ಬೆಂಗಳೂರು- ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಕೆಂಪೇಗೌಡರ 517ನೇ ಜನ್ಮ ದಿನಾಚರಣೆ ಪ್ರಯುಕ್ತ ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನ ನೀಡುವ ವಾರ್ಷಿಕ ಪ್ರಶಸ್ತಿ ಈ ಬಾರಿ ಇನ್ಫೋಸಿಸ್ ಸಂಸ್ಥೆಯ ಮಾಜಿ ಮುಖ್ಯಸ್ಥ ಟಿವಿ ಮೋಹನ್‍ದಾಸ್ ಪೈ, ಚಿತ್ರದುರ್ಗದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿ ಸೇರಿದಂತೆ ಮತ್ತಿತರರು ಭಾಜನರಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವು ಇದೇ 27ರಂದು ನಾಡಪ್ರಭು ಕೆಂಪೇಗೌಡರ ಜನ್ಮ ದಿನಾಚರಣೆ ಪ್ರಯುಕ್ತ ಜ್ಞಾನಜ್ಯೋತಿ ಆಡಿಟೋರಿಯಂನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಸೇರಿದಂತೆ ಮತ್ತಿತರ ಗಣ್ಯರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಪ್ರಶಸ್ತಿ ಪುರಸ್ಕತರಿಗೆ 2 ಲಕ್ಷ ರೂ. ಹಾಗೂ 200 ಗ್ರಾಂ ಬೆಳ್ಳಿಯ ಸ್ಮರಣಿಕೆ ಮತ್ತು ರಾಜ್ಯಮಟ್ಟದ ಪುರಸ್ಕತರಿಗೆ 25 ಸಾವಿರ ನಗದು ನೀಡಿ ಗೌರವಿಸಲಾಗುತ್ತಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಹಾಗೂ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ, ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದ ಅಧ್ಯಕ್ಷ ಕೃಷ್ಣೇಗೌಡ ಅವರು ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ಇನ್ಫೋಸಿಸ್ ಸಂಸ್ಥೆಯ ಹಣಕಾಸು ವಿಭಾಗದ ಮಾಜಿ ಮುಖ್ಯಸ್ಥರು ಹಾಗೂ ಅಕ್ಷಯಪಾತ್ರೆ ಯೋಜನೆಯ ಸಹ-ಸಂಸ್ಥಾಪಕ ಟಿ.ವಿ. ಮೋಹನದಾಸ್ ಪೈ, ಅಸ್ಪಶ್ಯತೆ ಆಚರಣೆ ಮತ್ತು ದೇವದಾಸಿ ಪದ್ಧತಿಯ ನಿವಾರಣೆಗೆ ಶ್ರಮಿಸುತ್ತಿರುವ ಚಿತ್ರದುರ್ಗದ ಶ್ರೀ ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಮತ್ತು ರಾಜ್ಯದ ಅರಣ್ಯ ಇಲಾಖೆಯ ನಿವೃತ್ತ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದ ಎ.ಸಿ. ಲಕ್ಷ್ಮಣ್ ಅವರಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯಪ್ರಶಸ್ತಿ ಪುರಸ್ಕತರು
ಉಳಿದಂತೆ ನಾಡಪ್ರಭು ಕೆಂಪೇಗೌಡ ರಾಜ್ಯ ಮಟ್ಟದ ಪ್ರಶಸ್ತಿಗೆ 15 ಅರ್ಹರನ್ನು ಆಯ್ಕೆ ಸಮಿತಿಯು ಆಯ್ಕೆ ಮಾಡಿದೆ. ಆಡಳಿತ, ಶಿಕ್ಷಣ, ಸಂಸ್ಕೃತಿ, ಕೃಷಿ, ಪತ್ರಿಕೋದ್ಯಮ, ಸಾಹಿತ್ಯ, ಸಂಶೋಧನೆ, ಮಹಿಳಾ ಸಬಲೀಕರಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಸಾಧನೆ ಮಾಡಿದ್ದಾರೆ.
(1) ಎಸ್ ವಿ ರಂಗನಾಥ್
(2) ಎಚ್ ಎ ರಂಗನಾಥ್
(3) ಎಂ ಆರ್ ಜೈಶಂಕರ್
(4) ಬಿ ಎಂ ಕೊಕರೆ
(5) ಡಾ.ವಾಮದೇವಪ್ಪ
(6) ಕೇಶವ ಆಮೈ
(7) ವಿಕ್ರಮ್ ಮುತ್ತಣ್ಣ
(8) ಜಯಪ್ರಕಾಶ ಗೌಡ
(9) ರವಿಕುಮಾರ್
(10) ಯಶಸ್ವಿನಿ ಶರ್ಮ
(11) ಪ್ರೇಮಾ ಗಣೇಶ್
(12) ರಶ್ಮಿ ಸಾವಂತ್
(13) ತ್ರಿಸ್ಟಾ ರಾಮಮೂರ್ತಿ
(14) ಧರ್ಮೇಂದ್ರ
(15) ಮಹೇಶ್ ಗೌಡ
ಕೆಂಪೇಗೌಡರ ಜಯಂತಿಯ ಅಂಗವಾಗಿ ಜೂನ್ 27ರ ಸಂಜೆ 4 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದು, ರಾಜ್ಯಪಾಲ ಥಾವರಚಂದ್ ಗೆಹಲೋಟ್, ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ , ವಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಮತ್ತಿತರರು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಧೀರಜ್ ಮುನಿರಾಜು, ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷ ರಾಮಚಂದ್ರಗೌಡ, ಪ್ರತಿಷ್ಠಾನದ ಸಂಚಾಲಕರಾದ ಕಾಂತರಾಜ್, ಸಹಸಂಚಾಲಕ ಶಿವನಹಳ್ಳಿ ಮಂಜುನಾಥ್ ಉಪಸ್ಥಿತರಿದ್ದರು.



