ರೈಲ್ವೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 1.83 ಲಕ್ಷಕ್ಕೂ ಅಧಿಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿರುವ ಕೇಂದ್ರ ಸರ್ಕಾರ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಕೇಂದ್ರ ಸರ್ಕಾರಿ ಇಲಾಖೆಗಳಾದ ರೈಲ್ವೆ, ಪೊಲೀಸ್, ರಕ್ಷಣೆ, ಎಂಜಿನಿಯರಿಂಗ್ ಮತ್ತು ತಾಂತ್ರಿಕ ಸೇವೆಗಳಲ್ಲಿ ಖಾಲಿ ಇರುವ 1,83,595 ಹುದ್ದೆಗಳಿಗೆ ಕೇಂದ್ರ ಸರ್ಕಾರ ಅರ್ಜಿ ಆಹ್ವಾನಿಸಿದ್ದು, ಶೇ 59ರಷ್ಟು ಹುದ್ದೆಗಳು ರೈಲ್ವೆ ಇಲಾಖೆಯದ್ದಾಗಿವೆ.
ನೇಮಕಾತಿ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದೆ. ಇವುಗಳ ಪೈಕಿ ಕೆಲವು ಪರೀಕ್ಷೆಗಳನ್ನು ಈಗಾಗಲೇ ನಡೆಸಲಾಗಿದ್ದು, ಇನ್ನು ಕೆಲವು ಹುದ್ದಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ವಿಷಯದಲ್ಲಿ ರೈಲ್ವೆ ಇಲಾಖೆ ಮುಂಚೂಣಿಯಲ್ಲಿದೆ. ರೈಲ್ವೆ ಇಲಾಖೆಯು 1,08,129 ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಭಾರತೀಯ ರೈಲ್ವೆಯು ಭಾರತದ ಅತಿದೊಡ್ಡ ಸರ್ಕಾರಿ ಉದ್ಯೋಗ ಕಲ್ಪಿಸುವ ಇಲಾಖೆಯಾಗಿದೆ ಎಂದು ಅಧಿಕಾರಿಗಳು ಸಂಸದೀಯ ಸಮಿತಿ ಮುಂದೆ ಹೇಳಿದ್ದಾರೆ.
ಎಸ್ಎಸ್ಸಿ 65,331 ತಾತ್ಕಾಲಿಕ ಹುದ್ದೆಗಳ ನೇಮಕಾತಿಯನ್ನು ವರದಿ ಮಾಡಿತ್ತು. ಆದರೆ ಅದರಲ್ಲಿ 10,135 ಹುದ್ದೆಗಳಿಗೆ ಯುಪಿಎಸ್ಸಿ ನೇಮಕಾತಿಯನ್ನು ನಿರ್ವಹಿಸುತ್ತಿರುವುದಾಗಿ ದಿ ಎಕನಾಮಿಕ್ ಟೈಮ್ಸ್ ವರದಿ ಮಂಗಳವಾರದ ತಿಳಿಸಿದೆ.
ಬಿಜೆಪಿ ರಾಜ್ಯಸಭಾ ಸಂಸದ ಮತ್ತು ಉತ್ತರ ಪ್ರದೇಶದ ಮಾಜಿ ಪೊಲೀಸ್ ಮಹಾನಿರ್ದೇಶಕ ಬ್ರಿಜ್ ಲಾಲ್ ನೇತೃತ್ವದ ಸಾರ್ವಜನಿಕ ಕುಂದುಕೊರತೆಗಳು, ಕಾನೂನು ಮತ್ತು ನ್ಯಾಯದ ಸಂಸದೀಯ ಸ್ಥಾಯಿ ಸಮಿತಿಯ ಮುಂದೆ ನೇಮಕಾತಿ ಕುರಿತಾದ ಅಪ್ಡೇಟ್ ಅನ್ನು ಅಧಿಕಾರಿಗಳು ಮಂಡಿಸಿದ್ದಾರೆ.
ಲೋಕಸಭೆ ಮತ್ತು ರಾಜ್ಯಸಭೆಯ ಸಂಸತ್ ಸದಸ್ಯರನ್ನು ಒಳಗೊಂಡಿರುವ ಈ ಸಮಿತಿಯು, ಸರ್ಕಾರಿ ಸಿಬ್ಬಂದಿ, ನೇಮಕಾತಿ, ಸಾರ್ವಜನಿಕ ಕುಂದುಕೊರತೆಗಳು, ಆಡಳಿತ ಸುಧಾರಣೆ ಮತ್ತು ಯುಪಿಎಸ್ಸಿ, ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಯಂತಹ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದ ವಿಷಯಗಳ ಮೇಲ್ವಿಚಾರಣೆ ನಡೆಸುತ್ತದೆ.
ಖಾಲಿ ಹುದ್ದೆಗಳ ಪರಿಶೀಲನೆಯ ಜೊತೆಗೆ ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಸುಧಾರಿಸುವ ಮಾರ್ಗಗಳನ್ನು ಸಹ ಸಮಿತಿ ಚರ್ಚಿಸಿದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆಗಳ ಹೆಚ್ಚಿನ ಬಳಕೆ, ಕೀ ಉತ್ತರಗಳನ್ನು ತ್ವರಿತವಾಗಿ ಬಿಡುಗಡೆ ಮಾಡುವುದು ಮತ್ತು ಅಭ್ಯರ್ಥಿಗಳು ಮೌಲ್ಯಮಾಪನ ಮಾಡಿದ ಉತ್ತರ ಪತ್ರಿಕೆಗಳನ್ನು ಪಡೆಯಲು ಅವಕಾಶ ನೀಡುವಂತಹ ಕ್ರಮಗಳನ್ನು ಕೈಗೊಳ್ಳುವಂತೆ ಸದಸ್ಯರು ಸೂಚಿಸಿದ್ದಾರೆ ಎಂದು ವರದಿಯಾಗಿದೆ.
1.83 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವ ಕೇಂದ್ರ ಸರ್ಕಾರದ ಭಾಗವಾಗಿ, ರೈಲ್ವೆ ಇಲಾಖೆಯಲ್ಲಿ ಅತ್ಯಧಿಕ ಅಂದರೆ ಒಂದು ಲಕ್ಷಕ್ಕೂ ಅಧಿಕ ಹುದ್ದೆಗಳು ಮತ್ತು ಎಸ್ಎಸ್ಸಿ ಮತ್ತು ಯುಪಿಎಸ್ಸಿ ಅಡಿಯಲ್ಲಿ ಹತ್ತು ಸಾವಿರಕ್ಕೂ ಅಧಿಕ ಹುದ್ದೆಗಳು ಕೇಂದ್ರೀಕೃತವಾಗಿವೆ. ಸದ್ಯ, ದೇಶದಾದ್ಯಂತ ಕೇಂದ್ರ ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವ ಲಕ್ಷಾಂತರ ಉದ್ಯೋಗ ಆಕಾಂಕ್ಷಿಗಳ ಕಣ್ಣು ಈ ಹುದ್ದಗಳ ಮೇಲೆ ನೆಟ್ಟಿದೆ.



