ಮಧ್ಯಮ ವೇಗಿ ಜೋಷ್ ಟಂಗ್ ಮತ್ತು ಜೋಫ್ರಾ ಆರ್ಚರ್ ಮಾರಕ ದಾಳಿಗೆ ತತ್ತರಿಸಿದ ಭಾರತ ತಂಡ 76 ರನ್ ಗಳ ಕಳಪೆ ಮೊತ್ತಕ್ಕೆ ಆಲೌಟಾಗಿ ಇಂಗ್ಲೆಂಡ್ ವಿರುದ್ಧದ 3ನೇ ಟಿ-20 ಪಂದ್ಯದಲ್ಲಿ 125 ರನ್ ಗಳ ಹೀನಾಯ ಸೋಲುಂಡಿದೆ.
ನಾಟಿಂಗ್ ಹ್ಯಾಮ್ ನಲ್ಲಿ ಮಂಗಳವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ರನ್ ಚೇಸ್ ಮಾಡಲು ನಿರ್ಧರಿಸಿದ ಭಾರತ ತಂಡ ರನ್ ಚೇಸ್ ಮಾಡುವುದಿರಲಿ. 100ರ ರನ್ ಗಡಿ ದಾಟಲು ಪರದಾಡಿತು. ವೈಭವ್ ಸೂರ್ಯವಂಶಿ ೨ ಸಿಕ್ಸರ್ ಬಾರಿಸಿ ಎಂದಿನಂತೆ ಎರಡಂಕಿಯ ಮೊತ್ತಕ್ಕೆ ನಿರ್ಗಮಿಸಿದರು.
ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಆರಂಭಿಕ ಫಿಲ್ ಸಾಫ್ಟ್ 70 ರನ್ ಗಳ ಸಿಡಿಲಬ್ಬರದ ಆಟದಿಂದ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು ೨೦೧ ರನ್ ಗಳ ಬೃಹತ್ ಮೊತ್ತ ಪೇರಿಸಿತು. ಕಠಿಣ ಗುರಿ ಬೆಂಬತ್ತಿದ ಭಾರತ ತಂಡ 11.4 ಓವರ್ ಗಳಲ್ಲಿ 76 ರನ್ ಗೆ ಗಂಟುಮೂಟೆ ಕಟ್ಟಿತು. ಈ ಗೆಲುವಿನೊಂದಿಗೆ ಇಂಗ್ಲೆಂಡ್ ಟಿ-20 ಸರಣಿಯಲ್ಲಿ 2-0ಯಿಂದ ಮುನ್ನಡೆ ಸಾಧಿಸಿತು.
ಇಂಗ್ಲೆಂಡ್ ಪರ ಜೋಷ್ ಟಂಗ್ 4 ವಿಕೆಟ್ ಕಿತ್ತರೆ, ಜೋಫ್ರಾ ಆರ್ಚರ್ 3 ವಿಕೆಟ್ ಪಡೆದು ಮಿಂಚಿದರು. ಭಾರತದ ಪರ ನಾಲ್ವರು ಎರಡಂಕಿಯ ಮೊತ್ತ ದಾಟಿದರೆ ಉಳಿದವರು ಸಿಂಗಲ್ ಡಿಜಿಟ್ ಗೆ ಪೆವಿಲಿಯನ್ ಸೇರಿಕೊಂಡರು.



