ಕಾರವಾರ: ನಾಡಬಾಂಬ್ ತಯಾರಿಕೆ, ಸಂಗ್ರಹ ಹಾಗೂ ಮಾರಾಟದ ಅಕ್ರಮ ಜಾಲದ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ಅಂಕೋಲಾ ಪೊಲೀಸರು ಅಕ್ರಮವಾಗಿ ಕಚ್ಚಾ ನಾಡಬಾಂಬ್‌ಗಳನ್ನು ದಾಸ್ತಾನು ಇಟ್ಟುಕೊಂಡಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಮೂರು ಕಚ್ಚಾ ನಾಡಬಾಂಬ್‌ಗಳನ್ನು ವಶಪಡಿಸಿಕೊಂಡಿದ್ದು, ಪ್ರಕರಣದ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ.
ಅಂಕೋಲಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಚಂದ್ರಶೇಖರ್ ಮಠಪತಿ ನೇತೃತ್ವದ ತಂಡಕ್ಕೆ ಹೊನ್ನಳ್ಳಿ ಗ್ರಾಮದ ನಾರಾಯಣಗೌಡ ಹಾಗೂ ನಾಗರಾಜ್ ಗೌಡ ಅಕ್ರಮವಾಗಿ ಕಚ್ಚಾ ನಾಡಬಾಂಬ್‌ಗಳನ್ನು ದಾಸ್ತಾನು ಇಟ್ಟಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ, ಎಎಸ್‌ಸಿ (ಆ್ಯಂಟಿ ಸ್ಯಾಬೋಟೇಜ್ ಚೆಕ್) ಹಾಗೂ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ (ಬಿಡಿಡಿಎಸ್) ಸಿಬ್ಬಂದಿಯೊಂದಿಗೆ ಜಂಟಿಯಾಗಿ ಕಾರ್ಯಾಚರಣೆ ನಡೆಸಲಾಯಿತು.
ವಿಚಾರಣೆ ವೇಳೆ ನಾರಾಯಣಗೌಡ ಮತ್ತು ನಾಗರಾಜ್ ಗೌಡ ಅವರು ಮೀನುಗಾರಿಕೆಗಾಗಿ ನಾಡಬಾಂಬ್‌ಗಳನ್ನು ಇಟ್ಟುಕೊಂಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ತಮ್ಮ ಸಂಬಂಧಿಕನಾದ ಅಂಕೋಲಾ ಮೂಲದ ಯುವಕ ತುಮಕೂರಿನಲ್ಲಿ ಕಾರಿನಲ್ಲೇ ನಾಡಬಾಂಬ್ ಸ್ಫೋಟಿಸಿಕೊಂಡು ಮೃತಪಟ್ಟಿದ್ದರಿಂದ, ತಮ್ಮ ಬಳಿಯಿದ್ದ ನಾಡಬಾಂಬ್‌ಗಳನ್ನು ಅರಣ್ಯ ಪ್ರದೇಶದಲ್ಲಿ ಅಡಗಿಸಿಟ್ಟಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.
ಆರೋಪಿಗಳು ತೋರಿಸಿದ ಸ್ಥಳದಲ್ಲಿ ಮೂರು ಕಚ್ಚಾ ನಾಡಬಾಂಬ್‌ಗಳನ್ನು ಪೊಲೀಸರು ವಶಪಡಿಸಿಕೊಂಡು ಸುರಕ್ಷತಾ ಕ್ರಮವಾಗಿ ಸ್ಫೋಟಕ ವಸ್ತುಗಳ ಸಂಗ್ರಹ ಘಟಕಕ್ಕೆ ರವಾನಿಸಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲಿ ಈ ನಾಡಬಾಂಬ್‌ಗಳನ್ನು ಅಂಕೋಲಾ ತಾಲೂಕಿನ ಶಿರಗುಂಜಿಯ ಸಂದೀಪ್ ಗೌಡ ಪೂರೈಸಿರುವುದಾಗಿ ಆರೋಪಿಗಳು ಬಾಯ್ಬಿಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಗುನ್ನಾ ಸಂಖ್ಯೆ 131/2026 ದಾಖಲಿಸಿಕೊಂಡು, ಸ್ಫೋಟಕ ವಸ್ತುಗಳ ಕಾಯ್ದೆ-1908ರ ಕಲಂ 4 ಮತ್ತು 5 ಹಾಗೂ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್)-2023ರ ಕಲಂ 288ರಡಿ ನಾರಾಯಣಗೌಡ, ನಾಗರಾಜ್ ಗೌಡ ಇಬ್ಬರೂ ಹೊನ್ನಳ್ಳಿ ಹಾಗೂ ಸಂದೀಪ್ ಗೌಡ ಶಿರಗುಂಜಿ, ಅವರನ್ನು ಬಂಧಿಸಲಾಗಿದೆ. ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.



