Thursday, July 23, 2026
Google search engine
Homeಅಪರಾಧಮ್ಯಾನ್ಮರ್ ನಲ್ಲಿ ಸೈಬರ್ ವಂಚಕರ ಜಾಲದಲ್ಲಿ ಸಿಲುಕಿದ್ದ ಇಬ್ಬರು ಕನ್ನಡಿಗರ ರಕ್ಷಣೆ

ಮ್ಯಾನ್ಮರ್ ನಲ್ಲಿ ಸೈಬರ್ ವಂಚಕರ ಜಾಲದಲ್ಲಿ ಸಿಲುಕಿದ್ದ ಇಬ್ಬರು ಕನ್ನಡಿಗರ ರಕ್ಷಣೆ

ಬೆಂಗಳೂರು: ಮ್ಯಾನ್ಮಾರ್‌ನಲ್ಲಿ ನಡೆಯುತ್ತಿದ್ದ ಚೀನಾ ನಿಯಂತ್ರಿತ ಸೈಬರ್ ಕ್ರೈಮ್ ವಂಚಕರ ಜಾಲದಲ್ಲಿ ಸಿಲುಕಿದ್ದ ಇಬ್ಬರು ಭಾರತೀಯ ಪ್ರಜೆಗಳನ್ನು ಕರ್ನಾಟಕ ಸೈಬರ್ ಕಮಾಂಡ್, ಇಂಡಿಯನ್ ಸೈಬರ್ ಕ್ರೈಮ್ ಕೋ-ಆರ್ಡಿನೇಷನ್ ಸೆಂಟರ್ (I4ಸಿ), ಜಾರಿ ನಿರ್ದೇಶನಾಲಯ (ಇಡಿ) ಮತ್ತು ಮ್ಯಾನ್ಮಾರ್‌ನ ಭಾರತೀಯ ರಾಯಭಾರ ಕಚೇರಿಯ ಸಹಯೋಗದೊಂದಿಗೆ ಯಶಸ್ವಿಯಾಗಿ ರಕ್ಷಿಸಲಾಗಿದೆ.

ರಕ್ಷಿಸಿರುವ ಕರ್ನಾಟಕದ ಇಬ್ಬರು ನಿವಾಸಿಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ. ವಿದೇಶದಲ್ಲಿರುವ ಭಾರತೀಯ ಪ್ರಜೆಗಳ ರಕ್ಷಣೆಗಾಗಿ ಗುಪ್ತಚರ ಮಾಹಿತಿ ವಿನಿಮಯ ಮತ್ತು ರಾಜತಾಂತ್ರಿಕ – ಕಾನೂನು ಜಾರಿ ಸಂಸ್ಥೆಗಳ ನಡುವಿನ ಸಮನ್ವಯ ಎಷ್ಟು ಪರಿಣಾಮಕಾರಿ ಎಂಬುದಕ್ಕೆ ಈ ಕಾರ್ಯಾಚರಣೆ ಸಾಕ್ಷಿಯಾಗಿದೆ ಎಂದು ಕರ್ನಾಟಕ ಸೈಬರ್ ಕಮಾಂಡ್ ಸೆಂಟರ್ ಪೊಲೀಸ್ ಮಹಾನಿರ್ದೇಶಕ(ಡಿಜಿಪಿ) ಪ್ರಣಬ್ ಮೊಹಂತಿ ಮಾಹಿತಿ ಅವರು ತಿಳಿಸಿದ್ದಾರೆ.

