ಕುರ್ ಕುರೆ ಪ್ಯಾಕೆಟ್‌ನಲ್ಲಿದ್ದ ಸಣ್ಣ ಪ್ಲಾಸ್ಟಿಕ್ ಆಟಿಕೆ ಚೆಂಡನ್ನು ನುಂಗಿ 5 ವರ್ಷದ ಬಾಲಕ ಮೃತಪಟ್ಟ ಆಘಾತಕಾರಿ ಘಟನೆ ಮೈಸೂರಿನಲ್ಲಿ ಶನಿವಾರ ನಡೆದಿದೆ.
ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಗೌರಮ್ಮ ಮತ್ತು ಶಂಕರ್ ನಾಯಕ್ ಅವರ ಮೊಮ್ಮಗ ಮತ್ತು ಸಂತೋಷ್ ಮತ್ತು ಐಶ್ವರ್ಯ ಅವರ ಏಕೈಕ ಪುತ್ರ ಮುಕುಂದ್ ಮಯೂರ್ ಮೃತಪಟ್ಟ ಬಾಲಕ.
ಕುರ್‌ಕರೆ ಪ್ಯಾಕೆಟ್ ಒಳಗೆ ಗಿಫ್ಟ್ ರೂಪದಲ್ಲಿ ಪ್ಲಾಸ್ಟಿಕ್ ಚೆಂಡು ಇತ್ತು. ಕುರ್‌ಕುರೆ ತಿಂದ ಬಳಿಕ ಗಿಫ್ಟ್ ಬಾಲ್ ಬಾಯಿಗೆ ಹಾಕಿರುವ ಮಗು ಅಕಸ್ಮಿಕವಾಗಿ ನುಂಗಿದಾಗ ಗಂಟಲಲ್ಲಿ ಸಿಲುಕಿ ಉಸಿರುಗಟ್ಟಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಮಗು ಅಳುತ್ತಿರುವುದನ್ನು ಕಂಡ ಸಂಬಂಧಿಕರ ಮಕ್ಕಳು ಗೌರಿಪುರದ ಅಂಗಡಿಯಿಂದ ಕುರ್ ಕುರೆಯಂತಹ ತಿಂಡಿ ಪೊಟ್ಟಣದ ಪ್ಯಾಕೆಟ್ ಕೊಡಿಸಿದ್ದಾರೆ. ಮಕ್ಕಳನ್ನು ಆಕರ್ಷಿಸುವ ಉದ್ದೇಶದಿಂದ ಆ ಪ್ಯಾಕೆಟ್ ನೊಳಗೆ ತಿಂಡಿ ತಯಾರಿಕಾ ಕಂಪೆನಿ ಹಾಕಿದ್ದ ಸಣ್ಣ ಚೆಂಡು ಆಕಸ್ಮಿಕವಾಗಿ ಮಗುವಿನ ಗಂಟಲಲ್ಲಿ ಸಿಲುಕಿದೆ.
ಇದನ್ನು ಗಮನಿಸಿದ ಮನೆಯವರು ತಕ್ಷಣವೇ ಮಗುವನ್ನು ಹುಣಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲಿ ಮಗು ಉಸಿರುಗಟ್ಟಿ ಮೃತಪಟ್ಟಿತ್ತು. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹುಣಸೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.



