ಕೊಲಂಬೊ: ಶ್ರೀಲಂಕಾದ ಪಶ್ಚಿಮ ಕರಾವಳಿ ನಗರ ನೆಗೊಂಬೊದ ಜೈಲಿನಲ್ಲಿ ನಡೆದ ಹಿಂಸಾಚಾರದಲ್ಲಿ 25 ಮಂದಿ ಮೃತಪಟ್ಟಿದ್ದಾರೆ.
ಕಾರಾಗೃಹದೊಳಗೆ ಕೈದಿಗಳ ನಡುವೆ ಆರಂಭವಾದ ಹೊಡೆದಾಟ ಹಿಂಸಾಚಾರಕ್ಕೆ ತಿರುಗಿದ್ದು,100ಕ್ಕೂ ಅಧಿಕ ಕೈದಿಗಳು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಾಮರ್ಥ್ಯ ಮೀರಿ ಅಧಿಕ ಖೈದಿಗಳಿರುವ ಈ ಜೈಲಿನಲ್ಲಿ ಭಾನುವಾರ ಎರಡು ಪ್ರತಿಸ್ಪರ್ಧಿ ಗುಂಪುಗಳ ನಡುವೆ ಈ ಘರ್ಷಣೆ ಭುಗಿಲೆದ್ದಿದೆ. ಗಲಭೆ ನಡೆಸುತ್ತಿದ್ದ ಕೈದಿಗಳು ಜೈಲಿನ ಬಂದೂಕುಗಳನ್ನು ವಶಪಡಿಸಿಕೊಂಡಿದ್ದರಿಂದ ಸೋಮವಾರ ಮತ್ತೆ ಸಂಘರ್ಷ ಭುಗಿಲೆದ್ದಿತು.
ಜೈಲಿನಲ್ಲಿ ಮಾದಕ ದ್ರವ್ಯ ಕಳ್ಳ ಸಾಗಣೆಗೆ ಬೆಂಬಲಿಸುತ್ತಿದ್ದ ಗುಂಪು ಮತ್ತು ಇಂತಹ ಚಟುವಟಿಕೆಯನ್ನು ವಿರೋಧಿಸಿದ ಗುಂಪಿನ ನಡುವೆ ಈ ಹಿಂಸಾಚಾರ ಭುಗಿಲೆದ್ದಿದೆ ಎಂದು ಪ್ರಾಥಮಿಕ ಮಾಹಿತಿಯಲ್ಲಿ ತಿಳಿದು ಬಂದಿದೆ.
ಘಟನೆ ಬೆನ್ನಲ್ಲೇ ರಾಜ್ಯ ಪೊಲೀಸ್ ವಿಶೇಷ ಟಾಸ್ಕ್ ಫೋರ್ಸ್ (ಎಸ್ಟಿಎಫ್) ಬೆಂಬಲದೊಂದಿಗೆ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಗಲಭೆ ನಿಯಂತ್ರಣ ಘಟಕವನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಲಭೆ ನಿಯಂತ್ರಣಕ್ಕೆ ಕೆಲ ಕೈದಿಗಳ ಸ್ಥಳಾಂತರ: ಘರ್ಷಣೆ ಬೆನ್ನಲ್ಲೇ ಪರಿಸ್ಥಿತಿಯನ್ನು ಹತೋಟಿಗೆ ತರುವ ಮತ್ತು ಹಿಂಸಾಚಾರವನ್ನು ತಡೆಗಟ್ಟಲು ಮೂವರು ಕೈದಿಗಳನ್ನು ಪಲ್ಲನ್ಸೇನಾ ಜೈಲು ಶಿಬಿರಕ್ಕೆ ಸ್ಥಳಾಂತರಿಸಲಾಯಿತು. ಘಟನೆ ಬಗ್ಗೆ ವಿಶೇಷ ತನಿಖೆ ಆರಂಭಿಸಲಾಗಿದೆ ಎಂದು ಕಾರಾಗೃಹ ಇಲಾಖೆಯ ಮಾಧ್ಯಮ ವಕ್ತಾರ ಎ.ಸಿ. ಗಜನಾಯಕ ತಿಳಿಸಿದ್ದಾರೆ.