ಇಡಿ ಅಧಿಕಾರಿಗಳಿಂದ ಲಭ್ಯವಾದ ಮಾಹಿತಿಯನ್ನು ಆಧರಿಸಿ ಕರ್ನಾಟಕ ಸೈಬರ್ ಕಮಾಂಡ್ ಸೆಂಟರ್, ಕೂಡಲೇ ಇಂಡಿಯನ್ ಸೈಬರ್ ಕ್ರೈಮ್ ಕೋ-ಆರ್ಡಿನೇಷನ್ ಸೆಂಟರ್, ಮ್ಯಾನ್ಮಾರ್‌ನ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿತ್ತು. ಅತ್ಯಂತ ಕಡಿಮೆ ಸಮಯದಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರೂ ಯುವಕರನ್ನು ರಕ್ಷಿಸಲಾಯಿತು ಎಂದು ಹೇಳಿದರು.
ರಕ್ಷಿಸಲ್ಪಟ್ಟ ಇಬ್ಬರು ಕೆಜಿಎಫ್ ಮೂಲದವರಾಗಿದ್ದು, ದ್ವಿತೀಯ ಪಿಯುಸಿ ವಿದ್ಯಾಭ್ಯಾಸದ ಬಳಿಕ ಬಿಪಿಒ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದೆವು. ಸಂಸ್ಥೆ ಮುಚ್ಚಲ್ಪಟ್ಟ ಬಳಿಕ ಹೊಸ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದಾಗ ಫೇಸ್‌ಬುಕ್‌ನ ಮೂಲಕ ಕಂಡುಬಂದ ಥೈಲ್ಯಾಂಡ್‌ನ ‘ಚಾಟ್ ಪ್ರೊಸೆಸ್’ ಉದ್ಯೋಗದ ಜಾಹೀರಾತಿಗೆ ಅರ್ಜಿ ಸಲ್ಲಿಸಿದ್ದೆವು.

ಆನ್‌ಲೈನ್ ಸಂದರ್ಶನದ ಬಳಿಕ ಇಬ್ಬರಿಗೂ ವೀಸಾ ಮತ್ತು ವಿಮಾನ ಟಿಕೆಟ್‌ಗಳನ್ನು ನೀಡಲಾಗಿತ್ತು. ಕಳೆದ ವಾರ ಪ್ರಯಾಣ ಬೆಳೆಸುವ ಕೇವಲ ಐದು ಗಂಟೆಗೂ ಮುನ್ನ ಕರೆ ಮಾಡಿದ್ದ ರಾಯ್ ಎಂಬಾತ, ತಾನು ಲೈನ್ ಮ್ಯಾನೇಜರ್ ಅಂತ ಪರಿಚಯಿಸಿಕೊಂಡಿದ್ದ. ನಾವು ಬ್ಯಾಂಕಾಕ್‌ನಲ್ಲಿ ಇಳಿದಾಗ ನಮ್ಮನ್ನು ಮೊದಲು ಕ್ಯಾಬ್‌ನಲ್ಲಿ ಕರೆದೊಯ್ಯಲಾಗಿತ್ತು. ಮರುದಿನ ಬೆಳಗ್ಗೆ, ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ನಮ್ಮನ್ನು ನದಿಯೊಂದರ ಬಳಿ ಕರೆದೊಯ್ದರು. ಅಲ್ಲಿ ಮಷಿನ್​ಗನ್ ಹಿಡಿದು ಸೇನಾ ಸಮವಸ್ತ್ರದಲ್ಲಿದ್ದ ವ್ಯಕ್ತಿಗಳ ಕಾವಲಿನಲ್ಲಿ ನಮ್ಮನ್ನು ಬಲವಂತವಾಗಿ ದೋಣಿಗೆ ಹತ್ತಿಸಲಾಯಿತು” ಎಂದು ಸಂತ್ರಸ್ತರು ತಮ್ಮ ಮುಂದೆ ವಿವರಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಅಲ್ಲಿಂದ ಕಟ್ಟುನಿಟ್ಟಿನ ಭದ್ರತೆಯಿರುವ ಸ್ಥಳಕ್ಕೆ ಇಬ್ಬರನ್ನೂ ಕರೆದೊಯ್ಯಲಾಯಿತು. ನಮಗೆ ಭರವಸೆ ನೀಡಿದ್ದ ಉದ್ಯೋಗದ ಬದಲಿಗೆ, ಅಮೆರಿಕದಲ್ಲಿರುವ ಭಾರತೀಯ ಮೂಲದವರನ್ನು ಗುರಿಯಾಗಿಸಿಕೊಂಡು ಸೈಬರ್ ವಂಚನೆ ಮಾಡುವ ಕೆಲಸಕ್ಕೆ ತಳ್ಳಲಾಯಿತು. ತೀವ್ರ ಕಣ್ಗಾವಲಿದ್ದ ಆ ಸ್ಥಳದಲ್ಲಿ ಕೆಲಸಕ್ಕೆ ಕೇವಲ 10 ಸೆಕೆಂಡ್‌ ತಡವಾದರೆ ಅಥವಾ ನಿಯಮ ಉಲ್ಲಂಘಿಸಿದರೆ ಸಿಟ್‌-ಅಪ್ಸ್‌, 30-40 ರೌಂಡ್ ರನ್ನಿಂಗ್, ಮರದ ಕೋಲುಗಳಿಂದ ಹೊಡೆಯುವುದು ಹಾಗೂ ವಿದ್ಯುತ್ ಶಾಕ್ ನೀಡಿ ಏಕಾಂತ ಬಂಧನದಲ್ಲಿಡುವುದು ಸೇರಿದಂತೆ ಮುಂತಾದ ಭೀಕರ ಕಿರುಕುಳ ನೀಡಲಾಗುತ್ತಿತ್ತು. ಅವರದ್ದೇ ಕಣ್ಗಾವಲಿನಲ್ಲಿ ಪ್ರತಿದಿನ ಕೇವಲ ಒಂದು ಗಂಟೆ ಮಾತ್ರ ಮೊಬೈಲ್ ಬಳಸಲು ಅವಕಾಶ ನೀಡಲಾಗುತ್ತಿತ್ತು” ಎಂದು ಯುವಕರು ವಿವರಿಸಿದ್ದಾರೆ‌ ಎಂದು‌ ಪೊಲೀಸರು ತಿಳಿಸಿದ್ದಾರೆ.

ಮ್ಯಾನ್ಮಾರ್‌ನ ಗಡಿ ಪ್ರದೇಶದಲ್ಲಿರುವ ಈ ವಂಚನೆ ಕೇಂದ್ರಗಳು ಚೀನಾದ ನಿಯಂತ್ರಣದಲ್ಲಿವೆ. ಮಾನವ ಕಳ್ಳಸಾಗಣೆ ಮೂಲಕ ಈ ಕೇಂದ್ರಗಳಿಗೆ ಕರೆತರಲಾಗುವ ಜನರನ್ನು ಬಲವಂತವಾಗಿ ಸೈಬರ್ ವಂಚನೆಗಳಿಗೆ ಬಳಸಿಕೊಳ್ಳಲಾಗುತ್ತಿದೆ.

ಹೂಡಿಕೆ ವಂಚನೆ, ರೋಮ್ಯಾನ್ಸ್ ಸ್ಕ್ಯಾಮ್‌, ತನಿಖಾ ಸಂಸ್ಥೆಗಳ ಹೆಸರಿನ ವಂಚನೆಗಳಿಗೆ ಬಲವಂತವಾಗಿ ಬಳಸಿಕೊಳ್ಳಲಾಗುತ್ತಿದೆ. ಭಾರಿ ವೇತನದ ಐಟಿ ಕೆಲಸ, ಕಸ್ಟಮರ್ ಸಪೋರ್ಟ್, ಡೇಟಾ ಎಂಟ್ರಿ ಅಥವಾ ಆನ್‌ಲೈನ್ ಮಾರ್ಕೆಟಿಂಗ್ ಹುದ್ದೆಗಳಿಗೆ ಭಾರಿ ವೇತನದ ಆಮಿಷ ನಂಬಿ ಆಗ್ನೇಯ ಥೈಲ್ಯಾಂಡ್, ಮ್ಯಾನ್ಮಾರ್, ಲಾವೋಸ್ ಅಥವಾ ಕಾಂಬೋಡಿಯಾಗಳಿಗೆ ತೆರಳುವ ಮುನ್ನ ಯುವ ಜನತೆ ಎಚ್ಚರಿಕೆ ವಹಿಸುವಂತೆ ಕರ್ನಾಟಕ ಸೈಬರ್ ಕಮಾಂಡ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments