ಬೆಂಗಳೂರು: ಮಗು ಬಸ್ ಹತ್ತಿದಾಗಿನಿಂದ ಮನೆ ಸೇರುವವರೆಗೂ ಮಗುವಿನ ರಕ್ಷಣೆಯ ಜವಾಬ್ದಾರಿ ಶಾಲಾ ಆಡಳಿತ ಮಂಡಳಿಯದ್ದೇ ಆಗಿರಲಿದೆ ಎಂದು ಹೈಕೋರ್ಟ್ ಹೇಳಿದೆ.
ಶಾಲಾ ಬಸ್ ಅಪಘಾತದಲ್ಲಿ ವಿದ್ಯಾರ್ಥಿಯೊಬ್ಬ ಕಣ್ಣು ಕಳೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಶಾಲೆಯೊಂದರ ಆಡಳಿತ ಮಂಡಳಿ ವಿರುದ್ಧದ ಪ್ರಕರಣ ರದ್ದುಪಡಿಸಲು ನ್ಯಾಯಾಲಯ ನಿರಾಕರಿಸಿದೆ.
ಶಾಲಾ ಬಸ್ನಲ್ಲಿ ನಡೆದ ಅಪಘಾತದಲ್ಲಿ 4ನೇ ತರಗತಿಯ ವಿದ್ಯಾರ್ಥಿ ಕಣ್ಣು ಕಳೆದುಕೊಂಡ ಪ್ರಕರಣ ಸಂಬಂಧ ದಾಖಲಾಗಿದ್ದ ಪ್ರಕರಣ ರದ್ದುಕೋರಿ ಮಂಡ್ಯ ಜಿಲ್ಲೆಯ ಮದ್ದೂರಿನ ದಿವ್ಯಜ್ಯೋತಿ ಶಾಲಾ ಆಡಳಿತ ಮಂಡಳಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದ್ದು, ಅರ್ಜಿ ವಜಾಗೊಳಿಸಿದೆ.
ಶಾಲಾ ಬಸ್ನಲ್ಲಿ ಮಕ್ಕಳ ಸುರಕ್ಷತೆ ಎನ್ನುವುದು ಕೇವಲ ದಾಕ್ಷಿಣ್ಯ ಅಥವಾ ಅನುಕೂಲದ ವಿಷಯವಲ್ಲ. ಇದು ‘ಕರ್ನಾಟಕ ಶಿಕ್ಷಣ ಸಂಸ್ಥೆಗಳ ನಿಯಮಾವಳಿಗಳು 2018’ ರ ಅಡಿ ಕಡ್ಡಾಯವಾಗಿ ಪಾಲಿಸಬೇಕಾದ ಶಾಸನಬದ್ಧ ಜವಾಬ್ದಾರಿಯಾಗಿದೆ. ಮಗು ಶಾಲಾ ಬಸ್ ಹತ್ತಿದ ಮೇಲೆ, ಕೊನೆಯ ಸ್ಟಾಪ್ ಬರುವವರೆಗೂ ಶಾಲಾ ಮಂಡಳಿ ತನ್ನ ಹೊಣೆಗಾರರಲ್ಲ ಎಂದು ಹೇಳಲಾಗುವುದಿಲ್ಲ. ಹೀಗಾಗಿ, ಘಟನೆ ನಡೆದ ಸಂದರ್ಭದಲ್ಲಿ ಬಸ್ನಲ್ಲಿ ಅಟೆಂಡರ್ ಇದ್ದರೇ? ಸಿಸಿಟಿವಿ ಕೇವಲ ‘ಅಲಂಕಾರಿಕ ವಸ್ತು’ ಆಗಿತ್ತೇ ಅಥವಾ ಚಾಲನೆಯಲ್ಲಿತ್ತೇ? ನಿಷೇಧಿತ ಅಥವಾ ಅಪಾಯಕಾರಿ ವಸ್ತುಗಳನ್ನು ಮಕ್ಕಳು ಬಸ್ನ ಒಳಗೆ ತರಲು ಹೇಗೆ ಸಾಧ್ಯವಾಯಿತು? ಈ ಎಲ್ಲ ಪ್ರಶ್ನೆಗಳಿಗೆ ತನಿಖೆಯಿಂದಲೇ ಉತ್ತರ ಸಿಗಬೇಕಾಗಿದೆ.
