Friday, July 17, 2026
Google search engine
Homeಅಪರಾಧಶಿವಮೊಗ್ಗದಲ್ಲಿ ಜೈಲಿಗೆ ಕರೆದೊಯ್ಯುವಾಗ ಆರೋಪಿ ಎಸ್ಕೇಪ್‌!

ಶಿವಮೊಗ್ಗದಲ್ಲಿ ಜೈಲಿಗೆ ಕರೆದೊಯ್ಯುವಾಗ ಆರೋಪಿ ಎಸ್ಕೇಪ್‌!

ಶಿವಮೊಗ್ಗ : ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯುತ್ತಿದ್ದಾಗ ಆರೋಪಿಯೊಬ್ಬ ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಯ ಸುಪರ್ದಿಯಿಂದ ಮಾರ್ಗಮಧ್ಯೆ ಪರಾರಿಯಾಗಿರುವ ಘಟನೆ ಹೊಸನಗರ ತಾಲ್ಲೂಕಿನ ಬಟ್ಟೆಮಲ್ಲಪ್ಪ ಸರ್ಕಲ್ ಬಳಿ ನಡೆದಿದೆ.

ಹೊಸನಗರ ತಾಲ್ಲೂಕಿನ ಅಡುಗೋಡಿ ಗ್ರಾಮದ ವೆಂಕಟೇಶ್ (36) ಪರಾರಿಯಾದ ಆರೋಪಿ. ಪ್ರಕರಣವೊಂದರ ಸಂಬಂಧ ವೆಂಕಟೇಶನನ್ನು ನ್ಯಾಯಾಲಯದ ವಾರಂಟ್ ಹಿನ್ನೆಲೆ ಅರಣ್ಯ ಇಲಾಖೆ ಸಿಬ್ಬಂದಿ ಈತನನ್ನು ವಶಕ್ಕೆ ಪಡೆದಿದ್ದರು. ಆರೋಪಿಯನ್ನು ಹೊಸನಗರದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ, ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯುವಂತೆ ಆದೇಶಿಸಿದ್ದರು.

ನ್ಯಾಯಾಲಯದ ಆದೇಶದಂತೆ ಅರಣ್ಯ ಉಪವಲಯ ಅಧಿಕಾರಿಗಳಾದ ಸುನೀಲ್‌ ಡಿ. ಕುಂಬಾರ್, ಇಬ್ರಾಹಿಂ, ಅರಣ್ಯ ವೀಕ್ಷಕ ಅಯಾನ್ ಬೆಡೆಭಾಯಿ ಹಾಗೂ ಕಳ್ಳಬೇಟೆ ತಡೆ ಶಿಬಿರದ ಸಿಬ್ಬಂದಿ ಚಕ್ರಪಾಣಿ ಅವರು ಇಲಾಖಾ ವಾಹನದಲ್ಲಿ ಆರೋಪಿಯನ್ನು ಶಿವಮೊಗ್ಗಕ್ಕೆ ಕರೆದೊಯ್ಯುತ್ತಿದ್ದರು. ಮಧ್ಯಾಹ್ನ 2 ಗಂಟೆ ಹೊತ್ತಿಗೆ ವಾಹನವು ಬಟ್ಟೆಮಲ್ಲಪ್ಪ ಸರ್ಕಲ್ ಬಳಿ ತಲುಪಿದಾಗ, ತನಗೆ ಹಸಿವಾಗುತ್ತಿದೆ. ಊಟ ಕೊಡಿಸುವಂತೆ ಆರೋಪಿ ವೆಂಕಟೇಶ್ ಸಿಬ್ಬಂದಿಗೆ ತಿಳಿಸಿದ್ದ.

ಆರೋಪಿಯ ಮಾತನ್ನು ನಂಬಿದ ಅಧಿಕಾರಿಗಳಾದ ಸುನೀಲ್ ಹಾಗೂ ಇಬ್ರಾಹಿಂ ಅವರು ಜೀಪ್ ನಿಲ್ಲಿಸಿ, ಸಮೀಪದ ಸಹನಾ ಹೋಟೆಲ್‌ಗೆ ಊಟ ತರಲು ಹೋಗಿದ್ದಾರೆ. ಈ ವೇಳೆ ಜೀಪ್‌ನಲ್ಲಿ ಆರೋಪಿಯ ಕಾವಲಿಗಿದ್ದ ಅರಣ್ಯ ವೀಕ್ಷಕ ಅಯಾನ್ ಹಾಗೂ ಚಕ್ರಪಾಣಿ ಅವರನ್ನು ಜೋರಾಗಿ ತಳ್ಳಿ, ಹಲ್ಲೆ ನಡೆಸಿದ ಆರೋಪಿ ವೆಂಕಟೇಶ್ ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ತಕ್ಷಣವೇ ಸಿಬ್ಬಂದಿ ಬಟ್ಟೆಮಲ್ಲಪ್ಪ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆರೋಪಿ ವೆಂಕಟೇಶ್‌ಗಾಗಿ ಹುಡುಕಾಟ ನಡೆಸಿದರು. ಆತ ಪತ್ತೆಯಾಗಿಲ್ಲ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments