ಹರ್ಮುಜ್ ಜಲಸಂಧಿಯ ಹಡುಗುಗಳ ಮೇಲೆ ದಾಳಿ ನಡೆಸಿದ್ದ ಅಮೆರಿಕ ಇದೀಗ ಇರಾನ್ ನ 80 ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಅರಬ್ ದೇಶಗಳ ಮೇಲೆ ಕ್ಷಿಪಣಿ ದಾಳಿ ನಡೆಸಿ ಪ್ರತ್ಯುತ್ತರ ನೀಡಿದೆ. ಈ ಮೂಲಕ ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಬಿಕ್ಕಟ್ಟು ಉಲ್ಬಣಗೊಂಡಿದೆ.
ಇರಾನ್ ಸುಪ್ರೀಂ ಅಯೊತುಲ್ಲಾ ಖಮೇನಿ ಅಂತ್ಯಕ್ರಿಯೆ ಬೆನ್ನಲ್ಲೇ ಅಮೆರಿಕ ಭೀಕರ ದಾಳಿ ನಡೆಸಿದ್ದು, ಇರಾನ್ ನ ಕರಾವಳಿ ತೀರ ಹಾಗೂ ರಕ್ಷಣಾ ವ್ಯವಸ್ಥೆಗಳನ್ನು ಕೇಂದ್ರೀಕರಿಸಿ ದಾಳಿ ನಡೆಸಲಾಗಿದೆ ಎಂದು ಅಮೆರಿಕ ಹೇಳಿಕೊಂಡಿದೆ.
ಹರ್ಮುಜ್ ಜಲಸಂಧಿಯಲ್ಲಿ ಇರಾನ್ ನ 60ಕ್ಕೂ ಅಧಿಕ ಐಆರ್ ಜಿಸಿ ದೋಣಿಗಳು ಕಾವಲಿಗೆ ನಿಂತಿವೆ. ಈ ಹಿನ್ನೆಲೆಯಲ್ಲಿ ಹರ್ಮುಜ್ ಮೇಲೆ ಹಿಡಿತ ಸಾಧಿಸಲು ಅಮೆರಿಕ ಭೀಕರ ದಾಳಿ ನಡೆಸಿದೆ.
ಹರ್ಮುಜ್ ಜಲಸಂಧಿಯಲ್ಲಿ ಸಾಗುವ ಅಂತಾರಾಷ್ಟ್ರೀಯ ಹಡಗುಗಳ ಮೇಲೆ ಇರಾನ್ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಈ ದಾಳಿ ನಡೆದಿದೆ. ಕಳೆದ 10 ದಿನಗಳ ಹಿಂದೆ ನಡೆಸಿದ ದಾಳಿಗೆ ಹೋಲಿಸಿದರೆ ೪ರಿಂದ ೫ ಪಟ್ಟು ಭೀಕರ ದಾಳಿ ಮಾಡಲಾಗಿದೆ ಎಂದು ಅಮೆರಿಕದ ಸೇನೆ ಪ್ರಕಟಣೆಯಲ್ಲಿ ಹೇಳಿಕೊಂಡಿದೆ.
ಅಮೆರಿಕ ದಾಳಿಯ ಬಗ್ಗೆ ಇರಾನ್ ಯಾವುದೇ ಹೇಳಿಕೆ ನೀಡದೇ ಇದ್ದರೂ ದುಬೈ ಮತ್ತು ಅಬುಧಾಬಿ ಸೇರಿದಂತೆ ಅರಬ್ ರಾಷ್ಟ್ರಗಳಲ್ಲಿರುವ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿ ಇರಾನ್ ಪ್ರತಿದಾಳಿ ನಡೆಸಿದೆ.