ಅಲ್ಲದೇ, ಬೆಳೆಯುವ ವಯಸ್ಸಿನ ಪುಟ್ಟ ಮಗುವೊಂದು ಇಡೀ ಜೀವನವನ್ನು ದೃಷ್ಟಿಹೀನತೆಯ ಶಾಪದೊಂದಿಗೆ ಕಳೆಯುವಂತಾಗಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ, ತನಿಖೆಯ ಆರಂಭಿಕ ಹಂತದಲ್ಲೇ ರದ್ದುಗೊಳಿಸಲು ಸಾಧ್ಯವಿಲ್ಲ. ಆಡಳಿತ ಮಂಡಳಿಯ ನಿರ್ಲಕ್ಷ್ಯ ಇದೆಯೇ ಇಲ್ಲವೇ ಎಂಬುದು ಪೂರ್ಣ ಪ್ರಮಾಣದ ತನಿಖೆಯ ನಂತರವಷ್ಟೇ ಸಾಬೀತಾಗಬೇಕು ಎಂದು ತಿಳಿಸಿ ಅರ್ಜಿಯನ್ನು ಜಾಗೊಳಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ:
2025ರ ಆಗಸ್ಟ್ 1ರಂದು ದಿವ್ಯಜ್ಯೋತಿ ಶಾಲೆಯ ಬಸ್ನಲ್ಲಿ ಇತರ ವಿದ್ಯಾರ್ಥಿಗಳು ತಂದಿದ್ದ ಬಣ್ಣದ ಕಾಗದ ಹಾಗೂ ಪಟಾಕಿ ಮಾದರಿಯ ಸಿಡಿಮದ್ದು ಸಿಡಿದು 4ನೇ ತರಗತಿಯ ವಿದ್ಯಾರ್ಥಿ ಕಣ್ಣು ಕಡೆದುಕೊಂಡಿದ್ದನು. ಚಿಕಿತ್ಸೆಯ ಬಳಿಕ ವೈದ್ಯರು ಶೇಕಡಾ 40ರಷ್ಟು ಅಂಗವೈಕಲ್ಯವನ್ನು ದೃಢೀಕರಿಸಿದ್ದರು.
ಈ ಘಟನೆಗೆ ಶಾಲೆಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಬಾಲಕನ ಪೋಷಕರು ದೂರು ದಾಖಲಿಸಿದ್ದರು. ದೂರಿನ ಸಂಬಂಧ ಪ್ರಕರಣ ದಾಖಲಾಗಿತ್ತು. ಇದನ್ನು ಪ್ರಶ್ನಿಸಿ ಶಾಲಾ ಆಡಳಿತ ಮಂಡಳಿ ಹೈಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ವೇಳೆ ಅರ್ಜಿದಾರ ಶಾಲೆಯ ಪರ ವಕೀಲರು, ಇದು ಶಾಲಾ ಅವಧಿಯ ನಂತರ ಬಸ್ನಲ್ಲಿ ಮತ್ತೊಂದು ಮಗು ಮಾಡಿದ ಆಕಸ್ಮಿಕ ಕೃತ್ಯ. ಇದಕ್ಕೆ ಶಾಲಾ ಆಡಳಿತ ಮಂಡಳಿಯನ್ನು ಹೊಣೆಗಾರರನ್ನಾಗಿ ಮಾಡಲು ಅಕಾಶವಿಲ್ಲ. ಅಲ್ಲದೇ, ಶಾಲಾ ಬಸ್ನಲ್ಲಿ ಸಿಸಿಟಿವಿ ಕ್ಯಾಮೆರಾ ಮತ್ತು ಅಟೆಂಡರ್ ಒಬ್ಬರನ್ನು ನಿಯೋಜಿಸಲಾಗಿದೆ. ಆದ್ದರಿಂದ ಎಫ್ಐಆರ್ ರದ್ದುಗೊಳಿಸಬೇಕು ಎಂದು ಕೋರಿದ್ದರು.
ಇದಕ್ಕೆ ಆಕ್ಷೇಪಿಸಿದ ಸರ್ಕಾರದ ಪರ ವಕೀಲರು, ಘಟನೆ ನಡೆದ ಸಂದರ್ಭದಲ್ಲಿ ಬಸ್ನಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಘಟನೆಯ ಸಮಯದಲ್ಲಿ ಅಟೆಂಡರ್ ಸಹಾ ಇರಲಿಲ್ಲ. ಆದ್ದರಿಂದ ಅರ್ಜಿ ವಜಾಗೊಳಿಸಬಾರದು ಎಂದು ತಿಳಿಸಿದರು.



