ಮಹಿಳಾ ಕಾನ್ಸ್ ಟೇಬಲ್ ಜೊತೆ ಲಾಡ್ಜ್ ನಲ್ಲಿ ಅಕ್ರಮ ಲೈಂಗಿಕ ಚಟುವಟಿಕೆಯಲ್ಲಿ ಇದ್ದಾಗ ಸಿಕ್ಕಿಬಿದ್ದಿದ್ದ ಉತ್ತರ ಪ್ರದೇಶದ ಡೆಪ್ಯೂಟಿ ಪೊಲೀಸ್ ಸೂಪರಿಟೆಂಡೆಂಟ್ ಆಗಿದ್ದ ಕೃಪಾ ಶಂಕರ್ ಅವರನ್ನು ಕಾನ್ಸ್ ಟೇಬಲ್ ಹುದ್ದೆಗೆ ಹಿಂಬಡ್ತಿ ನೀಡಲಾಗಿದೆ.
ಮೂರು ವರ್ಷಗಳ ಹಿಂದೆ ಖಾಸಗಿ ಹೋಟೆಲ್ ನಲ್ಲಿ ಮಹಿಳಾ ಕಾನ್ಸ್ ಟೇಬಲ್ ಜೊತೆ ಅಕ್ರಮ ಸಂಬಂಧದಲ್ಲಿ ಇದ್ದಾಗಲೇ ಕೃಪಾ ಶಂಕರ್ ಸಿಕ್ಕಿಬಿದ್ದಿದ್ದರು. ಈ ಹಿಂದೆ ಉನ್ನಾವೊ ಪೊಲೀಸ್ ಠಾಣೆಯಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಆಗಿದ್ದ ಕೃಪಾ ಶಂಕರ್ ಗೆ ಮಾಮೂಲಿ ಕಾನ್ಸ್ ಟೇಬಲ್ ಹುದ್ದೆಗೆ ಹಿಂಬಡ್ತಿ ನೀಡಲಾಗಿದೆ.
2021 ಜನವರಿಯಿಂದ ಕೃಪಾ ಶಂಕರ್ ನಾನಾ ಕಾರಣ ಹೇಳಿ ರಜೆ ಪಡೆಯುತ್ತಿದ್ದು, ಕಚೇರಿಯಲ್ಲಿ ನಾಪತ್ತೆಯಾಗಿದ್ದರು. ಮನೆಗೆ ಮರಳಿದ ನಂತರ ಪರಿಶೀಲನೆ ನಡೆಸಿದಾಗ ಕಾನ್ಪುರದ ಹೋಟೆಲ್ ನಲ್ಲಿ ತಂಗಿದ್ದು ತಿಳಿದು ಬಂದಿತು. ಇದೇ ವೇಳೆ ಮಹಿಳಾ ಕಾನ್ಸ್ ಟೇಬಲ್ ಕೂಡ ಅಲ್ಲಿ ಇದ್ದಿದ್ದು ತಿಳಿದು ಬಂದಿತು. ಇಬ್ಬರೂ ಒಟ್ಟಿಗೆ ಇರುವ ವೇಳೆ ಇಬ್ಬರ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಅನುಮಾನಕ್ಕೆ ಕಾರಣವಾಗಿತ್ತು.
ಗಂಡ ನಾಪತ್ತೆಯಾಗಿದ್ದರಿಂದ ಪತ್ನಿ ಉನ್ನಾವೊ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಭೇಟಿ ಮಾಡಿ ನೆರವು ಕೋರಿದ್ದರು. ಅವರ ಮೊಬೈಲ್ ಟ್ರೇಸ್ ಮಾಡಿ ಮಾಹಿತಿ ಕಲೆ ಹಾಕಿದಾಗ ಕಾನ್ಪುರ ಹೋಟೆಲ್ ನಲ್ಲಿ ಇದ್ದಿದ್ದು ಪತ್ತೆ ಆಗಿತ್ತು.
ಸಿಸಿಟಿವಿ ಮಾಹಿತಿ ಸಂಗ್ರಹಿಸಿದಾಗ ಇಬ್ಬರು ಹೋಟೆಲ್ ಕೊಠಡಿಗೆ ಹೋಗಿದ್ದು ಮತ್ತು ಬಂದಿದ್ದು ಸೆರೆಯಾಗಿತ್ತು. ಸರ್ಕಾರಕ್ಕೆ ಇಬ್ಬರ ನಡುವಿನ ಅಕ್ರಮ ಸಂಬಂಧ ಕುರಿತು ವರದಿ ನೀಡಲಾಗಿದ್ದು, ಉತ್ತರ ಪ್ರದೇಶ ಸರ್ಕಾರ ಕಾನ್ಸ್ ಟೇಬಲ್ ಆಗಿ ಹಿಂಬಡ್ತಿ ಮಾಡಿ ಆದೇಶ ಹೊರಡಿಸಿದೆ.