ಬೆಂಗಳೂರು:ಇದುವರೆಗೆ ನೋಂದಣಿಯಾಗದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಮುಂದೆಯೂ ನೋಂದಣಿ ಮಾಡುವುದಿಲ್ಲ ಎಂದು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರು ಸ್ಪಷ್ಟಪಡಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಬನ್ನಪ್ಪ ಪಾರ್ಕ್ನಲ್ಲಿ ಹಿಂದೂ ಜಾಗರಣ ವೇದಿಕೆ ಆಯೋಜಿಸಿದ್ದ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದ ಅವರು ಆರ್ಎಸ್ಎಸ್ ಸಂಘಟನೆಯು ಯಾವುದೇ ನೋಂದಣಿಯನ್ನು ಹೊಂದಿಲ್ಲ ಹಾಗೂ ಅದನ್ನು ಭವಿಷ್ಯದಲ್ಲೂ ಮಾಡುವುದಿಲ್ಲ ಎಂದು ಹೇಳಿದರು.
ನೋಂದಣಿ ಮಾಡಿಕೊಂಡಿರುವ ಸಂಘಟನೆಗಳು ಮತ್ತು ಸಂಸ್ಥೆಗಳು ಯಾವ ರೀತಿಯ ಚಟುವಟಿಕೆಗಳಲ್ಲಿ ತೊಡಗಿವೆ ಎಂಬುದು ನಮಗೆ ತಿಳಿದಿದೆ ಎಂದು ಸಂತೋಷ್ ತಿಳಿಸಿದರು. ಸಂಘದ ನೋಂದಣಿಯು ಯಾವುದೇ ವಿಷಯಕ್ಕೆ ಮಾನದಂಡವಲ್ಲ ಅಥವಾ ಪ್ರಿಯಾಂಕ್ ಖರ್ಗೆ ಅವರು ಎಲ್ಲದಕ್ಕೂ ಮಾನದಂಡವಲ್ಲ ಎಂದು ವಾಗ್ದಾಳಿ ನಡೆಸಿದರು.
ಹಿಂದಿನ ಕಾಲಘಟ್ಟದಲ್ಲಿ ರಜಾಕರರ ದಾಳಿಗೆ ಹೆದರಿ ಬಂದವರ ಕುಟುಂಬಗಳು ಇಂದು ನೆಮ್ಮದಿಯಿಂದಿರಲು ಆರ್.ಎಸ್ಎಸ್ ಕಾರಣ ಎಂದು ಅವರು ಸ್ಮರಿಸಿದರು. ಅಂತಹ ಸಂದರ್ಭಗಳಲ್ಲಿ ಸಂಘದ ಕಾರ್ಯಕರ್ತರು ಜನರ ರಕ್ಷಣೆಗಾಗಿ ನಿಂತಿದ್ದರು ಎಂದು ಅವರು ಪ್ರತಿಪಾದಿಸಿದರು.
ಬೆಂಗಳೂರಿನ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಹಿಂದೂ ಪ್ರತಿನಿಧಿಗಳನ್ನು ಶಾಸಕರನ್ನಾಗಿ ಆಯ್ಕೆ ಮಾಡುವ ಕುರಿತು ಸವಾಲು ಹಾಕಿದರು. ಸಂತೋಷ್ ಅವರು ತಮ್ಮ ಭಾಷಣದಲ್ಲಿ ಪ್ರಿಯಾಂಕ್ ಖರ್ಗೆ ಕುಟುಂಬದ ಇತಿಹಾಸವನ್ನು ಪ್ರಸ್ತಾಪಿಸಿ, ಹೈದರಾಬಾದ್ ಸಂಸ್ಥಾನದ ನಿಜಾಮರ ಕಾಲದ ರಜಾಕರರ ದಾಳಿಯನ್ನು ನೆನಪಿಸಿದ್ದಾರೆ.
