ನವದೆಹಲಿ: ಕೇಂದ್ರ ಸರ್ಕಾರ ಶಿಕ್ಷಣ ನಂತರ ಇದೀಗ ಕ್ರೀಡೆಯನ್ನೂ ಕೇಸರಿಕರಣ ಮಾಡಲು ಮುಂದಾಗಿದ್ದು, ಈ ಬೆಳವಣಿಗೆ ಕ್ರೀಡಾಕ್ಷೇತ್ರದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ.
ಭಾರತದ ಹಾಕಿ ತಂಡದ ಸಮವಸ್ತ್ರದ ಬಣ್ಣವನ್ನು ನೀಲಿಯಿಂದ ಕೇಸರಿಗೆ ಬದಲಾಯಿಸಲಾಗಿದೆ. ಮುಂದಿನ ತಿಂಗಳು ನಡೆಯಲಿರುವ ಎಫ್‌ಐಎಚ್ ವಿಶ್ವಕಪ್‌ನಲ್ಲಿ ಪುರುಷ ಮತ್ತು ಮಹಿಳಾ ಭಾರತ ಹಾಕಿ ತಂಡಗಳು ಸಾಂಪ್ರದಾಯಿಕವಾಗಿ ಬಳಸುತ್ತಿದ್ದ ನೀಲಿ ಜೆರ್ಸಿಯ ಬದಲು ಕೇಸರಿ ಬಣ್ಣದ ಜೆರ್ಸಿ ಧರಿಸಲಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ನೀಲಿ ಸಮವಸ್ತ್ರದೊಂದಿಗೆ ಮೈದಾನಕ್ಕೆ ಇಳಿಯಲಾಗುತ್ತಿತ್ತು. ಇತ್ತೀಚೆಗೆ ಭಾರತ ಕ್ರಿಕೆಟ್ ತಂಡದಲ್ಲಿ ನೀಲಿಯ ಮಧ್ಯದಲ್ಲಿ (ಭುಜದ ಬಳಿ) ಕೇಸರಿ ಬಣ್ಣ ಸೇರಿಸಿತ್ತು. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಭಾರತ ಹಾಕಿ ತಂಡದ ಜೆರ್ಸಿಯ ಬಣ್ಣವನ್ನು ಸಂಪೂರ್ಣವಾಗಿ ಕೇಸರಿಯಾಗಿ ಬದಲಾಯಿಸಲಾಗಿದೆ.
ತಂಡದ ಗುರುತು ಮತ್ತು ಪರಂಪರೆಯನ್ನು ಬದಲಾಯಿಸುವ ಅಗತ್ಯವೇನು ಎಂದು ಮಾಜಿ ಆಟಗಾರರು ಪ್ರಶ್ನಿಸಿದ್ದು, ಹಾಕಿ ಇಂಡಿಯಾ ಏಕಾಏಕಿ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೊಸ ಜೆರ್ಸಿಯನ್ನು ಅನಾವರಣಗೊಳಿಸಿರುವ ಹಾಕಿ ಇಂಡಿಯಾ, ಇದು ಭಾರತದ ತ್ರಿವರ್ಣ ಧ್ವಜ ಮತ್ತು ಉದಯಿಸುವ ಸೂರ್ಯನಿಂದ ಪ್ರೇರಿತವಾದ ವಿನ್ಯಾಸ ಎಂದು ಹೇಳಿದೆ. ಜೆರ್ಸಿಯಲ್ಲಿರುವ ಮಂಡಲ ಮಾದರಿಗಳು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತವೆ. ಅಶೋಕ ಚಕ್ರವನ್ನು ಪ್ರತಿನಿಧಿಸುವಂತೆ ಗಾಢ ನೀಲಿ ಬಣ್ಣದ ಅಂಶಗಳನ್ನು ಬಳಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಭಾರತದ ಮಾಜಿ ನಾಯಕ ಹಾಗೂ ಒಲಿಂಪಿಕ್ ಗೋಲ್ಡ್ ಕ್ವೆಸ್ಟ್‌ನ ಸಿಇಒ ವಿರೇನ್ ರಸ್ಕಿನ್ಹಾ ಅವರು ಈ ನಿರ್ಧಾರವನ್ನು ಟೀಕಿಸಿದ್ದು, ‘ಭಾರತೀಯ ತಂಡದ ಗುರುತು ಮತ್ತು ಪರಂಪರೆ ಎಂದಿಗೂ ನೀಲಿ ಜೆರ್ಸಿಯೇ. ಹಲವು ವರ್ಷಗಳ ಕಾಲ ಅದನ್ನು ಹೆಮ್ಮೆಯಿಂದ ಧರಿಸಿದ್ದೇನೆ. ಕೇಸರಿ ಬಣ್ಣದ ಜೆರ್ಸಿಯ ಹಿಂದಿನ ತರ್ಕವೇನು?’ ಎಂದು ಎಕ್ಸ್‌ನಲ್ಲಿ ಪ್ರಶ್ನಿಸಿದ್ದಾರೆ.
ಎಫ್‌ಐಎಚ್ ವಿಶ್ವಕಪ್ ಆಗಸ್ಟ್ 15ರಿಂದ 30ರವರೆಗೆ ನೆದರ್‌ಲ್ಯಾಂಡ್ಸ್ ಮತ್ತು ಬೆಲ್ಜಿಯಂನಲ್ಲಿ ನಡೆಯಲಿದೆ.



