ಶ್ರೀರಂಗಪಟ್ಟಣ (ಮಂಡ್ಯ): ರೈತರ ನಿರಂತರ ಹೋರಾಟದ ಫಲವಾಗಿ ಕೃಷ್ಣರಾಜಸಾಗರ (ಕೆ.ಆರ್.ಎಸ್) ಅಣೆಕಟ್ಟೆಯಿಂದ ಗುರುವಾರ ಸಂಜೆಯಿಂದ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಬಿಡಲಾಗಿದೆ.
ಅಣೆಕಟ್ಟೆಯ ಮುಖ್ಯ ನಾಲೆಯಾದ ವಿಶ್ವೇಶ್ವರಯ್ಯ ನಾಲೆ ಹಾಗೂ ನದಿ ಒಡ್ಡಿನ ನಾಲೆಗಳಿಗೆ ನೀರು ಹರಿಸಲಾಗಿದೆ.
ಮಂಡ್ಯ, ಮಳವಳ್ಳಿ, ಮದ್ದೂರು, ಪಾಂಡವಪುರ, ಶ್ರೀರಂಗಪಟ್ಟಣ ಭಾಗಕ್ಕೆ ನೀರೊದಗಿಸುವ ವಿಶ್ವೇಶ್ವರಯ್ಯ ನಾಲೆಯ ಮೂರು ತೂಬುಗಳ ಪೈಕಿ ಎರಡು ತೂಬುಗಳನ್ನು ತೆರೆದು ನೀರು ಬಿಡಲಾಗಿದೆ. ಈ ನಾಲೆಗೆ ಸದ್ಯ 400 ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
‘ಮಂಡ್ಯ ಜಿಲ್ಲೆಯಲ್ಲಿ ಮಳೆ ಕೊರತೆಯಿಂದಾಗಿ ಕೆರೆ, ಕಟ್ಟೆಗಳು ಬತ್ತಿ ಹೋಗಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿತ್ತು. ಅಂತರ್ಜಲ ಮಟ್ಟ ಕುಸಿದು ಕೊಳವೆ ಬಾವಿಗಳು ಕೂಡ ನಿಷ್ಫಲವಾಗಿದ್ದವು. ಸರ್ಕಾರದ ಸೂಚನೆಯಂತೆ, ಕುಡಿಯುವ ನೀರಿಗೆ ಅನುಕೂಲ ಆಗಲೆಂದು ನಾಲೆಗಳಿಗೆ ನೀರು ಹರಿಸಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
‘ಈ ಬಾರಿ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದ್ದು, ಕುಡಿಯುವ ನೀರಿಗೆ ಸಮಸ್ಯೆಯಾಗಿತ್ತು. ಹಾಗಾಗಿ ಕಳೆದ 15 ದಿನಗಳಿಂದ ರೈತರು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಿತ್ತು. ಕೆಆರ್‌ಎಸ್ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಹರಿಸಿರುವುದರಿಂದ ನಿಟ್ಟುಸಿರು ಬಿಟ್ಟಿದ್ದೇವೆ’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್. ಕೆಂಪೂಗೌಡ ಸಂತಸ ವ್ಯಕ್ತಪಡಿಸಿದ್ದಾರೆ.
‘ತಡವಾದರೂ ನಾಲೆಗಳಿಗೆ ನೀರು ಬಿಟ್ಟಿರುವುದು ನೆಮ್ಮದಿ ತಂದಿದೆ. ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುವ ಹೊಣೆ ಸರ್ಕಾರದ್ದು. ಸದ್ಯ ವಿಶ್ವೇಶ್ಚರಯ್ಯ ನಾಲೆಗೆ ಮಾತ್ರ ನೀರು ಹರಿಸಲಾಗಿದೆ. ಸಿಡಿಎಸ್, ವಿರಿಜಾ ಇತರ ನಾಲೆಗಳಿಗೂ ನೀರು ಹರಿಸಬೇಕು. ಇಲ್ಲದಿದ್ದರೆ ಚಳವಳಿ ಮುಂದುವರೆಯಲಿದೆ’ ಎಂದು ಎಂದು ಭೂಮಿತಾಯಿ ಹೋರಾಟ ಸಮಿತಿಯ ಗೌರವಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ ತಿಳಿಸಿದ್ದಾರೆ.



