ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಟಿ-20 ವಿಶ್ವಕಪ್ ಸೂಪರ್-8 ಪಂದ್ಯದಲ್ಲಿ 21 ರನ್ ಗಳಿಂದ ಸೋಲಿಸಿದ ಆಫ್ಘಾನಿಸ್ತಾನ ಇತಿಹಾಸ ಬರೆದಿದೆ.
ಕಿಂಗ್ಸ್ ಟೌನ್ ಮೈದಾನದಲ್ಲಿ ಶನಿವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಫ್ಘಾನಿಸ್ತಾನ ತಂಡ 6 ವಿಕೆಟ್ ಕಳೆದುಕೊಂಡು 146 ರನ್ ಕಲೆ ಹಾಕಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಆಸ್ಟ್ರೇಲಿಯಾ 19.2 ಓವರ್ ಗಳಲ್ಲಿ 127 ರನ್ ಗೆ ಆಲೌಟಾಯಿತು.
ಸ್ಪಿನ್ನರ್ ಗಳ ಮುಂದೆ ಎಡವುವ ಆಸ್ಟ್ರೇಲಿಯಾ ಈ ಬಾರಿ ವೇಗಿಗಳ ಮುಂದೆ ಮಂಡಿಯೂರಿತು. ವೇಗಿ ನವೀನ್ ಉಲ್-ಹಕ್ 3 ವಿಕೆಟ್ ಪಡೆದರೆ, ಗುಲ್ಬದ ನ್ನಯೀಬ್ 4 ವಿಕೆಟ್ ಕಿತ್ತು ಮಿಂಚಿದರು.
ಆಸ್ಟ್ರೇಲಿಯಾ ಪರ ಗ್ಲೆನ್ ಮ್ಯಾಕ್ಸ್ ವೆಲ್ 41 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ಸೇರಿದಂತೆ 59 ರನ್ ಬಾರಿಸಿ ಏಕಾಂಗಿ ಹೋರಾಟ ನಡೆಸಿದ್ದು ಪ್ರಯೋಜನವಾಗಲಿಲ್ಲ.
ಆಫ್ಘಾನಿಸ್ತಾನ 5 ಬಾರಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಿದ್ದು, ಎಲ್ಲಾ ಪಂದ್ಯಗಳಲ್ಲೂ ಸೋಲುಂಡಿದ್ದು, ಇದೇ ಮೊದಲ ಬಾರಿ ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಗೆಲುವಿನ ಖಾತೆ ತೆರೆದು ಇತಿಹಾಸ ಬರೆದಿದೆ. ಅದರಲ್ಲೂ ಏಕದಿನ ಮತ್ತು -20 ಚಾಂಪಿಯನ್ ಆಗಿರುವಾಗಲೇ ಸೋತಿರುವುದು ಅಚ್ಚರಿ ಮೂಡಿಸಿದೆ.