮೊತ್ತವನ್ನು 8,995 ಖಾತೆಗಳಿಗೆ ಪುನಃ ಪಾವತಿ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಯೋಜನೆಗೆ ಒಳಪಟ್ಟಿರುವ ಫಲಾನುಭವಿಗಳು ಪದೇಪದೇ ಬ್ಯಾಂಕ್ ಖಾತೆಗಳನ್ನು ಬದಲಾಯಿಸುತ್ತಿದ್ದು, ಇಂತಹ 10,06,308 ದಾಖಲೆಗಳು ಪತ್ತೆಯಾಗಿವೆ.

ಎಲೆಕ್ಟ್ರಾನಿಕ್ ಡೇಟಾ ಕಂಪ್ಯೂಟರ್ ಸಿಸ್ಟಮ್ಸ್ ನಿಂದ (EDCS) ಫಲಾನುಭವಿಗಳ ಪಟ್ಟಿ ಮತ್ತು ಇತರ ವಿವರಗಳನ್ನು ಒದಗಿಸದಿರುವುದು ಆಡಿಟ್ ಪ್ರಕ್ರಿಯೆಗೆ ಹಿನ್ನಡೆಯನ್ನುಂಟು ಮಾಡಿದೆ. ರದ್ದುಪಡಿಸಲಾದ ಫಲಾನುಭವಿಗಳ ವಿವರಗಳು, ಗುರುತಿನ ಚೀಟಿ, ರದ್ದುಪಡಿಸಿದ ದಿನಾಂಕ ಮತ್ತು ಕಾರಣಗಳನ್ನು ನೀಡಲು ಇಲಾಖೆಯು ವಿಫಲವಾಗಿದೆ ಎಂದು ಸಿಎಜಿ ಅಸಮಾಧಾನ ಹೊರಹಾಕಿದೆ.

ಗೃಹಲಕ್ಷ್ಮಿ ವಿಚಾರದಲ್ಲಿ ವಿರೋಧ ಪಕ್ಷವು ಐದು ಸಾವಿರ ಕೋಟಿ ರೂ. ಎಲ್ಲಿ ಹೋಯಿತು ಎಂದು ಪ್ರಶ್ನೆ ಮಾಡುತ್ತಲೇ ಬಂದಿದೆ. ಕಳೆದ ಎರಡು ವರ್ಷಗಳಲ್ಲಿ ಒಟ್ಟು ಮೂರು ಕಂತುಗಳು ಫಲಾನುಭವಿಗಳಿಗೆ ಲಭ್ಯವಾಗಿಲ್ಲ. 2024-25ರಲ್ಲಿ 10 ಕಂತುಗಳು ಹಾಗೂ 2025-26ರಲ್ಲಿ 11 ಕಂತುಗಳು ಬಿಡುಗಡೆಯಾಗಿದ್ದು, ಒಟ್ಟಾರೆ 3 ಕಂತುಗಳು ಬಾಕಿ ಉಳಿದಿವೆ. ಮುಂದಿನ ದಿನಗಳಲ್ಲಿ ಇದನ್ನು ಸರಿದೂಗಿಸುವ ನಿರೀಕ್ಷೆಯಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಮಹಾಲೇಖಪಾಲ ಕಚೇರಿಗೆ ಸೂಕ್ತ ವರದಿ ಸಲ್ಲಿಸದೇ ಕಳ್ಳಾಟವಾಡುತ್ತಿರುವುದು ಬೆಳಕಿಗೆ ಬಂದಿದೆ. ಯೋಜನೆಯಿಂದ ಕೈಬಿಟ್ಟಿರುವ ಫಲಾನುಭವಿಗಳ ಪಟ್ಟಿಯ ವಿವರಗಳನ್ನು ಒದಗಿಸದೇ ಇರುವ ಇಲಾಖೆಯ ನಡೆಗೆ ಮಹಾಲೇಖಪಾಲರು ತಮ್ಮ ಪ್ರಾಥಮಿಕ ವರದಿಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಎಜಿ ಕಚೇರಿಯಿಂದ ಈ ವಿವರಗಳನ್ನು ನೀಡುವಂತೆ ಪದೇಪದೇ ಜ್ಞಾಪನಾ ಪತ್ರಗಳನ್ನು (Reminders) ಕಳುಹಿಸಿದ್ದರೂ ಇಲಾಖೆಯು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಎಜಿ ಆಡಿಟ್‌ಗೆ ಇಲಾಖೆಯು ಅಗತ್ಯ ಮಾಹಿತಿಗಳನ್ನು ನೀಡದ ಹಿನ್ನೆಲೆಯಲ್ಲಿ, ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ತಕ್ಷಣವೇ ಮಹಾಲೇಖಪಾಲರಿಗೆ ಕೈಬಿಟ್ಟ ಫಲಾನುಭವಿಗಳ ಸಂಪೂರ್ಣ ಮಾಹಿತಿಯನ್ನು ಒದಗಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಖಡಕ್ ಸೂಚನೆ ನೀಡಿದ್ದಾರೆ. ಆದರೆ ಸರ್ಕಾರದ ಮುಖ್ಯಸ್ಥರೇ ಖುದ್ದಾಗಿ ಸೂಚನೆ ಕೊಟ್ಟಿದ್ದರೂ ಇಲಾಖೆಯ ಅಧಿಕಾರಿಗಳು ಮಾತ್ರ ಇದುವರೆಗೂ ಯಾವುದೇ ವರದಿಯನ್ನು ಸಲ್ಲಿಕೆ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ.

ಆರಂಭಿಕ ತಿಂಗಳಲ್ಲಿ 1.06 ಕೋಟಿ ಫಲಾನುಭವಿಗಳಿಗೆ ಮಾಸಿಕ ಎರಡು ಸಾವಿರದಂತೆ ಸತತವಾಗಿ ಪಾವತಿಯಾಗಿದ್ದು, ಅವರೆಲ್ಲರ ಖಾತೆಗೆ ಈವರೆಗೆ ಬರೋಬ್ಬರಿ 60 ಸಾವಿರ ರೂಪಾಯಿ ಸಂದಾಯವಾಗಿದೆ. 2023-24ರಲ್ಲಿ 18,103.88 ಕೋಟಿ ರೂ.ಗಳಿಂದ ಆರಂಭವಾದ ಈ ಆರ್ಥಿಕ ನೆರವು, ಫಲಾನುಭವಿಗಳ ಸಂಖ್ಯೆ ಹೆಚ್ಚಾದಂತೆಲ್ಲಾ ವೃದ್ಧಿಸುತ್ತಾ ಸಾಗಿದ್ದು, ಪ್ರಸ್ತುತ ಚಾಲ್ತಿಯಲ್ಲಿರುವ ಕಂತುಗಳು ಪೂರ್ಣಗೊಳ್ಳುತ್ತಿದ್ದಂತೆ ಈ ಮೊತ್ತವು 75 ಸಾವಿರ ಕೋಟಿ ರೂ. ಗಡಿ ದಾಟಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments