ಲಾರಿ ಹಾಗೂ ತೂಫಾನ್ ಕಮರ್ಷಿಯಲ್ ವಾಹನದ ನಡುವೆ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 6 ಡೆಲಿವರಿ ಬಾಯ್ಸ್ ಸ್ಥಳದಲ್ಲೇ ಮೃತಪಟ್ಟ ಭೀಕರ ಘಟನೆ ಕಾರವಾರ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಾಟ್‌ನ ಬಳಗಾರ್ ಬಳಿ ಸಂಭವಿಸಿದೆ.
ಮೃತರೆಲ್ಲರೂ ಧಾರವಾಡ ಮೂಲದವರಾಗಿದ್ದು, ಹುಬ್ಬಳ್ಳಿ-ಧಾರವಾಡದಲ್ಲಿ ‘ಸ್ವಿಗ್ಗಿ’ (Swiggy) ಸಂಸ್ಥೆಯಲ್ಲಿ ಪಾರ್ಟ್ ಟೈಮ್ ಡೆಲಿವರಿ ಬಾಯ್ಸ್ ಆಗಿ ಕೆಲಸ ಮಾಡುತ್ತಿದ್ದ ಬಸವರಾಜ್ (48 ವರ್ಷ), ಅಭಿಷೇಕ್ ಈಶ್ವರ್ (28 ವರ್ಷ), ಅಕ್ಷಯ (26 ವರ್ಷ), ಅಭಿಷೇಕ್ (26 ವರ್ಷ), ಸಂಜೀವ/ಸಂಜಯ ಅಂಗಡಿ (33 ವರ್ಷ – ವಾಹನ ಚಾಲಕ), ಮಂಜುನಾಥ ಚುಲಕಿ (32 ವರ್ಷ) ಮೃತಪಟ್ಟಿದ್ದಾರೆ.
ಮೂವರಿಗೆ ಗಂಭೀರ ಗಾಯ: ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಶಿವರಾಜ್ ದುರ್ಗಪ್ಪ ಮಡಿವಾಳ್ (22 ವರ್ಷ), ಸಚಿನ್, ಚೆನ್ನಬಸಯ್ಯ ಬಸಲಿಂಗಯ್ಯ ಸಂಪಗಾವ (28 ವರ್ಷ) ಸೇರಿದಂತೆ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಧಾರವಾಡದಿಂದ ರಾತ್ರಿ ವೇಳೆ ಧರ್ಮಸ್ಥಳ ಹಾಗೂ ಮಂಗಳೂರು ಕಡೆಗೆ 9 ಹುಡುಗರ ಗುಂಪು ಪ್ರವಾಸ ಹೊರಟಿತ್ತು. ಅರಬೈಲ್ ಘಾಟ್‌ನ ಬಳಗಾರ್ ತಲುಪುತ್ತಿದ್ದಂತೆ ತೂಫಾನ್ ವಾಹನ ಹಾಗೂ ಲಾರಿ (KA-22-AA-1008) ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ತೂಫಾನ್ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ.
ಅಪಘಾತ ಸ್ಥಳಕ್ಕೆ ಪೊಲೀಸರ ಭೇಟಿ: ಘಟನಾ ಸ್ಥಳಕ್ಕೆ ಯಲ್ಲಾಪುರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸದ್ಯಕ್ಕೆ ಇದು ಪ್ರಾಥಮಿಕ ಮಾಹಿತಿಯಾಗಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



